ಪಾಟ್ನಾ: ಸ್ಮಶಾನಕ್ಕೆ ಹೋಗುವ ರಸ್ತೆ ಅತಿಕ್ರಮಣ ಮಾಡಿದ್ದರಿಂದ ಸ್ಮಶಾನಕ್ಕೆ ಹೋಗಲು ಸಾಧ್ಯವಾಗದೆ 91 ವರ್ಷದ ದಲಿತ ಮಹಿಳೆ ಅಂತ್ಯಕ್ರಿಯೆಯನ್ನು ರಸ್ತೆ ನಡುವೆಯೇ ಕುಟುಂಬದವರು ನಡೆಸಿದ ಆಘಾತಕಾರಿ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.
ಸ್ಮಶಾನದ ರಸ್ತೆಯಲ್ಲಿ ತೆರಳದಂತೆ ಅತಿಕ್ರಮಣ ಮಾಡಿದವರು ತಡೆದಿದ್ದಾರೆ. ಇದರಿಂದಾಗಿ ರಸ್ತೆ ಮಧ್ಯದಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಗಿದೆ
ಸ್ಥಳೀಯ ಸ್ಮಶಾನಕ್ಕೆ ಪ್ರವೇಶಿಸದಂತೆ ತಡೆಯಲಾಗಿದೆ ಎಂಬ ಆರೋಪದ ಮೇಲೆ ಬಿಹಾರದ ವೈಶಾಲಿಯ ದಲಿತ ಗ್ರಾಮಸ್ಥರು ಸಾರ್ವಜನಿಕ ರಸ್ತೆಯ ಮಧ್ಯದಲ್ಲಿ 91 ವರ್ಷದ ವೃದ್ಧೆಯ ಚಿತೆಗೆ ಬೆಂಕಿ ಹಚ್ಚಿದ್ದಾರೆ. ಇದು ಉದ್ವಿಗ್ನತೆಗೆ ಕಾರಣವಾಗಿದೆ.
ಗೋರೌಲ್ ಪ್ರದೇಶದ ಸೊಂಧೋ-ವಾಶುಡೆಯೊ ಗ್ರಾಮದ ನಿವಾಸಿ ಝಪ್ಸಿ ದೇವಿಯ ಅಂತ್ಯಕ್ರಿಯೆ ಮೆರವಣಿಗೆ ಗುರುವಾರ ಸ್ಮಶಾನಕ್ಕೆ ತೆರಳುತ್ತಿದ್ದಾಗ ಕೆಲವು “ಪ್ರಭಾವಿ” ಗ್ರಾಮಸ್ಥರು ಅವರನ್ನು ತಡೆದಿದ್ದಾರೆ ಎಂದು ಗ್ರಾಮಸ್ಥರು ಮತ್ತು ಪೊಲೀಸರು ತಿಳಿಸಿದ್ದಾರೆ. ಇದರಿಂದ ಕೋಪಗೊಂಡ ಗ್ರಾಮಸ್ಥರು ಶವವನ್ನು ರಸ್ತೆಯ ಮಧ್ಯಕ್ಕೆ ಹೊತ್ತುಕೊಂಡು ಹೋಗಿ ಸಾರ್ವಜನಿಕರ ಸಮ್ಮುಖದಲ್ಲಿ ದಹನ ಮಾಡಿದ್ದಾರೆ.
ಮಹಿಳೆಯ ಮಗ ಸಂಜೀತ್ ಮಾಂಝಿ ಮಾತನಾಡಿ, ಝಪ್ಸಿ ಬುಧವಾರ ತಡರಾತ್ರಿ ನಿಧನರಾದರು. ನಮಗೆ ಅಂತ್ಯಕ್ರಿಯೆ ಸ್ಥಳಕ್ಕೆ ಹೋಗಲು ಅವಕಾಶ ನೀಡದಿದ್ದಾಗ, ಗ್ರಾಮಸ್ಥರು ಇಲ್ಲಿ ರಸ್ತೆಯಲ್ಲೇ ಅಂತ್ಯಕ್ರಿಯೆ ನಡೆಸಬೇಕೆಂದು ಹೇಳಿದರು ಎಂದು ತಿಳಿಸಿದ್ದಾರೆ.
ಗ್ರಾಮಸ್ಥ ಮೇವಾಲಾಲ್ ಮಾಂಝಿ ತೀವ್ರ ಹತಾಶೆ ವ್ಯಕ್ತಪಡಿಸಿ, ನಾವು ಬಡವರು, ಮನೆ ಇಲ್ಲ, ಭೂಮಿ ಇಲ್ಲ. ಈಗ, ನಮ್ಮ ಸತ್ತವರ ಶವಗಳನ್ನು ದಹನ ಮಾಡಲು ಸಹ ನಮಗೆ ಅವಕಾಶ ನೀಡುತ್ತಿಲ್ಲ ಎಂದು ದೂರಿದ್ದಾರೆ.

