ನವದೆಹಲಿ: ಮೆಟ್ರೋ ಸಿಬ್ಬಂದಿ ವಸತಿಗೃಹದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿ ಮೂವರು ಸಜೀವದಹನಗೊಂಡಿರುವ ಘಟನೆ ನವದೆಹಲಿಯ ಆದರ್ಶ ನಗರದಲ್ಲಿ ನಡೆದಿದೆ.
ದೆಹಲಿ ಮೆಟ್ರೋ ಸಿಬ್ಬಂದಿಗಳ ವಸತಿಗೃಹದಲ್ಲಿ ಈ ದುರಂತ ಸಂಭವಿಸಿದೆ. ಪತಿ-ಪತ್ನಿ ಹಾಗೂ ಮಗಳು ಮೂವರು ಸಜೀವವಾಗಿ ದಹನಗೊಂಡಿದ್ದಾರೆ. ಮೂವರು ಸಂಪೂರ್ಣ ಸುಟ್ಟು ಕರಕಲಾಗಿದ್ದಾರೆ.
ಇಂದು ಬೆಳಗಿನಜಾವ 2:30ರ ಸುಮಾರಿಗೆ ಡಿಎಂ ಆರ್ ಸಿ ಕ್ವಾರ್ಟರ್ಸ್ ನಲ್ಲಿ ಗೃಹೋಪಯೋಗಿ ವಸ್ತುವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿತ್ತು. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹೋಗಿ ನೋಡಿದಾಗ ವಸತಿಗೃಹದ 5ನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಘಟನಾ ಸ್ಥಳಕ್ಕಾಗಮಿಸಿ ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸುವಷ್ಟರಲ್ಲಿ ಮೂವರೂ ಸುಟ್ಟು ಕರಕಲಾಗಿದ್ದರು.
ಅಜಯ್ (42) ನೀಲಂ (38) ಹಾಗೂ ಮಗಳು ಜಾನ್ಹವಿ (10) ಮೃತ ದುರ್ದೈವಿಗಳು. ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

