ಶಿವಮೊಗ್ಗ: ಧರ್ಮಸ್ಥಳದ ವಿವಿಧೆಡೆ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿ ರಾಜ್ಯದಲ್ಲಿ ಭಾರಿ ಚರ್ಚೆಗೆ ಕಾರಣನಾಗಿದ್ದ ಆರೋಪಿ ಬುರುಡೆ ಚಿನ್ನಯ್ಯ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾನೆ.
ಬುರುಡೆ ಚಿನ್ನಯ್ಯಗೆ ನವೆಂಬರ್ 24ರಂದು ಕೋರ್ಟ್ ಜಾಮೀನು ಮಂಜೂರು ಮಾಡಿತ್ತು. 1 ಲಕ್ಷ ಬಾಂಡ್, ಇಬ್ಬರ ಶ್ಯೂರಿಟಿಗೆ ಕೋರ್ಟ್ ಸೂಚನೆ ನೀಡಿತ್ತು. ಜಾಮೀನು ಷರತ್ತುಗಳನ್ನು ಪೂರೈಸದ ಕಾರಣಕ್ಕೆ ಇಷ್ಟು ದಿನಗಳ ಕಾಲ ಚಿನ್ನಯ್ಯಗೆ ಜೈಲಿನಿಂದ ಬಿಡುಗಡೆ ಸಾಧ್ಯವಾಗಿರಲಿಲ್ಲ. ಆದರೆ ಈಗ ಚಿನ್ನಯ್ಯ ಪತ್ನಿ ಜಾಮೀನು ಷರತ್ತುಗಳನ್ನು ಪೂರೈಸಿದ್ದು, ಜಾಮೀನು ಸಿಕ್ಕ 23 ದಿನಗಳ ಬಳಿಕ ಚಿನ್ನಯ್ಯ ಜೈಲಿನಿಂದ ಬಿಡುಗಡೆಯಾಗಿದ್ದಾನೆ.
ಬೆಳ್ತಂಗಡಿ ನ್ಯಾಯಾಲಯದಲ್ಲಿ ಚಿನ್ನಯ್ಯ ಪತ್ನಿ ಮಲ್ಲಿಕಾ ಶ್ಯೂರಿಟಿ ನೀಡಿದ್ದು, ಷರತ್ತು ಪೂರೈಸಿದ ಹಿನ್ನೆಲೆಯಲ್ಲಿ ಕೋರ್ಟ್ ಚಿನ್ನಯ್ಯ ಬಿಡುಗಡೆಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಶಿವಮೊಗ್ಗ ಜೈಲಿನಲ್ಲಿದ್ದ ಚಿನ್ನಯ್ಯ ಇಂದು ಬಿಡುಗಡೆಯಾಗಿದ್ದು, ಪತ್ನಿ ಮಲ್ಲಿಕಾ ಹಾಗೂ ಸಹೋದರನೊಂದಿಗೆ ಜೈಲಿನಿಂದ ಹೊರಗಡೆ ಬಂದಿದ್ದಾನೆ.

