ಬೆಂಗಳೂರು: ನೀವು ಬಾಲಿಯ ಸುಂದರ ಸಮುದ್ರ ತೀರದಲ್ಲಿ ಎಳನೀರು ಕುಡಿಯುತ್ತಾ ಕಾಲ ಕಳೆಯುವ ಕನಸು ಕಾಣುತ್ತಿದ್ದೀರಾ? ಹಾಗಿದ್ದರೆ ಈ ಸುದ್ದಿ ನಿಮಗಾಗಿ. 2026 ರಿಂದ ಬಾಲಿಗೆ ಕಾಲಿಡಬೇಕಾದರೆ ಕೇವಲ ಪ್ರವಾಸದ ಉತ್ಸಾಹವಿದ್ದರೆ ಸಾಲದು, ನಿಮ್ಮ ಜೇಬು ಕೂಡ ಗಟ್ಟಿಯಾಗಿರಬೇಕು ದ್ವೀಪ ರಾಷ್ಟ್ರದ ಸರ್ಕಾರವು ಪ್ರವಾಸಿಗರಿಗೆ ‘ಫಂಡ್ ಪ್ರೂಫ್’ (Proof of Funds) ನಿಯಮವನ್ನು ಕಡ್ಡಾಯಗೊಳಿಸಲು ಸಜ್ಜಾಗಿದೆ.
ಏನಿದು ಹೊಸ ರೂಲ್ಸ್?
ಬಾಲಿ ಗವರ್ನರ್ ವಾಯನ್ ಕೋಸ್ಟರ್ ಅವರ ಮಹತ್ವಾಕಾಂಕ್ಷೆಯ ಈ ಯೋಜನೆಯಡಿ, ಇನ್ನು ಮುಂದೆ ಕೇವಲ ವೀಸಾ ಮತ್ತು ಪಾಸ್‌ಪೋರ್ಟ್ ಇದ್ದರೆ ಸಾಲದು. ವಿಮಾನ ನಿಲ್ದಾಣಕ್ಕೆ ಇಳಿದ ತಕ್ಷಣ ಅಧಿಕಾರಿಗಳು ನಿಮ್ಮನ್ನು ಈ ದಾಖಲೆಗಳಿಗಾಗಿ ಕೇಳಬಹುದು:
3 ತಿಂಗಳ ಬ್ಯಾಂಕ್ ಸ್ಟೇಟ್‌ಮೆಂಟ್: ಕಳೆದ ಮೂರು ತಿಂಗಳ ನಿಮ್ಮ ಖಾತೆಯ ವಹಿವಾಟಿನ ವಿವರ ಸಲ್ಲಿಸಬೇಕು.
ಪ್ರವಾಸದ ಕಂಪ್ಲೀಟ್ ಪ್ಲಾನ್ (Itinerary): ನೀವು ಅಲ್ಲಿ ಎಷ್ಟು ದಿನ ಇರುತ್ತೀರಿ ಮತ್ತು ಯಾವೆಲ್ಲಾ ಸ್ಥಳಗಳಿಗೆ ಭೇಟಿ ನೀಡುತ್ತೀರಿ ಎಂಬ ಸ್ಪಷ್ಟ ಮಾಹಿತಿ ಇರಬೇಕು.
ಕನ್ಫರ್ಮ್ ರಿಟರ್ನ್ ಟಿಕೆಟ್: ದೇಶಕ್ಕೆ ವಾಪಸ್ ಹೋಗುವ ಟಿಕೆಟ್ ಇಲ್ಲದಿದ್ದರೆ ಪ್ರವೇಶ ನಿರಾಕರಣೆ ಸಾಧ್ಯತೆ ಇದೆ.
ಬಾಲಿ ಸರ್ಕಾರ ಇಷ್ಟು ಕಠಿಣವಾಗಿದ್ದು ಯಾಕೆ?
ಕೇವಲ ಸಂಖ್ಯೆಗಿಂತ ‘ಕ್ವಾಲಿಟಿ ಟೂರಿಸಂ’ ಅಥವಾ ಗುಣಮಟ್ಟದ ಪ್ರವಾಸೋದ್ಯಮಕ್ಕೆ ಬಾಲಿ ಈಗ ಆದ್ಯತೆ ನೀಡುತ್ತಿದೆ. ಇದಕ್ಕೆ ಮುಖ್ಯ ಕಾರಣಗಳು ಇಲ್ಲಿವೆ:
ಅಸಭ್ಯ ವರ್ತನೆಗೆ ಬ್ರೇಕ್: ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಪ್ರವಾಸಿಗರು ಸ್ಥಳೀಯ ಸಂಸ್ಕೃತಿಯನ್ನು ಗೌರವಿಸದೆ ಇರುವುದು ಮತ್ತು ಅಕ್ರಮ ಚಟುವಟಿಕೆಗಳಲ್ಲಿ ತೊಡಗುತ್ತಿರುವುದು ಹೆಚ್ಚಾಗಿದೆ. ಕಳೆದ ತಿಂಗಳಷ್ಟೇ ವೀಸಾ ನಿಯಮ ಮೀರಿ ಅಶ್ಲೀಲ ಚಿತ್ರೀಕರಣಕ್ಕೆ ಮುಂದಾಗಿದ್ದ ವಿದೇಶಿ ಪ್ರವಾಸಿಗರನ್ನು ಗಡಿಪಾರು ಮಾಡಲಾಗಿತ್ತು.
ಓವರ್ ಟೂರಿಸಂ ಆತಂಕ: 2025 ರಲ್ಲಿ ಬಾಲಿಗೆ ಬರೋಬ್ಬರಿ 70 ಲಕ್ಷಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇದರಿಂದ ಮೂಲಸೌಕರ್ಯ, ಟ್ರಾಫಿಕ್ ಮತ್ತು ತ್ಯಾಜ್ಯ ನಿರ್ವಹಣೆ ದ್ವೀಪ ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.
ಆರ್ಥಿಕ ಭದ್ರತೆ: ಪ್ರವಾಸಿಗರು ಬಾಲಿಗೆ ಬಂದ ಮೇಲೆ ಹಣದ ಕೊರತೆಯಿಂದ ಕಷ್ಟಪಡಬಾರದು ಮತ್ತು ಸ್ಥಳೀಯ ಆರ್ಥಿಕತೆಗೆ ಕೊಡುಗೆ ನೀಡುವ ಪ್ರವಾಸಿಗರನ್ನೇ ಆಕರ್ಷಿಸುವುದು ಸರ್ಕಾರದ ಪ್ಲಾನ್.
ಭಾರತೀಯ ಪ್ರವಾಸಿಗರ ಗಮನಕ್ಕೆ
2025 ರಲ್ಲಿ ಭಾರತದಿಂದ ಬಾಲಿಗೆ ಹೋಗುವವರ ಸಂಖ್ಯೆಯಲ್ಲಿ ಶೇ. 37 ರಷ್ಟು ಭಾರಿ ಏರಿಕೆಯಾಗಿದೆ. ಹೊಸ ನಿಯಮದ ಪ್ರಕಾರ, ನೀವು ಬಾಲಿಯಲ್ಲಿ ಎಷ್ಟು ದಿನ ಕಳೆಯುತ್ತೀರಿ ಎಂಬ ಆಧಾರದ ಮೇಲೆ ಅಧಿಕಾರಿಗಳು ಕನಿಷ್ಠ ಹಣದ ಮಿತಿಯನ್ನು ಸ್ಥಳದಲ್ಲೇ ನಿರ್ಧರಿಸುತ್ತಾರೆ. ಹೀಗಾಗಿ, ಬ್ಯಾಂಕ್ ಸ್ಟೇಟ್‌ಮೆಂಟ್ ಇಲ್ಲದೆ ಹೋದರೆ ವೀಸಾ ಇದ್ದರೂ ವಿಮಾನ ನಿಲ್ದಾಣದಿಂದಲೇ ವಾಪಸ್ ಕಳುಹಿಸುವ ಸಾಧ್ಯತೆ ಇರುತ್ತದೆ.

