ಸೂಪರ್ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ಹಾಗೂ ಅತ್ಯಂತ ಕುತೂಹಲ ಕೆರಳಿಸಿರುವ ‘ಧರ್ಮನ್’ ಚಿತ್ರದ ತಾರಾಗಣಕ್ಕೆ ಯುವ ನಟಿ ಶ್ರೀಲೀಲಾ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ನಟ ರಾಮ್ ಪೋತಿನೇನಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ಇತ್ತೀಚೆಗೆ ನಟಿ ರಾಶಿ ಖನ್ನಾ ಅವರು ಆಕಸ್ಮಿಕವಾಗಿ ಬಹಿರಂಗಪಡಿಸಿದ್ದರು. ಇದರ ಬೆನ್ನಲ್ಲೇ ಇದೀಗ ಶ್ರೀಲೀಲಾ ಅವರ ಅಭಿನಯವೂ ಖಚಿತಗೊಂಡಂತಾಗಿದೆ.
ಚಿತ್ರೀಕರಣ ನಡೆಯುತ್ತಿರುವ ಸ್ಥಳದಿಂದ ಹೊಸ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಶ್ರೀಲೀಲಾ ಅವರು ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳಲ್ಲಿ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಚಿತ್ರದಲ್ಲಿ ಅವರ ಪಾತ್ರ ಹೇಗಿರಲಿದೆ ಎಂಬ ವಿವರಗಳನ್ನು ಚಿತ್ರತಂಡ ಗೌಪ್ಯವಾಗಿಟ್ಟಿದೆ. ಆದರೆ, ‘ಸ್ಕಂದ’ ಸಿನಿಮಾದ ಯಶಸ್ಸಿನ ನಂತರ ಶ್ರೀಲೀಲಾ ಮತ್ತೊಮ್ಮೆ ರಾಮ್ ಪೋತಿನೇನಿ ಅವರಿಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಬಲವಾದ ವದಂತಿಗಳು ಫಿಲ್ಮ್ ನಗರಿಯಲ್ಲ ಹರಿದಾಡುತ್ತಿವೆ. ಈ ಬಗ್ಗೆ ನಿರ್ಮಾಣ ಸಂಸ್ಥೆಯಿಂದ ಅಧಿಕೃತ ಸ್ಪಷ್ಟನೆ ಬರಬೇಕಿದೆ.
ಮತ್ತೊಂದೆಡೆ, ಸಿನಿಮಾದ ನಿರ್ಮಾಣ ಕಾರ್ಯ ಶರವೇಗದಲ್ಲಿ ಸಾಗುತ್ತಿದ್ದು, ಪ್ರಮುಖ ಘಟ್ಟವಾದ ಮೂರನೇ ಹಂತದ (ಥರ್ಡ್ ಶೆಡ್ಯೂಲ್) ಚಿತ್ರೀಕರಣ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಚಿತ್ರತಂಡ ಘೋಷಿಸಿದೆ.
ಅಶ್ವಥ್ ಮಾರಿಮುತ್ತು ರಚನೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಉಲಗನಾಯಗನ್ ಕಮಲ್ ಹಾಸನ್ ಅವರ ನಿರ್ಮಾಣ ಸಂಸ್ಥೆಯಾದ ‘ರಾಜ್ ಕಮಲ್ ಫಿಲ್ಮ್ಸ್ ಇಂಟರ್ನ್ಯಾಷನಲ್’ ಹಾಗೂ ‘ಟರ್ಮೆರಿಕ್ ಮೀಡಿಯಾ’ ಜಂಟಿಯಾಗಿ ನಿರ್ಮಿಸುತ್ತಿವೆ. ದಕ್ಷಿಣ ಭಾರತದ ಖ್ಯಾತ ನಟಿ ಸಿಮ್ರಾನ್ ಮತ್ತು ಹಾಸ್ಯ ನಟ ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಯುವ ಸಂಗೀತ ಸಂವೇದನೆ ಅನಿರುದ್ಧ್ ರವಿಚಂದರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಸಿನಿಮಾ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

