HomeIndiaBREAKING: ದೆಹಲಿಯಲ್ಲಿ ಕಟ್ಟಡ ಕುಸಿತ ಪ್ರಕರಣ: ಪಿಜಿ ಮಾಲೀಕ ಅರೆಸ್ಟ್; ಐವರು ಅಧಿಕಾರಿಗಳು ಸಸ್ಪೆಂಡ್

BREAKING: ದೆಹಲಿಯಲ್ಲಿ ಕಟ್ಟಡ ಕುಸಿತ ಪ್ರಕರಣ: ಪಿಜಿ ಮಾಲೀಕ ಅರೆಸ್ಟ್; ಐವರು ಅಧಿಕಾರಿಗಳು ಸಸ್ಪೆಂಡ್

ನವದೆಹಲಿ: ದೆಹಲಿಯ ಸತ್ಯನಿಕೇತನ ಪ್ರದೇಶದಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಪಿಜಿ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಐದು ಅಂತಸ್ತಿನ ಹಳೆಯ ಪೇಯಿಂಗ್ ಗೆಸ್ಟ್‌ ಕಟ್ಟಡ ಏಕಾಏಕಿ ಕುಸಿದ ಪರಿಣಾಮ ಹಲವರು ಅವಶೇಷಗಳಡಿ ಸಿಲುಕಿದ್ದರು.

ಕಟ್ಟಡ ಕುಸಿತದಲ್ಲಿ 7 ಜನರು ಮೃತಪಟ್ಟಿದ್ದಾರೆ. 13 ಜನರನ್ನು ರಕ್ಷಿಸಲಾಗಿದ್ದು, ಗಾಯಾಳುಗಳನ್ನು ದೆಹಲಿಯ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ನಡುವೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ಮುಕ್ತಾಯಗೊಳಿಸಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಪಿಜಿ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡದ ಮಾಲೀಕ ಹರಿರಾಮ್ ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹರಿರಾಮ್ ನನ್ನು ರಾಜಸ್ಥಾನದಲ್ಲಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಇಂದು ಮುಖ್ಯಮಂತ್ರಿ ರೇಖಾ ಗುಪ್ತಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ದುರಂತದ ಬಗ್ಗೆ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಪ್ರಕರಣ ಸಂಬಂಧ ದೆಹಲಿ ಪುರಸಭೆ ನಿಗಮದ ಐವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಹಳೆಯ ಕಟ್ಟಡಗಳ ಬಗ್ಗೆ ಪರಿಶೀಲನೆ ನಡೆಸದೇ ಕರ್ತವ್ಯಲೋಪವೆಸಗಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ದೆಹಲಿ ವಿವಿಯ ಸೌತ್ ಕ್ಯಾಂಪಸ್‌ನ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಪ್ರಮುಖ ವಸತಿ ಪ್ರದೇಶವಾಗಿರುವ ಸತ್ಯನಿಕೇತನದ ಕಿರಿದಾದ ರಸ್ತೆಯೊಂದರಲ್ಲಿ ಸುಮಾರು 30 ವರ್ಷ ಹಳೆಯ ಕಟ್ಟಡವಿತ್ತು. ಈ ಐದು ಅಂತಸ್ತಿನ ಕಟ್ಟಡದಲ್ಲಿ ಸುಮಾರು 15 ಕೊಠಡಿಗಳಿದ್ದು, ಪ್ರತಿ ಕೊಠಡಿಯಲ್ಲಿ ಇಬ್ಬರಿಂದ ಮೂವರು ವಿದ್ಯಾರ್ಥಿಗಳು ವಾಸಿಸುತ್ತಿದ್ದರು ಎನ್ನಲಾಗಿದೆ. ಭಾನುವಾರ ಮಧ್ಯಾಹ್ನ ಕಟ್ಟಡ ಏಕಾಏಕಿ ಕುಸಿದು ದುರಂತ ಸಂಭವಿಸಿದೆ.

ದೆಹಲಿ ಪೊಲೀಸ್ ಸಿಬ್ಬಂದಿ ರಾಜನ್ ಛೇತ್ರಿ ಅವರ ಪ್ರಕಾರ, ವಿದ್ಯಾರ್ಥಿಗಳಿಂದ ಪ್ರತಿ ಹಾಸಿಗೆಗೆ ತಿಂಗಳಿಗೆ ಸುಮಾರು ₹12 ಸಾವಿರದವರೆಗೆ ಬಾಡಿಗೆ ಪಡೆಯಲಾಗುತ್ತಿತ್ತು. ಕೇರಳ, ಹರಿಯಾಣ ಹಾಗೂ ಉತ್ತರ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದ ವಿದ್ಯಾರ್ಥಿಗಳು ದೆಹಲಿ ವಿಶ್ವವಿದ್ಯಾಲಯದ ಮೋತಿಲಾಲ್ ನೆಹರು ಕಾಲೇಜು, ಆತ್ಮಾರಾಮ ಸನಾತನ ಧರ್ಮ (ARSD) ಕಾಲೇಜು ಹಾಗೂ ಶ್ರೀ ವೆಂಕಟೇಶ್ವರ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಕಳೆದ 20–22 ವರ್ಷಗಳಿಂದ ಸತ್ಯನಿಕೇತನದಲ್ಲಿ ವಾಸಿಸುತ್ತಿರುವ ಸ್ಥಳೀಯ ನಿವಾಸಿ ಪ್ರಿಯಾಂಕಾ, ಪ್ರದೇಶದಲ್ಲಿ ಐದರಿಂದ ಆರು ಅಂತಸ್ತಿನ ಕಟ್ಟಡಗಳನ್ನು ನಿರ್ವಹಣೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ಸೂಕ್ತ ಗಮನವಿಲ್ಲದೆ ಬಳಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಮನೆ ಮಾಲೀಕರು ಕಟ್ಟಡಗಳಿಗೆ ಪಿಜಿ ಎಂಬ ಫಲಕ ಹಾಕಿ ವಿದ್ಯಾರ್ಥಿಗಳಿಗೆ ಕೊಠಡಿಗಳನ್ನು ಬಾಡಿಗೆಗೆ ನೀಡುತ್ತಾರೆ. ಬಳಿಕ ಬೇರೆ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಪ್ರತಿ ತಿಂಗಳು ಆನ್‌ಲೈನ್ ಮೂಲಕ ಬಾಡಿಗೆ ಪಡೆಯುವುದಕ್ಕಷ್ಟೇ ಗಮನ ಕೊಡುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಕಟ್ಟಡದ ಸ್ಥಿತಿ ಮತ್ತು ನಿರ್ವಹಣೆ ಬಗ್ಗೆ ಮಾಲೀಕರು ನಿಯಮಿತವಾಗಿ ಪರಿಶೀಲನೆ ನಡೆಸುವುದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳೀಯರ ಮಾಹಿತಿ ಪ್ರಕಾರ, ಸುಮಾರು 30 ವರ್ಷ ಹಳೆಯ ಈ ಕಟ್ಟಡದ ಬೇಸ್‌ಮೆಂಟ್‌ನಲ್ಲಿ ಕೆಲವು ನಿರ್ಮಾಣ ಕಾಮಗಾರಿಗಳು ನಡೆಯುತ್ತಿತ್ತು. ತೆರೆದ ಚರಂಡಿ ಹಾಗೂ ಮಳೆಯಿಂದಾಗಿ ಬೇಸ್‌ಮೆಂಟ್‌ನಲ್ಲಿ ನಿರಂತರವಾಗಿ ನೀರು ಸಂಗ್ರಹವಾಗುತ್ತಿತ್ತು. ಇದರಿಂದ ಕಟ್ಟಡದ ಅಡಿಪಾಯ ದುರ್ಬಲಗೊಂಡಿರಬಹುದು ಎಂದು ಸ್ಥಳೀಯರು ಶಂಕಿಸಿದ್ದಾರೆ.

ವೀಕ್ ಎಂಡ್ ಆಗಿದ್ದರಿಂದ ಹಲವು ವಿದ್ಯಾರ್ಥಿಗಳು ತಮ್ಮ ಊರುಗಳಿಗೆ ತೆರಳಿದ್ದರು. ಹೀಗಾಗಿ ಕಟ್ಟಡದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಇಲ್ಲದಿರುವುದು ಮತ್ತಷ್ಟು ಪ್ರಾಣಹಾನಿಯಾಗುವುದನ್ನು ತಪ್ಪಿಸಿರಬಹುದು ಎಂದು ಸ್ಥಳೀಯರು ಹೇಳಿದ್ದಾರೆ.

ಕಟ್ಟಡ ಕುಸಿದ ಬಳಿಕ ಅಗ್ನಿಶಾಮಕ ದಳ, ಪೊಲೀಸರು ಹಾಗೂ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿ ಅವಶೇಷಗಳಡಿ ಸಿಲುಕಿದ್ದವರಿಗಾಗಿ ಕಾರ್ಯಾಚರಣೆ ನಡೆಸಿದವು. ಈ ವೇಳೆ 13 ಮಂದಿಯನ್ನು ರಕ್ಷಿಸಲಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಈ ದುರಂತದ ಬೆನ್ನಲ್ಲೇ ದೆಹಲಿಯ ಸತ್ಯನಿಕೇತನ, ಮುಖರ್ಜಿ ನಗರ, ಕರೋಲ್ ಬಾಗ್ ಸೇರಿದಂತೆ ವಿದ್ಯಾರ್ಥಿಗಳ ವಸತಿ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪಿಜಿಗಳ ಸುರಕ್ಷತೆ ಬಗ್ಗೆ ಗಂಭೀರ ಪ್ರಶ್ನೆಗಳು ಎದ್ದಿವೆ. ಕಟ್ಟಡಗಳ ನಿರ್ವಹಣೆ, ಸುರಕ್ಷತಾ ಪರಿಶೀಲನೆ, ಸುರಕ್ಷತಾ ಮಾನದಂಡಗಳ ಪಾಲನೆ ಹಾಗೂ ಅಗತ್ಯ ಪೊಲೀಸ್ ಪರಿಶೀಲನೆ ಇಲ್ಲದೆ ನಡೆಯುತ್ತಿರುವ ಪಿಜಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular