HomeKarnatakaBIG NEWS: ಸಂಡೂರು ಕಾಡಿನ ಎತ್ತರದ ಗುಹೆಗಳಲ್ಲಿ ಶಿಲಾಯುಗದ ಮಾನವನ ನೆಲೆಯ ಶೋಧ

BIG NEWS: ಸಂಡೂರು ಕಾಡಿನ ಎತ್ತರದ ಗುಹೆಗಳಲ್ಲಿ ಶಿಲಾಯುಗದ ಮಾನವನ ನೆಲೆಯ ಶೋಧ

ಬಳ್ಳಾರಿ: ಜಿಲ್ಲೆಯ ಸಂಡೂರಿನ ದಟ್ಟ ಕಾಡಿನಲ್ಲಿ ಸಮುದ್ರಮಟ್ಟಕ್ಕಿಂತ ಅತಿ ಎತ್ತರದ ಗುಹೆಗಳಲ್ಲಿ ಶಿಲಾಯುಗದ ಮಾನವನ ನೆಲೆಯ ಕುರಿತು ತಜ್ಞರ ಶೋಧನೆಯಿಂದ ಕಂಡುಬಂದಿದೆ ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

ಸಂಡೂರು ಪದರ ಶಿಲೆಯ ಪಟ್ಟಿಯ ದಟ್ಟ ಎಲೆಯುದುರುವ ಕಾಡಿನ 1,000 ಚ.ಕಿ.ಮೀ. ವ್ಯಾಪ್ತಿಯ ಪ್ರದೇಶದಲ್ಲಿ ಪ್ರಾಗೈತಿಹಾಸಿಕ ನೆಲೆಗಳನ್ನು ಹುಡುಕುವುದು ಒಂದು ದೊಡ್ಡ ಸವಾಲಾಗಿದ್ದು, ಸಂಡೂರು ಬೆಟ್ಟಗಳಲ್ಲಿರುವ ನವಲೂಟಿ ಗುಹೆಯಲ್ಲಿ ಒಂದು ಶೋಧನೆಯಲ್ಲಿ ದೊರೆತ ಶಿಲಾಯುಗದ ಮಾನವನ ಕುರುಹುಗಳಾದ ಸೂಕ್ಷ್ಮ ಶಿಲಾ ಆಯುಧಗಳು ಬಹುಶಃ 10 ಸಾವಿರ ವರ್ಷಗಳ ಹಿಂದೆ ಜೀವನಾಧಾರಕ್ಕೆ ಬೇಕಾದ ಸಂಪನ್ಮೂಲಗಳ ಹುಡುಕಾಟದಲ್ಲಿ ಶಿಲಾಯುಗದ ಮಾನವ ಬಂದಾಗಿನ ಕಾಲದ್ದಾಗಿರಬಹುದು ಎಂದು ಗುರುತಿಸಲಾಗಿದೆ.

ಬಳ್ಳಾರಿ ಹೆರಿಟೇಜ್ ಟ್ರಸ್ಟ್ ಹಾಗೂ ಬಳ್ಳಾರಿಯ ರಾಬರ್ಟ್ ಬ್ರೂಸ್ ಫೂಟ್ ಸಂಗನಕಲ್ಲು ಪ್ರಾಗೈತಿಹಾಸ ವಸ್ತು ಸಂಗ್ರಹಾಲಯದ ಸದಸ್ಯರು ಮತ್ತು ಖ್ಯಾತ ಪ್ರಾಗೈತಿಹಾಸ ತಜ್ಞರಾದ ಡಾ. ರವಿ ಕೋರಿಶೆಟ್ಟರ್, ಡಾ.ಸಮದ್ ಕೊಟ್ಟೂರು ಇವರ ಮಾರ್ಗದರ್ಶನದಲ್ಲಿ ಕಳೆದ ಜೂನ್ ಕೊನೆಯ ವಾರದಲ್ಲಿ ಶೋಧಯಾನ ಕೈಗೊಂಡು ನವಲೂಟಿಯ ಗುಹೆಗೆ ಭೇಟಿ ನೀಡಿದ್ದರು. ಈ ತಂಡದಲ್ಲಿ ಸಂತೋಷ್ ಮಾರ್ಟಿನ್, ಅಹಿರಾಜ್.ಎಂ ಹಾಗೂ ಕೆಲವು ಪ್ರಾಗೈತಿಹಾಸದ ವಿದ್ಯಾರ್ಥಿಗಳೂ ಭಾಗವಹಿಸಿದ್ದರು. ಈ ತಂಡಕ್ಕೆ ಶಿಲಾಯುಗದಲ್ಲಿ ನವಲೂಟಿ ಗುಹೆಯಲ್ಲಿ ಮಾನವ ನೆಲೆಸಿದ್ದ ಎಂಬುದಕ್ಕೆ ಅದ್ಭುತವಾದ ಪುರಾವೆಗಳು ದೊರಕಿವೆ ಎಂದು ಅವರು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇಲ್ಲಿ ದೊರೆತ ಕೆಲವು ಸೂಕ್ಷ್ಮ ಶಿಲಾ ಉಪಕರಣಗಳು ಈಗಾಗಲೇ ತಿಳಿದಿರುವ ಭಾರತದ ಮಧ್ಯಶಿಲಾಯುಗದ ಶಿಲಾ ಉಪಕರಣಗಳನ್ನು ಹೋಲುತ್ತಿದ್ದು, ದೊರೆತ ಮೂಳೆಗಳು ಸಾಕು ಪ್ರಾಣಿಗಳಾದ ದನ ಹಾಗೂ ಮೇಕೆಗಳದ್ದಾಗಿವೆ ಎಂದು ತಿಳಿದು ಬಂದಿದೆ. ಆದರೆ ಈ ನಿರ್ಧಾರ ತಾತ್ಕಾಲಿಕವಾಗಿದ್ದು, ದೊರೆತ ಸೂಕ್ಷ್ಮ ಶಿಲಾ ಉಪಕರಣಗಳ ನಿಖರವಾದ ಕಾಲವನ್ನು ಮತ್ತು ಅವುಗಳ ಹೆಚ್ಚಿನ ವಿವರವನ್ನು ಸುದೀರ್ಘ ವೈಜ್ಞಾನಿಕ ಸಂಶೋಧನೆಯಿಂದ ತಿಳಿಯಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಯವರು ಅಭಿಪ್ರಾಯಪಟ್ಟಿದ್ದಾರೆ.

19ನೇ ಶತಮಾನದ ಉತ್ತರಾರ್ಧದಿಂದ ಭೂವಿಜ್ಞಾನಿಗಳು ಹಾಗೂ ನಿಸರ್ಗ ಪ್ರೇಮಿಗಳು ಸಂಡೂರಿನ ಕಾಡುಗಳಲ್ಲಿ ಅನೇಕ ವಿಸ್ಮಯಗಳ ಶೋಧನೆಯಲ್ಲಿ ತೊಡಗಿದ್ದಾರೆ. ಅವರ ಶೋಧನಾ ಯಾನವು ಈ ಪ್ರದೇಶದ ಜೀವ ವೈವಿಧ್ಯತೆ ಹಾಗೂ ಭೂವೈಜ್ಞಾನಿಕ ಇತಿಹಾಸ ಹಾಗೂ ಆರ್ಥಿಕ ಸಂಭಾವ್ಯಗಳನ್ನು ಅನಾವರಣ ಮಾಡುವುದರಲ್ಲಿ ಕೇಂದ್ರೀಕರಿಸಿತ್ತು.

ಸಂಶೋಧನೆಗಳಿಂದಾಗಿ ಇಡೀ ದಕ್ಷಿಣ ಭಾರತದಲ್ಲೇ ಸಮುದ್ರ ಮಟ್ಟದಿಂದ ಅತಿ ಎತ್ತರದಲ್ಲಿ ದೊರೆತ ಆದಿಮಾನವನ ನೆಲೆ ಇದು ಎಂದು ತಿಳಿದುಬಂದಿದೆ. ಇಂತಹ ಗುಹೆಗಳು ಶ್ರೀಲಂಕಾದಲ್ಲಿ (ಸಮುದ್ರ ಮಟ್ಟಕ್ಕಿಂತ 450 ಮೀಟರ್ ಎತ್ತರ)ದಲ್ಲಿ ಕಂಡು ಬಂದಿದ್ದು, ಅವು 50,000 ವರ್ಷಗಳಷ್ಟು ಹಿಂದೆಯೇ ಆದಿಮಾನವನ ನೆಲೆಯಾಗಿದ್ದು, ಮಳೆಗಾಡುಗಳ ಪರಿಸರದಲ್ಲಿ ಮಾನವ ತನ್ನ ನೆಲೆಯನ್ನು ಸ್ಥಾಪಿಸಿದ ಜಾಣ್ಮೆಯನ್ನು ಸೂಚಿಸುತ್ತದೆ.

ಉತ್ತರ ಭಾರತದ ತೇವಭರಿತ ಕಾಡುಗಳ ಗುಹೆಗಳು ನವಶಿಲಾಯುಗದ ಕಾಲದಾಗಿದ್ದು, ನವಲೂಟಿ ಗುಹೆಗಳಿಗಿಂತ ಅವು ಅಷ್ಟೇನೂ ಎತ್ತರದವಲ್ಲದ (ಸಮುದ್ರ ಮಟ್ಟಕ್ಕಿಂತ 300 ಮೀಟರ್ ಎತ್ತರ) ಗುಹೆಗಳಾಗಿವೆ. ಆದಾಗ್ಯೂ, ದಕ್ಷಿಣ ಭಾರತದ ಈ ಗುಹೆ ಅತ್ಯಂತ ವಿಶಿಷ್ಟ ನೆಲೆಯಾಗಿದ್ದು, ಬಹುಶಾಸ್ತ್ರೀಯ ಸಂಶೋಧನೆ ಹಾಗೂ ರೇಡಿಯೋಮೆಟ್ರಿಕ್ ವಿಧಾನದಿಂದ ಕಾಲವನ್ನು ಪತ್ತೆ ಮಾಡುವಂತಹ ವೈಜ್ಞಾನಿಕ ಸಂಶೋಧನೆಯನ್ನು ಕೈಗೊಳ್ಳುವ ತುರ್ತು ಅವಶ್ಯಕತೆ ಇದೆ. ಈ ಸಂಶೋಧನೆ ಜಗತ್ತಿನ ಮುಂದಿನ ತಲೆಮಾರಿನ ಪ್ರಾಗೈತಿಹಾಸ ತಜ್ಞರನ್ನು ಇತ್ತ ಕಡೆ ಸೆಳೆಯಲಿದೆ. ಈ ಗುಹೆಯಿಂದ ಇಡೀ ವಿಶ್ವದ ಗಮನ ಬಳ್ಳಾರಿ ಜಿಲ್ಲೆಯ ಮೇಲೆ ಬೀಳಲಿದೆ.

ಕಳೆದ 25 ವರ್ಷಗಳ ಹಿಂದೆಯೇ ನವಲೂಟಿ ಗುಹೆಯಲ್ಲಿ ಆದಿಮಾನವನ ನೆಲೆಯ ಬಗ್ಗೆ ಅಂದಾಜು ಮಾಡಿದ್ದ ಡಾ.ಸಮದ್ ಕೊಟ್ಟೂರು ಅವರು ಪ್ರಾಗೈತಿಹಾಸ ತಜ್ಞರನ್ನು ಈ ಗುಹೆಗೆ ಕರೆದುಕೊಂಡು ಹೋಗುವ ಮೂಲಕ ಅದನ್ನು ದೃಢಪಡಿಸಿದ್ದಾರೆ. ಪ್ರಾಗೈತಿಹಾಸಜ್ಞ ಡಾ.ರವಿ ಕೋರಿಶೆಟ್ಟರ್ ಇವರ ನೇತೃತ್ವದಲ್ಲಿ ನವಲೂಟಿ ಗುಹೆಯ ಹೆಚ್ಚಿನ ಸಂಶೋಧನೆ ಮಾಡಲು ಸೂಕ್ತ ಸಹಯೋಗವನ್ನು ನೀಡಲು ಭಾರತೀಯ ಪುರಾತತ್ವ ಇಲಾಖೆಗೆ ಪತ್ರ ಬರೆಯಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular