HomeInternationalಅಂಚೆ ಪತ್ರಗಳ ವಿತರಣೆ ನಿಲ್ಲಿಸಿದ ವಿಶ್ವದ ಮೊದಲ ರಾಷ್ಟ್ರ ಡೆನ್ಮಾರ್ಕ್‌!

ಅಂಚೆ ಪತ್ರಗಳ ವಿತರಣೆ ನಿಲ್ಲಿಸಿದ ವಿಶ್ವದ ಮೊದಲ ರಾಷ್ಟ್ರ ಡೆನ್ಮಾರ್ಕ್‌!

ಸಾಮಾಜಿಕ ಜಾಲತಾಣಗಳು, ಆಧುನಿಕ ಸಂವಹನ ವ್ಯವಸ್ಥೆಗಳು ಬಂದ ಬಳಿಕ ಪತ್ರ ಬರೆಯುವುದು ಕಡಿಮೆಯಾಗುತ್ತಿದೆ. ಸರ್ಕಾರಿ ವ್ಯವಹಾರಗಳು ಸಹ ಈಗ ಆನ್‌ಲೈನ್ ಮೂಲಕ ನಡೆಯುತ್ತಿದ್ದು, ಪತ್ರ ಬರೆಯುವುದು ಬಹುತೇಕ ತೆರೆಮರೆಗೆ ಸರಿಯುತ್ತಿದೆ. ಇಂತಹ ಹೊತ್ತಿನಲ್ಲಿ ವಿಶ್ವದ ದೇಶವೊಂದು ಅಂಚೆ ಮೂಲಕ ಪತ್ರ ವಿತರಣೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ.

ಇನ್ನು ಮುಂದೆ ಅಂಚೆ ಇಲಾಖೆಯಲ್ಲಿ ಪತ್ರಗಳ ವಿತರಣೆ ಸೇವೆ ಇಲ್ಲ ಎಂದು ಡೆನ್ಮಾರ್ಕ್ ಘೋಷಣೆ ಮಾಡಿದೆ. ಹೀಗೆ ಘೋಷಣೆ ಮಾಡಿದ ವಿಶ್ವದ ಮೊದಲ ದೇಶ ಡೆನ್ಮಾರ್ಕ್. ಅಂಚೆ ಇಲಾಖೆ ಕಾರ್ಯ ನಿರ್ವಹಣೆ ಮಾಡಲಿದೆ. ಆದರೆ ಪತ್ರ ಸೇವೆ ಇರುವುದಿಲ್ಲ. 400 ವರ್ಷಗಳ ಅಂಚೆ ವ್ಯವಹಾರವನ್ನು ನಿಲ್ಲಿಸುತ್ತಿರುವುದಾಗಿ ಡೆನ್ಮಾರ್ಕ್ ಅಂಚೆ ಇಲಾಖೆ ಹೇಳಿದೆ. 25 ವರ್ಷಗಳ ಅವಧಿಯಲ್ಲಿ ಅಂಚೆ ಮೂಲಕ ಪತ್ರ ವ್ಯವಹಾರ ಶೇ 90ರಷ್ಟು ಇಳಿಕೆಯಾಗಿರುವ ಹಿನ್ನಲೆಯಲ್ಲಿ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಡೆನಾರ್ಕ್‌ನಲ್ಲಿ ಅಂಚೆ ಸೇವೆಯನ್ನು ಪೋಸ್ಟ್ ನಾರ್ಡ್ ಎಂಬ ಸಂಸ್ಥೆ ನಡೆಸುತ್ತಿತ್ತು. ಈಗ ಅಂಚೆ ಮೂಲಕ ಪತ್ರ ಸೇವೆಯನ್ನು ಸಂಪೂರ್ಣವಾಗಿ ನಿಲ್ಲಿಸಲಾಗುತ್ತಿದೆ ಎಂದು ಪೋಸ್ಟ್ ನಾರ್ಡ್‌ ಹೇಳಿದೆ. ದೇಶದ ಜನರು ಪತ್ರ ಬರೆಯುವುದನ್ನು ಬಿಟ್ಟುದ್ದು ದೇಶದ 1500 ಅಂಚೆ ಬಾಕ್ಸ್‌ಗಳಿ ಖಾಲಿಯಾಗಿಯೇ ಉಳಿದಿವೆ ಎಂದು ಪೋಸ್ಟ್‌ ನಾರ್ಡ್ ಹೇಳಿದೆ. ಡಿಜಿಟಲೀಕರಣದ ಪರಿಣಾಮ ಇಂತಹ ಸನ್ನಿವೇಶ ನಿರ್ಮಾಣವಾಗಿದೆ ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೋಸ್ಟ್‌ ನಾರ್ಡ್‌ ಮುಖ್ಯ ವಕ್ತಾರ ಇಸಾಬೆಲ್ಲಾ ಬೆಕ್ ಜಾರ್ಗೆನ್‌ಸೆನ್ ಮಾತನಾಡಿ, “ಕಳೆದ 25 ವರ್ಷಗಳಲ್ಲಿ ಪೋಸ್ಟ್ ಮಾಡುವ ಪತ್ರದ ಪ್ರಮಾಣ ಶೇ 90ರಷ್ಟು ಕಡಿಮೆಯಾಗಿದೆ. ಕಳೆದ 20 ವರ್ಷಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಹೆಚ್ಚಾಗಿದ್ದು, ಪತ್ರ ವ್ಯವಹಾರ ಕುಸಿದ ಹಿನ್ನಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಹೇಳಿದ್ದಾರೆ.

‘ಡೆನ್ಮಾರ್ಕ್ ತನ್ನ ಕೆಂಪು ಅಂಚೆ ಪೆಟ್ಟಿಗೆಗಳನ್ನು ಇತಿಹಾಸದ ಪುಟಕ್ಕೆ ಸೇರಿಸುವ ಮೂಲಕ ಸಂಪೂರ್ಣವಾಗಿ ಡಿಜಿಟಲ್ ಯುಗಕ್ಕೆ ತೆರೆದುಕೊಂಡಿದೆ. ಸುಮಾರು 401 ವರ್ಷಗಳ ಕಾಲ ದೇಶಕ್ಕೆ ಸೇವೆ ಸಲ್ಲಿಸಿದ್ದ ರಾಷ್ಟ್ರೀಯ ಪತ್ರ ವಿತರಣಾ ಸೇವೆಯನ್ನು ಡೆನ್ಮಾರ್ಕ್ ಅಧಿಕೃತವಾಗಿ ಸ್ಥಗಿತಗೊಳಿಸಲಿದೆ’ ಎಂದು ತಿಳಿಸಿದ್ದಾರೆ.

‘ಭೌತಿಕ ಪತ್ರಗಳು ಇನ್ನು ಮುಂದೆ ಅಗತ್ಯವಿಲ್ಲ ಅಥವಾ ಆರ್ಥಿಕವಾಗಿ ಲಾಭದಾಯಕವಲ್ಲ. ನಮ್ಮ ಬಹುಪಾಲು ಸಂವಹನ ಈಗ ಎಲೆಕ್ಟ್ರಾನಿಕ್ ರೂಪದಲ್ಲಿದೆ. ಆದ್ದರಿಂದ ಪತ್ರ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತಿದೆ” ಎಂದು ವಿವರಿಸಿದ್ದಾರೆ.

1912ರಲ್ಲಿ ಡೆನಾರ್ಕ್‌ನಲ್ಲಿ ಅಂಚೆ ಸೇವೆಯನ್ನು ಪ್ರಾರಂಭಿಸಲಾಗಿತ್ತು. ಅಂಚೆಗೆ ಇರುವ ಬೇಡಿಕೆ ಕಡಿಮೆಯಾದ ಕಾರಣ ರಾಷ್ಟ್ರದ ಹಲವು ಪೋಸ್ಟ್‌ ನಾರ್ಡ್‌ ಕಚೇರಿಗಳನ್ನು ಹೋಟೆಲ್‌ಗಳಾಗಿ ಬದಲಾವಣೆ ಮಾಡಲಾಗಿತ್ತು.

ಪೋಸ್ಟ್‌ ನಾರ್ಡ್‌ ತನ್ನ ಪಾರ್ಸೆಲ್ ವಿತರಣೆ ಸೇವೆಯನ್ನು ಮುಂದುವರೆಸಲಿದೆ. ಒಂದು ವೇಳೆ ಪತ್ರ ಬರೆಯಬೇಕು ಎಂದರೆ ಅವುಗಳನ್ನು ನಿಗದಿಗೊಳಿಸಿದ ಅಂಗಡಿಗಳ ಮುಂದಿನ ಗೂಡುಗಳಲ್ಲಿ ಹಾಕಬೇಕಿದೆ. ಇದನ್ನು ಖಾಸಗಿ ಕಂಪನಿಯಾದ ಡಿಎಒ ನಿಗದಿತ ಸ್ಥಳಕ್ಕೆ ಕಳಿಸುವ ಕಾರ್ಯ ಮಾಡಲಿದೆ.

ಮಾಹಿತಿಗಳ ಪ್ರಕಾರ 2000ದಲ್ಲಿ ಪೋಸ್ಟ್‌ ನಾರ್ಡ್‌ 1.5 ಬಿಲಿಯನ್ ಪತ್ರಗಳನ್ನು ವಿತರಣೆ ಮಾಡಿತ್ತು. 2024ರಲ್ಲಿ ಅದು 110 ಮಿಲಿಯನ್‌ ಆಗಿದೆ. ಪೋಸ್ಟ್‌ ನಾರ್ಡ್‌ ಈ ತೀರ್ಮಾನದಿಂದ ದೇಶದಲ್ಲಿ ಸುಮಾರು 1,500 ಉದ್ಯೋಗ ಕಡಿತವಾಗಲಿದೆ.

ಪತ್ರ ವಿತರಣೆ ನಿಂತರೂ ಡೆನ್ಮಾರ್ಕ್‌ನ ಅಂಚೆ ವ್ಯವಸ್ಥೆಯು ಸಂಪೂರ್ಣವಾಗಿ ಮುಚ್ಚಿಲ್ಲ. ಅದರ ಬದಲಾಗಿ, ಅದು ಹೊಸ ರೂಪವನ್ನು ಪಡೆದುಕೊಳ್ಳಲಿದೆ. ಆನ್‌ಲೈನ್ ಶಾಪಿಂಗ್ ಹೆಚ್ಚುತ್ತಿರುವ ಕಾರಣ, ಕಂಪನಿಯು ಈಗ ಲಾಭದಾಯಕವಾದ ಪಾರ್ಸೆಲ್ವಿತರಣಾ ಸೇವೆಯ ಮೇಲೆ ಮಾತ್ರ ಗಮನ ಹರಿಸಲಿದೆ.

ಇಡೀ ವಿಶ್ವವೇ ನಮ್ಮ ನಿರ್ಧಾರವನ್ನು ಗಮನಿಸುತ್ತಿದೆ. ಇತರ ದೇಶಗಳ ಅಂಚೆ ಸಂಸ್ಥೆಗಳು ನಮ್ಮ ಈ ನಿರ್ಧಾರವನ್ನು ಮಾದರಿಯಾಗಿ ನೋಡುತ್ತಿವೆ. ದೇಶದ ಜನರಲ್ಲಿ ಹೆಚ್ಚಿನವರು ಈ ಬದಲಾವಣೆಯನ್ನು ಒಪ್ಪಿಕೊಂಡಿದ್ದಾರೆ, ಏಕೆಂದರೆ ಅನೇಕರಿಗೆ ತಾವು ಕೊನೆಯದಾಗಿ ಯಾವಾಗ ಪತ್ರ ಬರೆದಿದ್ದೆವು ಎಂಬ ನೆನಪೇ ಇಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಆದರೆ, ಈ ಬದಲಾವಣೆ ಬಗ್ಗೆ ಕೆಲವು ಸ್ವಯಂಸೇವಾ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ. ಡಿಜಿಟಲ್ ವ್ಯವಸ್ಥೆಗೆ ಬದಲಾಗುವುದರಿಂದ ಹಿರಿಯ ನಾಗರಿಕರಿಗೆ ಕಷ್ಟವಾಗಲಿದೆ. ಆಸ್ಪತ್ರೆಯ ಭೇಟಿ, ಲಸಿಕೆ ಪಡೆಯುವ ದಿನಾಂಕ ಮಾಹಿತಿ ಮುಂತಾದವುಗಳಿಗೆ ಇಂದಿಗೂ ಅನೇಕರು ಭೌತಿಕ ಪತ್ರಗಳನ್ನೇ ಅವಲಂಬಿಸಿದ್ದಾರೆ ಎಂದು ತಿಳಿಸಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular