ನವದೆಹಲಿ/ಮುಂಬೈ: ಬಾಕ್ಸ್ ಆಫೀಸ್ನಲ್ಲಿ 300 ಕೋಟಿ ರೂಪಾಯಿ ಗಳಿಸಿ ಮುನ್ನುಗ್ಗುತ್ತಿರುವ ರಣವೀರ್ ಸಿಂಗ್ ನಟನೆಯ ‘ಧುರಂಧರ್ 2’ (Dhurandhar: The Revenge) ಚಿತ್ರದ ವಿರುದ್ಧ ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ ಕಿಡಿಕಾರಿದ್ದಾರೆ. ಈ ಸಿನಿಮಾವನ್ನು “ಬ್ರೈನ್ ರಾಟ್” (Brain Rot – ಮೆದುಳು ಕೊಳೆಯುವ ಸಿನಿಮಾ) ಎಂದು ಕರೆದಿರುವ ಅವರು, ಇದು ಕನಿಷ್ಠ ಪಕ್ಷ ಸರಿಯಾಗಿ ತಯಾರಿಸಿದ ಪ್ರಚಾರದ ಚಿತ್ರವೂ ಅಲ್ಲ (Not even well-made propaganda) ಎಂದು ಲೇವಡಿ ಮಾಡಿದ್ದಾರೆ.
ಧ್ರುವ್ ರಾಠಿ ಹೇಳಿದ್ದೇನು? ಟ್ವಿಟರ್ನಲ್ಲಿ (X) ಸರಣಿ ಪೋಸ್ಟ್ ಮಾಡಿರುವ ಧ್ರುವ್ ರಾಠಿ, “ಮೂರು ತಿಂಗಳ ಹಿಂದೆಯೇ ನಾನು ಆದಿತ್ಯ ಧರ್ ಅವರನ್ನು ಬಿಜೆಪಿಯ ಪ್ರಚಾರಕ ಎಂದು ಕರೆದಿದ್ದೆ. ಹಿಂದಿನ ಚಿತ್ರದಲ್ಲಿ ಇದು ಸೂಕ್ಷ್ಮವಾಗಿತ್ತು, ಆದರೆ ಅತಿ ಆತ್ಮವಿಶ್ವಾಸದಿಂದ ಈ ಬಾರಿ ಅದನ್ನು ಬಹಿರಂಗವಾಗಿ ತೋರಿಸಿದ್ದಾರೆ. ಚೆನ್ನಾಗಿ ತಯಾರಿಸಿದ ಪ್ರಚಾರದ ಚಿತ್ರಗಳು ಹೆಚ್ಚು ಅಪಾಯಕಾರಿ ಎಂದು ನಾನು ಈ ಹಿಂದೆ ಹೇಳಿದ್ದೆ, ಆದರೆ ಈಗ ಈ ಸಿನಿಮಾ ಅಷ್ಟು ಚೆನ್ನಾಗಿಯೂ ಮೂಡಿಬಂದಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.
ಅಷ್ಟೇ ಅಲ್ಲದೆ, ತಮ್ಮ ಐಐ (AI) ಮಾಸ್ಟರ್ಕ್ಲಾಸ್ ಪ್ರಚಾರದ ವಿಡಿಯೋದಲ್ಲಿ, “ನಿಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು, 500 ರೂಪಾಯಿ ಖರ್ಚು ಮಾಡಿ ನಿಮ್ಮ 4 ಗಂಟೆಗಳನ್ನು ಈ ಪ್ರಚಾರದ ಚಿತ್ರ ನೋಡಿ ಹಾಳು ಮಾಡಿಕೊಳ್ಳುವುದು. ಇಲ್ಲವೇ 500 ರೂಪಾಯಿ ನೀಡಿ ನಿಮ್ಮ ಭವಿಷ್ಯಕ್ಕಾಗಿ ನನ್ನ ಮಾಸ್ಟರ್ಕ್ಲಾಸ್ ಅಟೆಂಡ್ ಮಾಡುವುದು. ಇದು ಮೆದುಳು ಕೊಳೆಯುವ ಸಿನಿಮಾ ಮತ್ತು ಮೆದುಳು ಬೆಳೆಸುವ ಕ್ಲಾಸ್ ನಡುವಿನ ಆಯ್ಕೆ” ಎಂದು ನೇರವಾಗಿ ಸಿನಿಮಾವನ್ನು ಟೀಕಿಸಿದ್ದಾರೆ.
ವಿವಾದಕ್ಕೆ ಕಾರಣವೇನು? ಕಳೆದ ವರ್ಷ ಬಿಡುಗಡೆಯಾದ ‘ಧುರಂಧರ್’ ಚಿತ್ರದ ಬಗ್ಗೆಯೂ ಧ್ರುವ್ ರಾಠಿ ‘ರಿಯಾಲಿಟಿ ಆಫ್ ಧುರಂಧರ್’ ಎಂಬ ವಿಡಿಯೋ ಮಾಡಿ ಅದು ಸುಳ್ಳುಗಳಿಂದ ಕೂಡಿದೆ ಎಂದು ಹೇಳಿದ್ದರು. “ಈ ಸಿನಿಮಾ ನೈಜ ಘಟನೆಗಳಿಂದ ಪ್ರೇರಿತ ಎಂದು ಹೇಳಿಕೊಳ್ಳುತ್ತದೆ, 26/11 ದಾಳಿಯ ನೈಜ ದೃಶ್ಯ ಮತ್ತು ಆಡಿಯೋ ಬಳಸುತ್ತದೆ. ಆದರೆ ಕಥೆಯಲ್ಲಿ ಸುಳ್ಳನ್ನು ಮಾರಾಟ ಮಾಡಲಾಗುತ್ತಿದೆ” ಎಂಬುದು ಅವರ ವಾದವಾಗಿದೆ.
ಧುರಂಧರ್ 2 ಬಗ್ಗೆ: ಮಾರ್ಚ್ 19 ರಂದು ಬಿಡುಗಡೆಯಾದ ಈ ಚಿತ್ರವು ಕರಾಚಿಯ ಅಂಡರ್ವರ್ಲ್ಡ್ ಮತ್ತು ಭಾರತದ ರಹಸ್ಯ ಕಾರ್ಯಾಚರಣೆಗಳ ಸುತ್ತ ಹೆಣೆಯಲಾದ ಕಥೆಯಾಗಿದೆ. ರಣವೀರ್ ಸಿಂಗ್ ಜೊತೆಗೆ ಆರ್. ಮಾಧವನ್, ಅರ್ಜುನ್ ರಾಂಪಾಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದರೂ, ಧ್ರುವ್ ರಾಠಿ ಅವರ ಈ ಹೇಳಿಕೆ ಈಗ ಪರ-ವಿರೋಧದ ಚರ್ಚೆಗೆ ನಾಂದಿ ಹಾಡಿದೆ.

