HomeIndiaಬೆಚ್ಚಿಬೀಳಿಸುವಂತಿದೆ ದೆಹಲಿ ಕಟ್ಟಡ ಕುಸಿತದ CC TV ದೃಶ್ಯ ;ಕಣ್ಣೆದುರೇ ಧರೆಗುರುಳಿತ್ತಿದ್ದಂತೆ ಓಡಿ ಪ್ರಾಣ ಉಳಿಸಿಕೊಂಡ...

ಬೆಚ್ಚಿಬೀಳಿಸುವಂತಿದೆ ದೆಹಲಿ ಕಟ್ಟಡ ಕುಸಿತದ CC TV ದೃಶ್ಯ ;ಕಣ್ಣೆದುರೇ ಧರೆಗುರುಳಿತ್ತಿದ್ದಂತೆ ಓಡಿ ಪ್ರಾಣ ಉಳಿಸಿಕೊಂಡ ವ್ಯಕ್ತಿ | Watch

ಭಾನುವಾರ ಮಧ್ಯಾಹ್ನ ಜನಸಂದಣಿಯಿಂದ ಗಿಜಿಗುಡುತ್ತಿದ್ದ ದೆಹಲಿಯ ಸತ್ಯ ನಿಕೇತನ ಪ್ರದೇಶದಲ್ಲಿ ನೋಡನೋಡುತ್ತಿದ್ದಂತೆ 5 ಮಹಡಿಗಳ ಬೃಹತ್ ಕಟ್ಟಡವೊಂದು ಪೂರ್ಣವಾಗಿ ಕುಸಿದು ಧರೆಗುರುಳಿದೆ. ದೆಹಲಿ ವಿಶ್ವವಿದ್ಯಾಲಯದ ಸಮೀಪವೇ ಬಾಯ್ಸ್ ಪೇಯಿಂಗ್ ಗೆಸ್ಟ್ ಆಗಿ ಬಳಕೆಯಾಗುತ್ತಿದ್ದ ಸುಮಾರು 50 ವರ್ಷ ಹಳೆಯ ಈ ಕಟ್ಟಡ ಕುಸಿದ ಪರಿಣಾಮ ಇದುವರೆಗೆ ಆರು ಮಂದಿ ದುರ್ಮರಣಕ್ಕೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕಟ್ಟಡ ಕುಸಿಯುವ ಕೆಲವೇ ಕ್ಷಣಗಳ ಮುನ್ನ ರಸ್ತೆಬದಿಯ ವ್ಯಾಪಾರಿಯೊಬ್ಬ ಮೇಲಕ್ಕೆ ನೋಡಿ ಗಾಬರಿಯಿಂದ ಓಡಿ ಜೀವ ಉಳಿಸಿಕೊಂಡ ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿಗಳು ಬಹಿರಂಗಗೊಂಡಿದ್ದು, ಇಡೀ ದೃಶ್ಯ ಕ್ಷಣಾರ್ಧದಲ್ಲಿ ಬೃಹತ್ ಧೂಳಿನ ಮೋಡದೊಳಗೆ ಮುಳುಗಿಹೋಗಿರುವುದು ಕಂಡುಬಂದಿದೆ.

ನೆಲಮಾಳಿಗೆ ದುರಸ್ತಿ ವೇಳೆ ದುರಂತ

ವರದಿಗಳ ಪ್ರಕಾರ, ಬೇಸ್‌ಮೆಂಟ್ ಸೇರಿದಂತೆ ಐದು ಮಹಡಿಗಳನ್ನು ಹೊಂದಿದ್ದ ಈ ಕಟ್ಟಡದ ನೆಲಮಾಳಿಗೆಯಲ್ಲಿ ರಿಪೇರಿ ಕಾಮಗಾರಿ ನಡೆಯುತ್ತಿತ್ತು. ಈ ವೇಳೆ ಅಡಿಪಾಯ ಶಿಥಿಲಗೊಂಡು ಇಡೀ ಕಟ್ಟಡ ಏಕಾಏಕಿ ಕುಸಿದುಬಿದ್ದಿದೆ. ಕಟ್ಟಡದಲ್ಲಿದ್ದ ಹೆಚ್ಚಿನವರು ಕಾಲೇಜು ವಿದ್ಯಾರ್ಥಿಗಳಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದುರಂತ ಸಂಭವಿಸಿದ ತಕ್ಷಣವೇ ದೆಹಲಿ ಪೊಲೀಸ್, ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್ ಹಾಗೂ ವಿಪತ್ತು ನಿರ್ವಹಣಾ ಪಡೆಗಳು ಧಾವಿಸಿ ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ವಿಶೇಷ ತರಬೇತಿ ಪಡೆದ ಶ್ವಾನ ದಳವನ್ನು ಬಳಸಿ ಕಲ್ಲು-ಮಣ್ಣಿನ ರಾಶಿಯಡಿ ಸಿಲುಕಿರುವವರನ್ನು ಹೊರತೆಗೆಯುವ ಕಾರ್ಯ ರಾತ್ರಿಯಿಡೀ ಮುಂದುವರಿದಿದೆ.

6 ಸಾವು, ಹಲವರಿಗೆ ಗಂಭೀರ ಗಾಯ

ಅವಶೇಷಗಳಡಿಯಿಂದ ಇದುವರೆಗೆ ಒಟ್ಟು 13 ಜನರನ್ನು ಹೊರತೆಗೆಯಲಾಗಿದೆ. ಆದರೆ, ಏಮ್ಸ್ (AIIMS) ಟ್ರಾಮಾ ಸೆಂಟರ್‌ಗೆ ತರುವಷ್ಟರಲ್ಲೇ ಐವರು ಮೃತಪಟ್ಟಿದ್ದರೆ, ಚಿಕಿತ್ಸೆ ಫಲಕಾರಿಯಾಗದೆ ಮತ್ತೊಬ್ಬ ಗಂಭೀರ ಗಾಯಾಳು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಇನ್ನೂ ಮೂವರು ವಿದ್ಯಾರ್ಥಿಗಳು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರುಳುಹಿಂಡುವ ಆಕ್ರಂದನ, ವಿದ್ಯಾರ್ಥಿಯ ರಕ್ಷಣೆ

ಕಟ್ಟಡ ಕುಸಿದುಬಿದ್ದಾಗ ಒಳಗಡೆ ಸಿಲುಕಿದ್ದ ನೀರಜ್ ಎಂಬ ವಿದ್ಯಾರ್ಥಿ ತನ್ನ ಸೊಂಟದ ಕೆಳಭಾಗ ಸಂಪೂರ್ಣವಾಗಿ ಕಾಂಕ್ರೀಟ್ ಸ್ಲ್ಯಾಬ್ ಅಡಿಯಲ್ಲಿ ಸಿಲುಕಿದ್ದರೂ ಧೈರ್ಯಗುಂದದೆ ಮೊಬೈಲ್ ಮೂಲಕ ತನ್ನ ಸ್ನೇಹಿತರಿಗೆ ಲೊಕೇಷನ್ ಕಳುಹಿಸಿ ರಕ್ಷಣೆಗಾಗಿ ಮೊರೆಹೋಗಿದ್ದನು. ಸ್ನೇಹಿತರು ಧಾವಿಸಿ ಬಂದರೂ, ಅಕ್ಕಪಕ್ಕದ ಕಟ್ಟಡಗಳೂ ಕುಸಿಯುವ ಭೀತಿಯಿಂದ ಎನ್‌ಡಿಆರ್‌ಎಫ್ ತಂಡ ಸುಮಾರು ಎರಡು ಗಂಟೆಗಳ ಕಾಲ ಶ್ರಮಿಸಿ ಆತನನ್ನು ಹೊರತೆಗೆದು ಆಸ್ಪತ್ರೆಗೆ ದಾಖಲಿಸಿದೆ.

ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ನೋಡಿ ಆಸ್ಪತ್ರೆಗೆ ಓಡಿಬಂದ ಹಲವು ಪೋಷಕರು ತಮ್ಮ ಮಕ್ಕಳ ಸುಳಿವು ಸಿಗದೆ ಕಣ್ಣೀರಿಡುತ್ತಿರುವ ದೃಶ್ಯ ಎದೆಕಲಕುವಂತಿತ್ತು.

ಮಾಲೀಕನ ವಿರುದ್ಧ ಕೇಸ್, ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶ

ಘಟನೆ ಸಂಬಂಧ ದೆಹಲಿ ಪೊಲೀಸರು ಕಟ್ಟಡದ ಮಾಲೀಕ ಮತ್ತು ಸಂಬಂಧಪಟ್ಟವರ ವಿರುದ್ಧ ಕಠಿಣ ಸೆಕ್ಷನ್‌ಗಳಡಿ ಎಫ್‌ಐಆರ್ ದಾಖಲಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ, ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, ಮ್ಯಾಜಿಸ್ಟ್ರೇಟ್ ಮಟ್ಟದ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಕುಸಿದ ಕಟ್ಟಡದ ಪಕ್ಕದಲ್ಲಿದ್ದ ಮತ್ತೊಂದು ಶಿಥಿಲಗೊಂಡ ಅಪಾಯಕಾರಿ ಕಟ್ಟಡವನ್ನು 3 ದಿನಗಳೊಳಗೆ ನೆಲಸಮ ಮಾಡುವಂತೆ ದೆಹಲಿ ಮಹಾನಗರ ಪಾಲಿಕೆ, ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ. ವಿಶ್ವವಿದ್ಯಾಲಯದಲ್ಲಿ ಸಮರ್ಪಕ ಹಾಸ್ಟೆಲ್ ವ್ಯವಸ್ಥೆಯಿಲ್ಲದ ಕಾರಣ ವಿದ್ಯಾರ್ಥಿಗಳು ಇಂತಹ ಅಪಾಯಕಾರಿ, ಪರವಾನಗಿ ರಹಿತ ಪಿಜಿಗಳಲ್ಲಿ ಜೀವ ಕೈಯಲ್ಲಿ ಹಿಡಿದು ವಾಸಿಸುವಂತಾಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular