ಗದಗ: ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಉತ್ಕನದ ನಿರ್ದೇಶಕ ಡಾ.ಟಿ.ಎಂ. ಕೇಶವ್(77) ಶುಕ್ರವಾರ ನಿಧನರಾಗಿದ್ದಾರೆ.
ಅನಾರೋಗ್ಯ ಕಾರಣ ಕೇಶವ್ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ಪುರಾತತ್ವ ಇಲಾಖೆಯ ನಿವೃತ್ತ ಅಧಿಕಾರಿಯಾಗಿದ್ದ ಕೇಶವ್ ಅವರು ಲಕ್ಕುಂಡಿ ಉತ್ಖನನ ಕಾರ್ಯದ ನಿರ್ದೇಶಕರಾಗಿದ್ದರು. ಅವರ ನೇತೃತ್ವದಲ್ಲಿ ಲಕ್ಕುಂಡಿ ಉತ್ಖನನ ಕಾರ್ಯ ಕೈಗೊಳ್ಳಲಾಗಿತ್ತು.
ಕೇಂದ್ರ ಪುರಾತತ್ವ ಇಲಾಖೆ ಅಧೀಕ್ಷಕರಾಗಿ ಕೇಶವ್ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ಅವರ ನಿಧನ ದೊಡ್ಡ ನೋವು ತಂದಿದೆ. ಜನವರಿ 31ರಂದು ಉತ್ಕನನ ಸ್ಥಳದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಗುವುದು ಎಂದು ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶರಣು ಗೋಗೇರಿ ತಿಳಿಸಿದ್ದಾರೆ.
ದೇಶದ ಪ್ರಮುಖ ಐತಿಹಾಸಿಕ ತಾಣಗಳ ಸಂಶೋಧನೆ, ಉತ್ಖನನ, ಸಂರಕ್ಷಣಾ ಕಾರ್ಯದಲ್ಲಿ ಕೇಶವ್ ಮಹತ್ವದ ಪಾತ್ರ ವಹಿಸಿದ್ದಾರೆ.

