ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ದುಷ್ಕರ್ಮಿಗಳು ಬಿಕಾಂ ವಿದ್ಯಾರ್ಥಿಗೆ ಚಾಕು ಇರಿದಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಗೆಳೆಯರ ಮೇಲೆ ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಿದ್ದಕ್ಕೆ ಬಿಕಾಂ ವಿದ್ಯಾರ್ಥಿಗೆ ದುಷ್ಕರ್ಮಿಗಳ ಗುಂಪು ಚಾಕು ಇರಿದಿದೆ.
ದಾವಣಗೆರೆ ನಗರದ ವಿಜಯನಗರ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಚಾಕು ಇರಿತಕ್ಕೊಳಗಾದ ವಿದ್ಯರಥಿಯನ್ನು ಮನೋಜ್ (19) ಎಂದು ಗುರುತಿಸಲಾಗಿದೆ. ಮನೋಜ್ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ಓದುತ್ತಿದ್ದ.
ಮನೋಜ್ ಗೆಳೆಯರು ಹುಟ್ಟುಹಬ್ಬ ಆಚರಣೆಗೆ ತೆರಳಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಮನೋಜ್ ಗೆಳೆಯರ ಮೇಲೆ ಮತ್ತೊಂದು ಗ್ಯಾಂಗ್ ಹಲ್ಲೆ ನಡೆಸಿತ್ತು. ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಮನೋಜ್, ಯಾಕೆ ಹಲ್ಲೆ ಮಾಡಿದ್ದೀರಿ? ಎಂದು ಪ್ರಶ್ನಿಸಿದ್ದಾನೆ. . ಈ ವೇಳೆ ಮಾತಿಗೆ ಮಾತು ಬೆಳೆದು ದುಷ್ಕರ್ಮಿಗಳು ಮನೋಜ್ ಗೆ ಚಾಕು ಇರಿದಿದ್ದಾರೆ.
ಮನೋಜ್ ನ ಹೊಟ್ಟೆ, ಕೈಗಳಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಆತ್ನನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮನೋಜ್ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಮಣಿಪಾಲ್ ಆಸ್ಪತ್ರೆಗೆ ಶಿಫ್ಟ್ ಮಾಡುವಂತೆ ಸಲಹೆ ನೀಡಿದ್ದಾರೆ.
ಗಾಂಧಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

