ಬಿಜೆಪಿ ನಾಯಕ, ಕಾರ್ಕಳದ ಶಾಸಕ ವಿ.ಸುನಿಲ್ ಕುಮಾರ್ ಹಾಕಿದ್ದ ‘ಸಿಎಂ ಸಿದ್ದರಾಮಯ್ಯನವರ ಹಳಿ ತಪ್ಪಿದ ಆಡಳಿತದ ಕ್ಲಾಸಿಕ್ ಉದಾಹರಣೆ’ ಎಂಬ ಸಾಮಾಜಿಕ ಜಾಲತಾಣದ ಪೋಸ್ಟ್‌ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
‘ಒಂದೇ ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವಾಗಿಸುವ ಬಿಜೆಪಿಯ ಸುಳ್ಳಿನ ಫ್ಯಾಕ್ಟರಿಯ ಮತ್ತೊಂದು ವಿಫಲ ಹುನ್ನಾರವಿದು. ಸನ್ಮಾನ್ಯ ಸುನಿಲ್ ಕುಮಾರ್ ಅವರೇ, ದಿನಾಂಕವಿಲ್ಲದ, ರೆಫರೆನ್ಸ್ ಸಂಖ್ಯೆಯಿಲ್ಲದ ಒಂದು ನಕಲಿ ಪತ್ರವನ್ನು ಹಿಡಿದು ಜನರಲ್ಲಿ ಗೊಂದಲ ಸೃಷ್ಟಿಸಲು ಹೊರಟಿರುವ ನಿಮಗೆ ಕನಿಷ್ಠ ಜ್ಞಾನವೂ ಇಲ್ಲವೇ?’ ಎಂದು ಪ್ರಶ್ನೆ ಮಾಡಿದ್ದಾರೆ.
‘ಆರೋಗ್ಯ ಇಲಾಖೆಯ ಅಧಿಕಾರಿಯನ್ನು ಅಬಕಾರಿ ಇಲಾಖೆಗೆ ವರ್ಗಾಯಿಸಲು ನಮ್ಮ ನಿಯಮಗಳಲ್ಲಿ ಅವಕಾಶವೇ ಇಲ್ಲ ಎಂಬುದು ತಿಳಿಯದಷ್ಟು ಬೌದ್ಧಿಕ ದಿವಾಳಿತನವೇ?. ಈ ನಕಲಿ ಪತ್ರದ ಬಗ್ಗೆ ನಮ್ಮ ಮುಖ್ಯಮಂತ್ರಿ ಕಾರ್ಯಾಲಯದಿಂದ ಈಗಾಗಲೇ ದೂರು ದಾಖಲಿಸಲಾಗಿದೆ’ ಎಂದು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಕಾರ್ಕಳ ಸಮೀಪದ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿರುವ ‘ಪರಶುರಾಮ ಥೀಮ್ ಪಾರ್ಕ್’ ನಲ್ಲಿ ಅನಾಥವಾಗಿರುವ ಪರುಶುರಾಮ ಪ್ರತಿಮೆ ಬಗ್ಗೆ ನಿಜವಾಗಿ ನೀವು ವಿಚಾರಮಾಡಬೇಕಾದದ್ದು.
ಕಿಕ್ ಬ್ಯಾಕ್ ಅನುಮಾನ ಇರುವುದು ಪ್ರತಿಮೆ ನಿರ್ಮಾಣ ಕಾರ್ಯದಲ್ಲಿ, ಥೀಮ್ ಪಾರ್ಕ್ ನಿರ್ಮಾಣ ಯೋಜನೆಯಲ್ಲಿ. ದೊಡ್ಡ ಸಂಭ್ರಮದ ಕಾರ್ಯಕ್ರಮ ಮಾಡಿ ʼಕೊಡಲಿ ಹಿಡಿದ ಪರುಶುರಾಮʼನನ್ನೇ ಅತಂತ್ರ ಮಾಡಿದ ಮಹಾನುಭಾವರು ನೀವು ಎಂದು ಕಟುವಾಗಿ ಟೀಕಿಸಿದ್ದಾರೆ.
ಪರಶುರಾಮನ ಪಂಚೇಂದ್ರಿಯಕ್ಕೂ (ಪಂಚ ಅಂಗಕ್ಕೂ) ಅಪಚಾರ ಮಾಡಿದ ನಿಮ್ಮಿಂದ ನೈತಿಕತೆ, ಪಾರದರ್ಶಕ ಆಡಳಿತದ ಪಾಠ ಕಲಿಯಬೇಕಾದ ದಿವಾಳಿತನ ನಮ್ಮ ಸರ್ಕಾರಕ್ಕಾಗಲಿ, ಜನನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗಾಗಲಿ – ನನಗಾಗಲಿ ಇಲ್ಲ.
ಸಾರ್ವಜನಿಕರ ಹಣವನ್ನು ನುಂಗುವುದು ‘ಕ್ರಿಮಿನಲ್ ಅಫೆನ್ಸ್’ ಎಂದು ನ್ಯಾಯಾಧೀಶರೇ ಹೇಳಿರುವಾಗ ನಾಚಿಕೆ ಬಿಟ್ಟು ನಕಲಿ ದಾಖಲೆಗಳೊಂದಿಗೆ ತಿರುಗಾಡುತ್ತಿದ್ದೀರಿ. ನಮ್ಮ ಇಲಾಖೆ ಬಗ್ಗೆ ಸುಳ್ಳು ಹರಡುವ ಮೊದಲು, ನ್ಯಾಯಾಲಯದಲ್ಲಿ ನಿಮ್ಮ ಹಗರಣಗಳಿಗೆ ಉತ್ತರ ನೀಡಲು ಸಿದ್ಧರಾಗಿ. ಸತ್ಯದ ಕುಣಿಕೆಯಲ್ಲಿ ಬಿದ್ದಿರುವ ನಿಮ್ಮ ಸುಳ್ಳುಗಳ ಸರಮಾಲೆಯನ್ನು ಕಂಡು ರೇಜಿಗೆಯಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಕರ್ನಾಟಕದ ಇತಿಹಾಸದಲ್ಲೇ ಮೊದಲ ಬಾರಿಗೆ ವೈದ್ಯರು, ಶುಶ್ರೂಷಕರು ಸೇರಿದಂತೆ 5600ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಮಾಡಿ ಆಡಳಿತಕ್ಕೆ ಪಾರದರ್ಶಕತೆ ತಂದ ಹೆಗ್ಗಳಿಕೆ ನಮ್ಮದು.
ಈ ಜ್ವಲಂತ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರ ಇದೆಯಾ?
* ಸುನೀಲ್ ಕುಮಾರ್ ಅವ್ರೆ, ನೀವು ಇಂಧನ ಸಚಿವರಾಗಿದ್ದಾಗ ರಾಜ್ಯದಲ್ಲಿ ಎಷ್ಟು ಪ್ರಮಾಣದ ವಿದ್ಯುತ್ ಉದ್ಪಾದನೆ ಮಾಡಿದ್ರೀ?
* ಕೌನ್ಸಿಲಿಂಗ್ ಮೂಲಕ ಎಷ್ಟು ಸಿಬ್ಬಂದಿಗಳಿಗೆ ವರ್ಗಾವಣೆ ಆದೇಶ ಮಾಡಿದ್ರೀ?
* ಇಂಧನ ಇಲಾಖೆಯಲ್ಲಿ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ರೀ?
* ಕಾರ್ಕಳದ ಜನರು ಮತ ಕೊಟ್ಟು ಗೆಲ್ಲಿಸಿದ್ದಕ್ಕಾಗಿ ಋಣಭಾರ ಕಮ್ಮಿ ಮಾಡಿಕೊಳ್ಳುವುದಕ್ಕಾದರೂ ಉಡುಪಿ ಜಿಲ್ಲೆಗೆ ಎಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ?
ಇವುಗಳ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಿ. ಈ ರೀತಿ ನಿರಂತರವಾಗಿ ಆತ್ಮವಂಚನೆ ಮಾಡಿಕೊಂಡು, ನಂಬಿದವರಿಗೂ ವಂಚಿಸಿ ಜನರ ಮಧ್ಯೆ ಅದೇಗೇ ತಿರುಗಾಡುವಿರಿ? ಎಂದು ಸಚಿವರು ಪ್ರಶ್ನೆಮಾಡಿದ್ದಾರೆ.

