ನವದೆಹಲಿ: ದೆಹಲಿ ಹೊರವಲಯದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದ ಉದ್ಯಮಿ ಹತ್ಯೆ ಹಿಂದೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೈವಾಡವಿದೆ ಎಂದು ತಿಳಿದುಬಂದಿದೆ.
ದೆಹಲಿಯ ಹೊರವಲಯದ ಬವಾನಾ ಕೈಗಾರಿಕಾ ಪ್ರದೇಶದ ಬಳಿ ಸೋಮವಾರ 35 ವರ್ಷದ ಉದ್ಯಮಿಯನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು. ಪ್ಲಾಸ್ಟಿಕ್ ವ್ಯಾಪಾರಿಯಾಗಿದ್ದ ಉದ್ಯಮಿಯನ್ನು ಗುರಿಯಾಗಿಸಿಕೊಂಡು ಬೈಕ್ಗಳಲ್ಲಿ ಬಂದ ನಾಲ್ವರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯ ಹೊಣೆಯನ್ನು ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ.
ಉದ್ಯಮಿ ಗುಂಡಿನ ದಾಳಿಯಿಂದ ಬಚಾವಾಗಲು ಓಡಿಹೋಗಲು ಪ್ರಯತ್ನಿಸಿದರು. ಆದರೆ ದಾಳಿಕೋರರು ಅವರ ಬೆನ್ನಟ್ಟಿ ಗುಂಡು ಹಾರಿಸಿ ಹತ್ಯೆಗೈದಿದೆ. ಗುಂಡೇಟಿನಿಂದ ಗಾಯಗೊಂಡ ಉದ್ಯಮಿಯನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದರು.
ಮಹಾರಾಜ ಅಗ್ರಸೇನ್ ಆಸ್ಪತ್ರೆಯಿಂದ ಗುಂಡೇಟಿನ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ಪಡೆದಿದ್ದಾರೆ. ಮೃತ ಉದ್ಯಮಿಯನ್ನು ಬವಾನಾದ ಕೈಗಾರಿಕಾ ಪ್ರದೇಶದ ನಿವಾಸಿ ವೈಭವ್ ಗಾಂಧಿ ಎಂದು ಗುರುತಿಸಲಾಗಿದೆ.
ಸಿಸಿಟಿವಿಯಲ್ಲಿ ಉದ್ಯಮಿ ರಸ್ತೆಯಲ್ಲಿ ಬೀಳುತ್ತಿರುವುದು ಮತ್ತು ಗುಂಡು ಹಾರಿಸಿದವರು ಆ ಸ್ಥಳದಿಂದ ಪರಾರಿಯಾಗುತ್ತಿರುವ ದೃಶ್ಯ ಸೆರೆಯಾಗಿದೆ. ವ್ಯಾಪಾರ ವೈಷಮ್ಯ, ವೈಯಕ್ತಿಕ ದ್ವೇಷದಿಂದ ಹತ್ಯೆಯಾಗಿರುವ ಸಾಧ್ಯತೆ ಇದೆ.
ಇಂದು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ದೆಹಲಿ ಉದ್ಯಮಿಯ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ರಣದೀಪ್ ಮಲಿಕ್ ಮತ್ತು ಅನಿಲ್ ಪಂಡಿತ್ ಬವಾನಾದಲ್ಲಿ ಉದ್ಯಮಿ ವೈಭವ್ ಗಾಂಧಿಯನ್ನು ತಾವೇ ಕೊಂದಿದ್ದಾಗಿ ಹೇಳಿಕೊಂಡಿದ್ದಾರೆ. ಯಾರಾದರೂ ನಮ್ಮ ಕೆಲಸಕ್ಕೆ ಅಡ್ಡ ಬಂದರೆ ಅವರನ್ನೂ ಕೊಲ್ಲಲಾಗುವುದು ಎಂದು ಎಚ್ಚರಿಸಿದ್ದಾರೆ. ಈ ನಡುವೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

