‘ಧುರಂಧರ್’ 2025ರಲ್ಲಿ ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿ ಮಾಡಿದ ಸಿನಿಮಾ. ಜನವರಿ 30ರಂದು ಚಿತ್ರ ನೆಟ್‌ಫಿಕ್ಸ್‌ನಲ್ಲಿಯೂ ಬಂದಿದ್ದು, ಮನೆಯಲ್ಲಿಯೇ ಕುಳಿತು ಚಿತ್ರವನ್ನು ಈಗ ವೀಕ್ಷಣೆ ಮಾಡಬಹುದು.
ಆದಿತ್ಯ ಧರ್ ನಿರ್ದೇಶನದ ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ 19 ದಿನಗಳಲ್ಲಿ 905 ಕೋಟಿ ರೂ. ಗಳಿಸಿತ್ತು. ಈ ಚಿತ್ರದ ಭಾರೀ ಯಶಸ್ಸಿನ ಬಳಿಕ ಧುರಂಧರ್-2 ಘೋಷಣೆ ಮಾಡಲಾಗಿತ್ತು. ‘ಧುರಂಧರ್’ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿಯೇ ಪಾರ್ಟ್-2 ಬರುತ್ತದೆ ಎಂದು ಮಾಹಿತಿ ನೀಡಲಾಗಿತ್ತು.
ಮಂಗಳವಾರ ನಿರ್ದೇಶಕ ಆದಿತ್ಯ ಧರ್ ‘ಧುರಂಧರ್-2’ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ. ಚಿತ್ರದ ಟೀಸರ್ ಇಂದು ಮಧ್ಯಾಹ್ನ 12.12ಕ್ಕೆ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ‘ಹಾಳಾಗುವ ಸಮಯ ಬಂದಿದೆ’ ಎಂದು ಅವರು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಧುರಂಧರ್-2 ಸಿನಿಮಾ DhurandharTheRevenge ಹೆಸರಿನಲ್ಲಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರ ಮಾರ್ಚ್ 19, 2026ರಂದು ಬಿಡುಗಡೆಯಾಗಲಿದೆ ಎಂದು ಘೋಷಣೆ ಮಾಡಲಾಗಿದೆ. ಇಂದು ಟೀಸರ್ ಬಿಡುಗಡೆಯಾಗುತ್ತಿದೆ.
ಧುರಂಧರ್-2 ಸಿನಿಮಾ ಹಿಂದಿ, ತೆಲಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಯಲ್ಲಿ ಬಿಡುಗಡೆಯಾಗಲಿದೆ. ಅದಕ್ಕಾಗಿ ಆದಿತ್ಯ ಧರ್ ಟೀಸರ್ ಬಿಡುಗಡೆ ಬಗ್ಗೆ ಎಲ್ಲಾ ಭಾಷೆಗಳಲ್ಲಿಯೂ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.
ಯಶ್‌ಗೆ ಪೈಪೋಟಿ; ಮಾರ್ಚ್ 19ರಂದು ರಾಕಿಂಗ್ ಸ್ಟಾರ್ ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಯಾಗುತ್ತಿದೆ. ಅಂದೇ ‘ಧುರಂಧರ್ 2’ ಚಿತ್ರ ಬಿಡುಗಡೆ ಮಾಡುವುದಾಗಿ ಘೋಷಣೆ ಮಾಡಲಾಗಿದೆ.
ಇದರಿಂದಾಗಿ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಪೈಪೋಟಿ ನಿರೀಕ್ಷೆ ಮಾಡಲಾಗಿದೆ. ‘ಧುರಂಧರ್ 2’ ಕನ್ನಡದಲ್ಲಿ ಬಿಡುಗಡೆ ಮಾಡುವ ಮೂಲಕ ‘ಟಾಕ್ಸಿಕ್’ ಚಿತ್ರದ ಮಾರುಕಟ್ಟೆಗೆ ಸವಾಲು ಹಾಕಲಾಗುತ್ತಿದೆ.
‘ಟಾಕ್ಸಿಕ್’ ಈಗಾಗಲೇ ಟೀಸರ್ ಮೂಲಕ ಸಂಚಲನ ಸೃಷ್ಟಿ ಮಾಡಿದೆ. ಈ ಹಿನ್ನಲೆಯಲ್ಲಿ ಮಂಗಳವಾರ ‘ಧುರಂಧರ್ 2’ ಚಿತ್ರದ ಟೀಸರ್ ಅನ್ನು ಸಹ ಕನ್ನಡದಲ್ಲಿ ಬಿಡುಗಡೆ ಮಾಡಲಾಗುತ್ತಿದೆ.
‘ಧುರಂಧರ್’ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಭಾರೀ ಕಲೆಕ್ಷನ್ ಮಾಡಿದೆ. ಚಿತ್ರದ ಬಗ್ಗೆ ಭಾರೀ ಪ್ರಚಾರ, ಮೆಚ್ಚುಗೆ ವ್ಯಕ್ತವಾಗಿದೆ. ಆದ್ದರಿಂದ ‘ಧುರಂಧರ್ 2’ ಮೇಲೆಯೂ ನಿರೀಕ್ಷೆ ಹೆಚ್ಚಿದೆ. ಆದ್ದರಿಂದ ಅದನ್ನು ಬಳಕೆ ಮಾಡಿಕೊಳ್ಳಲು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಬಿಡುಗಡೆ ಮಾಡಲಾಗುತ್ತಿದೆ.
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರ ಸಹ ಈಗಾಗಲೇ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. ಎರಡೂ ಸಿನಿಮಾಗಳಲ್ಲಿ ಯಾವುದು ಗೆಲ್ಲುತ್ತದೆ? ಎಂಬ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ‘ಟಾಕ್ಸಿಕ್’ ಚಿತ್ರಕ್ಕೆ ಸೆಡ್ಡು ಹೊಡೆಯಲು ‘ಧುರಂಧರ್’ ತಂಡ ದೊಡ್ಡ ತಂತ್ರವನ್ನು ರೂಪಿಸಿದೆ.
‘ಧುರಂಧರ್’ ಮೊದಲು ಚಿತ್ರಮಂದಿರದಲ್ಲಿ ಹಿಂದಿ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗಿತ್ತು. ಆದರೆ ಚಿತ್ರಕ್ಕ ಸಿಕ್ಕ ಪ್ರಚಾರದ ಕಾರಣ ಹಲವಾರು ಜನರು ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿದ್ದರು.
ಕೆಲವರು ಹಿಂದಿ ಬರುವುದಿಲ್ಲ ಎಂಬ ಕಾರಣದಿಂದಲೇ ಸಿನಿಮಾ ನೋಡಿರಲಿಲ್ಲ. ಆದರೆ ಚಿತ್ರತಂಡ ಒಟಿಟಿಗೆ ಸಿನಿಮಾ ಬಿಡುಗಡೆ ಮಾಡುವಾಗ ಹಿಂದಿ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ನೀಡಿತು.
ಈಗ ‘ಧುರಂಧರ್-2’ ಸಿನಿಮಾವನ್ನು ಪ್ಯಾನ್ ಇಂಡಿಯಾ ಗಮನದಲ್ಲಿಟ್ಟುಕೊಂಡು ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಯಶ್ ‘ಟಾಕ್ಸಿಕ್’ ಚಿತ್ರಕ್ಕೆ ಇದು ಪೈಪೋಟಿ ನೀಡಲಿದೆ ಎಂದು ನಿರೀಕ್ಷೆ ಮಾಡಲಾಗುತ್ತಿದೆ.

