HomeLatest Newsಐತಿಹಾಸಿಕ ಸಂಗನಕಲ್ಲು ಗುಡ್ಡಕ್ಕೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಚಾರಣ

ಐತಿಹಾಸಿಕ ಸಂಗನಕಲ್ಲು ಗುಡ್ಡಕ್ಕೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಚಾರಣ

ಬಳ್ಳಾರಿ: ಜಿಲ್ಲೆಯ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಮಹತ್ವ ಹೊಂದಿರುವ ಪ್ರಸಿದ್ಧ ಪ್ರವಾಸಿ ತಾಣವಾದ ಸಂಗನಕಲ್ಲಿನ ಹೀರೆಗುಡ್ಡಕ್ಕೆ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಅವರು ಗುರುವಾರ ಮುಂಜಾನೆ ಚಾರಣ ಮಾಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಗನಕಲ್ಲು ಬಳ್ಳಾರಿ ಜಿಲ್ಲೆಯ ಅತ್ಯಂತ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದಾಗಿದ್ದು, ಸಾವಿರಾರು ವರ್ಷಗಳಿಗೂ ಹೆಚ್ಚು ಹಿಂದೆ ಈ ಕಲ್ಲಿನ ಬೆಟ್ಟಗಳಲ್ಲಿ ವಾಸಿಸುತ್ತಿದ್ದ ನವಶಿಲಾಯುಗದ ಮಾನವರ ಜೀವನದ ಅಪೂರ್ವ ನೋಟಗಳನ್ನು ನೀಡುತ್ತದೆ. ಇದರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಹೇಳಿದರು.

ಹಿರೇಗುಡ್ಡದ ಮೇಲ್ಭಾಗದಲ್ಲಿರುವ ಅಪರೂಪದ ಶಿಲಾ ಕೆತ್ತನೆಗಳು ಮತ್ತು ರೇಖಾಚಿತ್ರಗಳನ್ನು ವೀಕ್ಷಿಸಲಾಗಿದೆ. ಇವುಗಳು ನವಶಿಲಾಯುಗದ ಕಾಲಕ್ಕೆ ಸೇರಿವೆ ಎಂದು ಗುರುತಿಸಲಾಗಿದ್ದು, ಇವುಗಳ ಐತಿಹಾಸಿಕ ಪ್ರಾಮುಖ್ಯತೆಯನ್ನು ಕಾಪಾಡುವುದು ಪ್ರಮುಖ ಆದ್ಯತೆಯಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ತಾಣವನ್ನು ಪ್ರವಾಸಿ ಸ್ನೇಹಿಯಾಗಿಸಲು ಮತ್ತು ಇಲ್ಲಿನ ಐತಿಹಾಸಿಕ ಪರಂಪರೆಯನ್ನು ಸಂರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ ಜಿಲ್ಲಾಧಿಕಾರಿಯವರು, ಇಲ್ಲಿ ನಡೆದಿರುವ ವೈಜ್ಞಾನಿಕ ಸಂಶೋಧನೆಗಳು ನಮ್ಮ ಪೂರ್ವಜರ ಜೀವನಶೈಲಿ ಮತ್ತು ಇತಿಹಾಸದ ಮೇಲೆ ಬೆಳಕು ಚೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾಡಳಿತದಿಂದ ಈ ಭೇಟಿಯು ಸಂಗನಕಲ್ಲು ಪ್ರದೇಶವು ಮುಂದಿನ ದಿನಗಳಲ್ಲಿ ಪ್ರಮುಖ ಪ್ರವಾಸಿ ಕೇಂದ್ರವಾಗಿ ಹೊರಹೊಮ್ಮಲು ಸಹಕಾರಿಯಾಗಲಿದೆ ಎಂಬ ನಿರೀಕ್ಷೆಯಿದೆ ಎಂದರು.

ಅಭಿವೃದ್ಧಿಯ ಹೆಸರಿನಲ್ಲಿ ಯಾವುದೇ ಕೃತಕ ವಸ್ತುಗಳನ್ನು ಬಳಸದೆ, ಈ ತಾಣದ ನೈಸರ್ಗಿಕ ಪರಿಸರವನ್ನು ಹಾಗೆಯೇ ಉಳಿಸಿಕೊಂಡು ಪ್ರವಾಸಿಗರಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗುವುದು. ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಮತ್ತು ಪ್ರವಾಸಿಗರ ಹಿತದೃಷ್ಟಿಯಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ತಾಣಕ್ಕೆ ತಲುಪಲು ಸುಸಜ್ಜಿತವಾದ ಕಾಲುದಾರಿ, ಮಾಹಿತಿ ಫಲಕಗಳು ಮತ್ತು ಅಗತ್ಯ ಮಾರ್ಗದರ್ಶನ ಸೌಲಭ್ಯಗಳನ್ನು ಒದಗಿಸಲು ಯೋಜಿಸಲಾಗುವುದು ಎಂದರು.

ಈ ತಾಣವು ಈ ಹಿಂದೆ ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಸ್ಥಳ ಪರಿಶೀಲನೆಯು ಅತ್ಯಂತ ಅರ್ಥಪೂರ್ಣವಾಗಿದ್ದು, ಈ ಪ್ರದೇಶವನ್ನು ಮುಂದಿನ ದಿನಗಳಲ್ಲಿ ಯಾವ ರೀತಿ ಅಭಿವೃದ್ಧಿಪಡಿಸಬೇಕು ಮತ್ತು ಪ್ರವಾಸಿಗರನ್ನು ಹೇಗೆ ಆಕರ್ಷಿಸಬೇಕು ಎಂಬ ಯೋಜನೆ ರೂಪಿಸುವುದರ ಕುರಿತು ಒಂದು ಸ್ಪಷ್ಟವಾದ ಚಿತ್ರಣ ದೊರೆತಿದೆ.

ಮೂಲಭೂತ ಸೌಕರ್ಯಗಳ ಸದ್ಬಳಕೆ ಮತ್ತು ಮುಂದಿನ ಅಭಿವೃದ್ಧಿ ಕಾರ್ಯಗಳ ಕುರಿತು ನೀಲಿನಕ್ಷೆ ಸಿದ್ಧಪಡಿಸಲಾಗುವುದು. ಈ ಕ್ರಮಗಳಿಂದಾಗಿ ಸ್ಥಳೀಯ ಪ್ರವಾಸೋದ್ಯಮಕ್ಕೆ ಹೆಚ್ಚಿನ ಬಲ ಸಿಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವಂತೆ ಹಾಗೂ ಇದಕ್ಕೆ ಅಗತ್ಯ ಸೌಲಭ್ಯ, ಸಹಕಾರ ಜಿಲ್ಲಾಡಳಿತದಿಂದ ಒದಗಿಸಲಾಗುವುದು ಎಂದು ಹೇಳಿದರು.

ಈ ಪ್ರದೇಶದಲ್ಲಿ ಸಂಶೋಧನೆ ನಡೆಸಿ ಇಲ್ಲಿನ ಐತಿಹಾಸಿಕ ಮಹತ್ವವನ್ನು ಪರಿಚಯಿಸಿದ ಇತಿಹಾಸ ತಜ್ಞ ಪ್ರೊ.ಕೋರಿಶೆಟ್ಟರ್, ಸದಸ್ಯ ಅಹಿರಾಜ್ ಮತ್ತು ಅವರ ತಂಡದ ಶ್ರಮವನ್ನು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರೀಸ್ ಸುಮೇರ್, ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್.ಎನ್., ಸಹಾಯಕ ಆಯುಕ್ತ ರಾಜೇಶ್ ಹೆಚ್.ಡಿ., ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ, ಸಿಬ್ಬಂದಿ ಶ್ರೀಹರಿ ಸೇರಿದಂತೆ ಮತ್ತಿತರರು ಇದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular