ಬೆಂಗಳೂರು: ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳು, ಸಂಯೋಜಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಜತೆಗೆ ಈ ಹಿಂದೆ ನೀಡುತ್ತಿದ್ದಂತೆ ಭೌತಿಕ ಅಂಕಪಟ್ಟಿ, ನೀಡಲು ಸರ್ಕಾರ ನಿರ್ಧರಿಸಿದೆ.
ಈ ಮೂಲಕ ವಿದ್ಯಾರ್ಥಿಗಳ ಬೇಡಿಕೆಗೆ ಸರ್ಕಾರ ಸ್ಪಂದಿಸಿದೆ. ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಸಾಮಾನ್ಯ ಸಭೆಯಲ್ಲಿ ವಿವಿಧ ವಿಶ್ವವಿದ್ಯಾಲಯಗಳ ಕುಲಪತಿಗಳು ಮತ್ತು ಅಧಿಕಾರಿಗಳ ಸಲಹೆ ಪಡೆದುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ. ಭೌತಿಕ ಅಂಕಪಟ್ಟಿ ನೀಡಲು ನೀಡುವುದನ್ನು ಪುನಃ ಆರಂಭಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಂದಿನ ಒಂದು ವಾರದೊಳಗೆ ವರದಿ ನೀಡಲು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಲಾಗಿದೆ.
ನಕಲಿ ಅಂಕಪಟ್ಟಿ ಹಾವಳಿ ತಡೆ, ಆರ್ಥಿಕ ಹೊರೆ ತಗ್ಗಿಸುವುದು ಮತ್ತು ಕಾಗದ ರಹಿತ ಕ್ರಮಕ್ಕಾಗಿ ಕೆಲವು ವರ್ಷಗಳಿಂದ ಭೌತಿಕ ಅಂಕಪಟ್ಟಿ ನೀಡುವುದನ್ನು ವಿವಿಗಳು ಮತ್ತು ಪದವಿ ಕಾಲೇಜುಗಳಲ್ಲಿ ಸರ್ಕಾರದ ಸೂಚನೆಯಂತೆ ನಿಲ್ಲಿಸಲಾಗಿದೆ. ಡಿಜಿಟಲ್ ಅಂಕಪಟ್ಟಿಯನ್ನು ವಿದ್ಯಾರ್ಥಿಗಳು ಡೌನ್ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಅಸಮಾಧಾನ ವ್ಯಕ್ತವಾಗಿತ್ತು. ಡಿಜಿಟಲ್ ಅಂಕಪಟ್ಟಿ ಜತೆಗೆ ಭೌತಿಕ ಅಥವಾ ಮುದ್ರಿತ ಅಂಕಪಟ್ಟಿ ನೀಡಬೇಕೆಂದು ಒತ್ತಾಯಿಸಲಾಗಿತ್ತು.
ಕೆಲವು ಕಂಪನಿಗಳಲ್ಲಿ ಡಿಜಿಟಲ್ ಅಂಕಪಟ್ಟಿ ಪರಿಗಣಿಸುತ್ತಿಲ್ಲ. ಭೌತಿಕ ಅಂಕಪಟ್ಟಿಯನ್ನು ವಿದೇಶಿ ವಿವಿಗಳು ಸೇರಿದಂತೆ ಕೆಲವು ಕಡೆ ಕೇಳುತ್ತಿದ್ದರಿಂದ ವಿದ್ಯಾರ್ಥಿಗಳು ಪೋಷಕರು ಭೌತಿಕ ಅಂಕಪಟ್ಟಿ ನೀಡಲು ಒತ್ತಾಯಿಸಿದ್ದರು. ಕೆಲವು ವಿವಿಗಳು ಭೌತಿಕ ಅಂಕಪಟ್ಟಿಗೆ ಅರ್ಜಿ ಸಲ್ಲಿಸಿದವರಿಗೆ ಮಾತ್ರ ನೀಡುತ್ತಿದ್ದವು. ಆದರೆ ಡಿಜಿಟಲ್ ಅಂಕಪಟ್ಟಿಯಲ್ಲಿ ವಿವಿ ಅಧಿಕಾರಿಗಳ ಸಹಿ ಇರುವುದಿಲ್ಲ. ಕೆಲವು ಅಕ್ರಮಗಳು ನಡೆಯುತ್ತಿವೆ ಎನ್ನುವ ಹಿನ್ನೆಲೆಯಲ್ಲಿ ಡಿಜಿಟಲ್ ಅಂಕಪಟ್ಟಿ ಜತೆಗೆ ಭದ್ರತಾ ವೈಶಿಷ್ಟ್ಯ ಒಳಗೊಂಡ ಭೌತಿಕ ಅಂಕಪಟ್ಟಿ ನೀಡಲಾಗುವುದು ಎನ್ನಲಾಗಿದೆ.
ಜವಾಹರ ನವೋದಯ ವಿದ್ಯಾಲಯದ ಪ್ರವೇಶಕ್ಕೆ ಅರ್ಜಿ ಆಹ್ವಾನ
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಬಾಗಲೂರಿನ ಪಿಎಂ ಶ್ರೀ ಜವಾಹರ ನವೋದಯ ವಿದ್ಯಾಲಯದಲ್ಲಿ 2027-28ನೇ ಶೈಕ್ಷಣಿಕ ಸಾಲಿನಲ್ಲಿ ಖಾಲಿ ಇರುವ 9 ಮತ್ತು 11ನೇ ತರಗತಿ ಸ್ಥಾನಗಳಿಗೆ ಲ್ಯಾಟರಲ್ ಎಂಟ್ರಿ ಸೆಲೆಕ್ಷನ್ ಟೆಸ್ಟ್ (LEST-2027) ಮೂಲಕ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
2026-27ನೇ ಸಾಲಿನಲ್ಲಿ ಬೆಂಗಳೂರು ನಗರ ಜಿಲ್ಲೆಯ ಶಾಲೆಗಳಲ್ಲಿ 8ನೇ ತರಗತಿ ಹಾಗೂ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು.
LEST-2027 ಪರೀಕ್ಷೆಯು 2027ರ ಏಪ್ರಿಲ್ 10ರಂದು ಶನಿವಾರ ನಡೆಯಲಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು 2026ರ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ.
ನವೋದಯ ವಿದ್ಯಾಲಯದ ಅಧಿಕೃತ ವೆಬ್ಸೈಟ್ ಅಥವಾ 9ನೇ ತರಗತಿಗೆ cbseitms.nic.in/2026/nvsix ಹಾಗೂ 11ನೇ ತರಗತಿಗೆ cbseitms.nic.in/2026/nvsxi_11 ವೆಬ್ಸೈಟ್ಗಳಿಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗಾಗಿ ವಿದ್ಯಾಲಯದ 9844478098, 7624831601, 080-29900456 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

