ತಮಿಳು ನಟಿ ತ್ರಿಷಾ ಕುರಿತು ಅವಹೇಳನಕಾರಿ ಹಾಗೂ ದ್ವಂದ್ವಾರ್ಥದ ಹೇಳಿಕೆ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಡಿಎಂಕೆ ಶಾಸಕ ಹಾಗೂ ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು ಬಂಧನದ ಸುಮಾರು ನಾಲ್ಕು ಗಂಟೆಗಳಲ್ಲೇ ಪೊಲೀಸ್ ವಶದಿಂದ ಬಿಡುಗಡೆ ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಉದಯನಿಧಿ ಸ್ಟಾಲಿನ್ ಅವರನ್ನು ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿತು. ಜೊತೆಗೆ, ತನಿಖೆಗೆ ಅಗತ್ಯವಿದ್ದಾಗಲೆಲ್ಲಾ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ನ್ಯಾಯಾಲಯ ಸೂಚಿಸಿದೆ.ನ್ಯಾಯಾಲಯದ ವಿಚಾರಣೆ ವೇಳೆ ತಂಜಾವೂರು ಪೊಲೀಸರ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್, ಉದಯನಿಧಿಯನ್ನು ತಂಜಾವೂರಿಗೆ ಕರೆದೊಯ್ಯಲಾಗಿದೆ. ಆದರೆ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಉದ್ದೇಶ ಸರ್ಕಾರಕ್ಕಿಲ್ಲ. ಕೇವಲ ವಿಚಾರಣೆ ನಡೆಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡುವ ಉದ್ದೇಶ ಮಾತ್ರ ಇದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಇದರ ಮಧ್ಯೆ, ಪೊಲೀಸರು ವಿಚಾರಣೆಗಾಗಿ ಚೆನ್ನೈನ ನೀಲಂಕರೈ ನಿವಾಸಕ್ಕೆ ಬಂದ ತಕ್ಷಣವೇ ಉದಯನಿಧಿ ಪರವಾಗಿ ನಿರೀಕ್ಷಣಾ ಜಾಮೀನು (Anticipatory Bail) ಅರ್ಜಿಯನ್ನೂ ಸಲ್ಲಿಸಲಾಗಿದೆ ಎಂದು ಡಿಎಂಕೆ ಮೂಲಗಳು ತಿಳಿಸಿವೆ.ಆದಾಗ್ಯೂ, ಬಳಿಕ ಪೊಲೀಸರು ಉದಯನಿಧಿ ಸ್ಟಾಲಿನ್ ಅವರನ್ನು ಅಧಿಕೃತವಾಗಿ ಬಂಧಿಸಿ ತಂಜಾವೂರಿಗೆ ಕರೆದೊಯ್ದು ವಿಚಾರಣೆ ನಡೆಸಿದರು.
ಬಂಧನಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಉದಯನಿಧಿ ಸ್ಟಾಲಿನ್, “ನಾನು ಮುಖ್ಯಮಂತ್ರಿ ವಿಜಯ್ ಅವರ ಹೆಸರನ್ನು ಹೊರತುಪಡಿಸಿ ಬೇರೆ ಯಾರ ಹೆಸರನ್ನಾದರೂ ಉಲ್ಲೇಖಿಸಿದ್ದೇನಾ? ಹಾಗಿದ್ದರೆ ಈ ಕ್ರಮ ಏಕೆ? ಇದರ ಬಗ್ಗೆ ನ್ಯಾಯಾಲಯವೇ ತೀರ್ಮಾನಿಸಲಿದೆ” ಎಂದು ಹೇಳಿದರು.ಪೊಲೀಸರು ಉದಯನಿಧಿ ವಿರುದ್ಧ ಒಂಬತ್ತು ವಿವಿಧ ಕಾನೂನು ಸೆಕ್ಷನ್ಗಳಡಿ ಪ್ರಕರಣ ದಾಖಲಿಸಿದ್ದಾರೆ. ಮಹಿಳೆಯ ಗೌರವಕ್ಕೆ ಧಕ್ಕೆ ತರುವುದು, ಅಶ್ಲೀಲ ಪದಗಳ ಬಳಕೆ, ದ್ವೇಷ ಪ್ರಚೋದನೆ, ಗಲಭೆಗೆ ಪ್ರೇರಣೆ, ಕ್ರಿಮಿನಲ್ ಬೆದರಿಕೆ ಸೇರಿದಂತೆ ಹಲವು ಆರೋಪಗಳನ್ನು ಹೊರಿಸಲಾಗಿದೆ. ಜೊತೆಗೆ ತಮಿಳುನಾಡು ಮಹಿಳೆಯರ ಮೇಲಿನ ಕಿರುಕುಳ ನಿಷೇಧ ಕಾಯ್ದೆ ಅಡಿಯಲ್ಲಿಯೂ ಪ್ರಕರಣ ದಾಖಲಿಸಲಾಗಿದೆ.
ಮುಖ್ಯಮಂತ್ರಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (TVK) ಈ ವಿಚಾರವನ್ನು ತೀವ್ರವಾಗಿ ಖಂಡಿಸಿ, ಸ್ಥಳೀಯ ಪೊಲೀಸ್ ಠಾಣೆ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗ (NCW)ಕ್ಕೆ ದೂರು ಸಲ್ಲಿಸಿದೆ.ತಂಜಾವೂರು ಪೂರ್ವ ಪೊಲೀಸ್ ಠಾಣೆಯಲ್ಲಿ TVK ಕೇಂದ್ರ ಜಿಲ್ಲಾ ಮಹಿಳಾ ಘಟಕದ ಸಂಘಟಕಿ ಎಸ್. ಬೈರವೀ ದೂರು ದಾಖಲಿಸಿದ್ದಾರೆ.
ಆಗಸ್ಟ್ 3ರಂದು ಕಾವೇರಿ ವಿಚಾರವಾಗಿ ನಡೆದ ಪ್ರತಿಭಟನಾ ಸಭೆಯಲ್ಲಿ ಜನರು “ತ್ರಿಷಾ, ತ್ರಿಷಾ” ಎಂದು ಘೋಷಣೆ ಕೂಗಿದಾಗ, ಉದಯನಿಧಿ ಸ್ಟಾಲಿನ್ ದ್ವಂದ್ವಾರ್ಥದ ಹಾಗೂ ಅಶ್ಲೀಲ ಹೇಳಿಕೆ ನೀಡಿದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.ಇದಲ್ಲದೆ, ಉದಯನಿಧಿ ಹಾಗೂ ಡಿಎಂಕೆ ಐಟಿ ಘಟಕದ ಪದಾಧಿಕಾರಿಗಳು ಮಹಿಳೆಯರನ್ನು ಅವಮಾನಿಸುವ ಉದ್ದೇಶದಿಂದ ನಡೆದುಕೊಂಡಿದ್ದಾರೆ. ನಟಿ ತ್ರಿಷಾ ಸೇರಿದಂತೆ ಮಹಿಳೆಯರಿಗೆ ಮಾನಸಿಕ ನೋವುಂಟುಮಾಡುವ ಉದ್ದೇಶದಿಂದ ಘಟನೆಯ 2 ನಿಮಿಷ 39 ಸೆಕೆಂಡುಗಳ ವಿಡಿಯೊವನ್ನು ಸಾಮಾಜಿಕ ಜಾಲತಾಣ Xನಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಉದಯನಿಧಿ ಸ್ಟಾಲಿನ್ ಬಂಧನವನ್ನು ಖಂಡಿಸಿ, ಡಿಎಂಕೆ ಕಾರ್ಯಕರ್ತರು ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ.

