ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಟ ಕಮ್ ನಿರ್ಮಾಪಕ ಡಾಲಿ ಧನಂಜಯ್ ನಟಿಸಿ, ಬಂಡವಾಳ ಹೂಡಿರುವ ‘ಮದರ್ ಪ್ರಾಮಿಸ್’ (Mother Promise) ಸಿನಿಮಾ ಕೆಲವೇ ದಿನಗಳ ಹಿಂದೆ ರಾಜ್ಯಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಇದೊಂದು ಅತ್ಯಂತ ನವಿರಾದ, ಸದಭಿರುಚಿಯ ಹಾಸ್ಯ ಪ್ರಧಾನ ಸಿನಿಮಾ ಎಂದು ಮನಸಾರೆ ಮೆಚ್ಚಿಕೊಳ್ಳುತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಶೋಗಳು ಕೂಡ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿನಿಗಾರರಿಂದ ಭರ್ಜರಿ ಪಾಸಿಟಿವ್ ರೆಸ್ಪಾನ್ಸ್ ಸಿಗುತ್ತಿದೆ. ಆದರೆ, ಇಷ್ಟೆಲ್ಲಾ ಒಳ್ಳೆಯ ಟಾಕ್ ಇರೋ ಸಿನಿಮಾದ ಬೆನ್ನಿಗೆ ಕೆಲವರು ಉದ್ದೇಶಪೂರ್ವಕವಾಗಿ ಚೂರಿ ಇರಿಯುವ ಕೆಲಸಕ್ಕೆ ಕೈಹಾಕಿದ್ದು, ಇದರ ವಿರುದ್ಧ ನಟ ಧನಂಜಯ್ ಭಾವುಕರಾಗಿಯೇ ತೀವ್ರ ಬೇಸರ ಮತ್ತು ಆಕ್ರೋಶ ಹೊರಹಾಕಿದ್ದಾರೆ.
ಸಿನಿಮಾದ ಪ್ರೀಮಿಯರ್ ಶೋ ಹಾಗೂ ಫಸ್ಟ್ ಡೇ ಫಸ್ಟ್ ಶೋ ನೋಡಿದ ಅಪ್ಪಟ ಪ್ರೇಕ್ಷಕರು ಚಿತ್ರದ ಬಗ್ಗೆ ಆಡಿರುವ ಒಳ್ಳೆಯ ಮಾತುಗಳ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಆದರೆ, ಇದರ ನಡುವೆಯೂ ಚಿತ್ರರಂಗದ ಕೆಲವು ದ್ವೇಷಪೂರಿತ ಮಂದಿ ಸಿನಿಮಾದ ವಿರುದ್ಧ ವ್ಯವಸ್ಥಿತವಾಗಿ ನೆಗೆಟಿವ್ ಪ್ರಚಾರ ಮಾಡುತ್ತಿದ್ದಾರೆ. ಕೆಲವರಂತೂ ಚಿತ್ರಮಂದಿರಗಳು ಖಾಲಿ ಇವೆ ಎಂದು ಸುಳ್ಳು ವಿಡಿಯೋಗಳನ್ನು ಹಂಚಿಕೊಂಡು ವಿಕೃತ ಆನಂದ ಪಡುತ್ತಿದ್ದರೆ, ಇನ್ನೂ ಕೆಲವರು ‘ಬುಕ್ ಮೈ ಶೋ’ (BookMyShow) ಆಪ್‌ನಲ್ಲಿ ಬೇಕಂತಲೇ ನೆಗೆಟಿವ್ ರಿವ್ಯೂ ಬರೆದು ರೇಟಿಂಗ್ಸ್ ಕೆಳಗೆ ಇಳಿಸುವ ನೀಚ ಬುದ್ಧಿ ಪ್ರದರ್ಶಿಸುತ್ತಿದ್ದಾರೆ.
ರೇಟಿಂಗ್ಸ್ ಬದಲಾಯಿಸಬಹುದು, ಜನರ ಪ್ರೀತಿಯನ್ನಲ್ಲ: ಡಾಲಿ ಖಡಕ್ ಪೋಸ್ಟ್
ಈ ಕೆಟ್ಟ ಟ್ರೆಂಡ್ ಹಾಗೂ ಕುತಂತ್ರದ ವಿರುದ್ಧ ನಟ ಡಾಲಿ ಧನಂಜಯ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಅಂಥವರಿಗೆ ಸರಿಯಾದ ಪೆಟ್ಟು ನೀಡಿದ್ದಾರೆ. “ಜನ ಸಿನಿಮಾ ನೋಡುವ ಮುಂಚೆಯೇ ಆ ಸಿನಿಮಾವನ್ನು ಇಲ್ಲದ ಹಾಗೆ ಮಾಡುವುದೇ ಕೆಲವರ ಮುಖ್ಯ ಗುರಿ ಆಗಿದೆ. ನೀವು ತಂತ್ರಜ್ಞಾನ ಬಳಸಿ ಬುಕ್ ಮೈ ಶೋನಲ್ಲಿ ರೇಟಿಂಗ್ಸ್ ಬೇಕಾದರೆ ಬದಲಾವಣೆ ಮಾಡಬಹುದು. ಆದರೆ ಥಿಯೇಟರ್‌ಗೆ ಬಂದು ಸಿನಿಮಾ ನೋಡಿ ಜನ ವ್ಯಕ್ತಪಡಿಸುತ್ತಿರುವ ಭಾವನೆಗಳನ್ನು, ಅವರ ಪ್ರೀತಿಯನ್ನು ಬದಲಾಯಿಸಲು ನಿಮ್ಮಿಂದ ಸಾಧ್ಯವಿಲ್ಲ” ಎಂದು ಧನಂಜಯ್ ಸಿಡಿಮಿಡಿಗೊಂಡಿದ್ದಾರೆ.
ಅಲ್ಲದೆ, “ಪ್ರತಿಯೊಬ್ಬರಿಗೂ ಅವರದ್ದೇ ಆದ ಸ್ವಂತ ಅಭಿಪ್ರಾಯ ಇರುತ್ತದೆ. ದಯವಿಟ್ಟು ಯಾರೋ ಹೇಳಿದ್ದನ್ನು ಕೇಳಿ ನಿರ್ಧಾರ ಮಾಡಬೇಡಿ. ಮೊದಲು ನೀವೇ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡಿ, ಆಮೇಲೆ ನಿಮ್ಮ ಅಭಿಪ್ರಾಯವನ್ನು ಸ್ವಂತವಾಗಿ ರೂಪಿಸಿಕೊಳ್ಳಿ” ಎಂದು ಡಾಲಿ ಮನವಿ ಮಾಡಿದ್ದಾರೆ.
ಚಿನ್ನದಂತಹ ಸಿನಿಮಾಗಳನ್ನು ಸಾಯಿಸುವ ಈ ಕೆಟ್ಟ ಸಂಸ್ಕೃತಿ ನಿಲ್ಲಬೇಕು
ವಿಮರ್ಶೆಗಳ ಬಗ್ಗೆ ಮುಕ್ತವಾಗಿ ಮಾತನಾಡಿದ ಧನಂಜಯ್, ನಮ್ಮ ಮದರ್ ಪ್ರಾಮಿಸ್ ಸಿನಿಮಾ ತುಂಬಾ ಜನರಿಗೆ ಇಷ್ಟ ಆಗ್ತಿದೆ. ಕೆಲವರಿಗೆ ಇಷ್ಟ ಆಗದೆ ಇರಬಹುದು, ಅದನ್ನ ನೇರವಾಗಿ ಹೇಳಿದರೆ ನಾವು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸುತ್ತೇವೆ, ಯಾಕಂದರೆ ಸಿನಿಮಾ ರಂಗದಲ್ಲಿ ವಿಮರ್ಶೆಗಳು ಸಾಮಾನ್ಯ. ಆದರೆ ಉದ್ದೇಶಪೂರ್ವಕವಾಗಿ, ಚೆನ್ನಾಗಿ ಪ್ರದರ್ಶನ ಕಾಣುತ್ತಿರೋ ಒಂದು ಸಿನಿಮಾನ ಸಾಯಿಸೋಕೆ ಇಂತಹ ದ್ವೇಷಪೂರಿತ ಪ್ರಯತ್ನ ಮಾಡೋದು ಇಡೀ ಚಿತ್ರರಂಗಕ್ಕೇ ಒಳ್ಳೆಯದಲ್ಲ. ಇದು ಇತ್ತೀಚೆಗೆ ಚೆನ್ನಾಗಿ ಓಡುವ ಎಲ್ಲಾ ಸಿನಿಮಾಗಳಿಗೂ ಆಗುತ್ತಾ ಇರೋ ದೊಡ್ಡ ದೊಡ್ಡ ಶಾಪ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೇ ಕಾರಣಕ್ಕೆ ಈಗ ಚಿತ್ರರಂಗದ ನಿರ್ಮಾಪಕರೆಲ್ಲಾ ನ್ಯಾಯಾಲಯದಿಂದ ಆದೇಶ ತಂದು ಬುಕ್ ಮೈ ಶೋನಲ್ಲಿ ರೇಟಿಂಗ್ಸ್ ಮತ್ತು ಕಮೆಂಟ್ಸ್ ವ್ಯವಸ್ಥೆಯನ್ನೇ ತೆಗೆದು ಹಾಕಿಸುತ್ತಿದ್ದಾರೆ. ಇದರಿಂದಾಗಿ ಪ್ರಾಮಾಣಿಕವಾಗಿ ವಿಮರ್ಶೆ ಬರೆಯುವವರಿಗೂ ತಡೆಯೊಡ್ಡಿದಂಗೆ ಆಗುತ್ತದೆ. ಚಿತ್ರರಂಗ ಉಳಿಯಬೇಕಾದರೆ ಒಂದು ಆರೋಗ್ಯಕರ ವ್ಯವಸ್ಥೆ ನಿರ್ಮಾಣ ಆಗಬೇಕು, ಸಿನಿಮಾಗಳನ್ನು ಟಾರ್ಗೆಟ್ ಮಾಡುವ ಈ ಕೆಟ್ಟ ಸಂಸ್ಕೃತಿ ತಕ್ಷಣ ನಿಲ್ಲಬೇಕು ಎಂದು ಧನಂಜಯ್ ಆಕ್ರೋಶ ಹೊರಹಾಕಿದ್ದಾರೆ. ಇಷ್ಟೆಲ್ಲಾ ನೆಗೆಟಿವಿಟಿ ನಡುವೆಯೂ ‘ಮದರ್ ಪ್ರಾಮಿಸ್’ ಸಿನಿಮಾ ಬುಕ್ ಮೈ ಶೋನಲ್ಲಿ ಸದ್ಯ ಭರ್ಜರಿ ಟ್ರೆಂಡಿಂಗ್‌ನಲ್ಲಿದ್ದು, ರೇಟಿಂಗ್ಸ್ ಕೂಡ ಧೂಳೆಬ್ಬಿಸುತ್ತಿದೆ ಎಂಬುದನ್ನು ಧನಂಜಯ್ ಸಾಕ್ಷಿ ಸಮೇತ ಶೇರ್ ಮಾಡಿದ್ದಾರೆ.
ಅಂದಹಾಗೆ, ಈ ಚಿತ್ರದಲ್ಲಿ ಡಾಲಿ ಧನಂಜಯ್ ಜೊತೆಗೆ ನಟ ನಾಗಭೂಷಣ್, ಹಿರಿಯ ನಟಿ ವಿನಯಪ್ರಸಾದ್, ಗೀತಾ, ಗುರುದತ್ ಸೇರಿದಂತೆ ಸ್ಯಾಂಡಲ್‌ವುಡ್‌ನ ಪ್ರಮುಖ ತಾರಾಗಣವೇ ನಟಿಸಿದೆ. ಈ ಸಿನಿಮಾ ಮೂಲಕ ಡಾಲಿ ಧನಂಜಯ ಅವರ ಆಪ್ತ ಸ್ನೇಹಿತರಾದ ಹರ್ಷ ಮುರುಂಡಿ ಶಿವಲಿಂಗಪ್ಪ ಅವರು ಅಧಿಕೃತವಾಗಿ ಸ್ಯಾಂಡಲ್‌ವುಡ್‌ಗೆ ನಿರ್ಮಾಪಕರಾಗಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಸೂಪರ್ ಹಿಟ್ ‘ಡೇರ್ ಡೆವಿಲ್ ಮುಸ್ತಾಫ’ ಸಿನಿಮಾ ಖ್ಯಾತಿಯ ಯುವ ನಿರ್ದೇಶಕ ಶಶಾಂಕ್ ಅವರು ಈ ಚಿತ್ರಕ್ಕೆ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದು, ರಾಹುಲ್ ರಾಯ್ ಅವರ ಛಾಯಾಗ್ರಹಣ ಹಾಗೂ ನವನೀತ್ ಶ್ಯಾಮ್ ಅವರ ಅದ್ಭುತ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಇಷ್ಟೊಂದು ಅದ್ಭುತ ತಂತ್ರಜ್ಞರು ಸೇರಿ ಮಾಡಿರುವ ಈ ನಗುವಿನ ಅಲೆಯ ಸಿನಿಮಾವನ್ನು ಚಿತ್ರಮಂದಿರದಲ್ಲೇ ನೋಡಿ ಬೆಂಬಲಿಸಿ ಎನ್ನುವುದು ಇಡೀ ಚಿತ್ರತಂಡದ ಆಶಯವಾಗಿದೆ.

