ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ನಟ ದರ್ಶನ್ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಪ್ರಕರಣದ ಆರೋಪಿ ಪ್ರದೋಷ್ ಅವರನ್ನು ಮಾಫಿಸಾಕ್ಷಿಯನ್ನಾಗಿ ಪರಿಗಣಿಸಿರುವುದನ್ನು ಪ್ರಶ್ನಿಸಿ ದರ್ಶನ್ ಪರವಾಗಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಪ್ರದೋಷ್ ಅವರನ್ನು ಪ್ರಕರಣದಲ್ಲಿ ಮಾಫಿಸಾಕ್ಷಿಯಾಗಿ ಪರಿಗಣಿಸುವುದಕ್ಕೆ ಸಂಬಂಧಿಸಿದ ಕೋರ್ಟ್ ಆದೇಶಕ್ಕೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಈ ಅರ್ಜಿಯಲ್ಲಿ ಪ್ರದೋಷ್ ಅವರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಕೋರ್ಟ್ ಸಾಕ್ಷ ಒದಗಿಸುವಂತೆ ಪ್ರದೋಷ್ ಗೆ ಸಮನ್ಸ್ ನೀಡಿತ್ತು. ಇದಕ್ಕೆ ತಡೆ ಕೋರಿ ದರ್ಶನ್ ಹೈಕೋರ್ಟ್ ಮೊರೆ ಹೋಗಿದ್ದಾರೆ.ಮಾಫಿ ಸಾಕ್ಷಿ ಕ್ರಮ ಬದ್ದತೆ ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇಂದು ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಇಂದು ವಿಚಾರಣೆ ಸಾಧ್ಯತೆ
ದರ್ಶನ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆಯುವ ಸಾಧ್ಯತೆ ಇದೆ. ಪ್ರದೋಷ್ ಅವರನ್ನು ಮಾಫಿಸಾಕ್ಷಿಯನ್ನಾಗಿ ಪರಿಗಣಿಸಿರುವ ಕ್ರಮ ಕಾನೂನುಬದ್ಧವೇ ಎಂಬುದನ್ನು ಪ್ರಶ್ನಿಸಿ ದರ್ಶನ್ ಪರ ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
ಪ್ರಕರಣದಲ್ಲಿ ಪ್ರದೋಷ್ ಅವರ ಹೇಳಿಕೆ ಹಾಗೂ ಅವರನ್ನು ಮಾಫಿಸಾಕ್ಷಿಯನ್ನಾಗಿ ಪರಿಗಣಿಸಿರುವ ಬೆಳವಣಿಗೆ ಮಹತ್ವ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ, ದರ್ಶನ್ ಸಲ್ಲಿಸಿರುವ ಈ ಅರ್ಜಿಯ ವಿಚಾರಣೆ ಕುತೂಹಲ ಮೂಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ 14ನೇ ಆರೋಪಿ ಪ್ರದೋಷ್ ಎಸ್. ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಲು ಬೆಂಗಳೂರಿನ ನ್ಯಾಯಾಲಯ ಅನುಮತಿ ನೀಡಿತ್ತು. ಆಗಸ್ಟ್ 25ರಂದು ಬೆಂಗಳೂರಿನ 59ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಪ್ರದೋಷ್ ಅವರನ್ನು ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸುವಂತೆ ಆದೇಶಿಸಿತ್ತು.
ಏನಿದು ಮಾಫಿ ಸಾಕ್ಷಿ?
ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬರು ನ್ಯಾಯಾಲಯದ ಮುಂದೆ ಸತ್ಯಾಂಶಗಳನ್ನು ಬಹಿರಂಗಪಡಿಸಿ, ಪ್ರಾಸಿಕ್ಯೂಷನ್‌ಗೆ ಸಾಕ್ಷಿಯಾಗಿ ಸಹಕರಿಸುವುದಕ್ಕೆ ಪ್ರತಿಯಾಗಿ ಕಾನೂನುಬದ್ಧವಾಗಿ ಕ್ಷಮಾದಾನ ಪಡೆಯುವ ಪ್ರಕ್ರಿಯೆಯೇ ಮಾಫಿ ಸಾಕ್ಷಿ (Approver). ಪ್ರದೋಷ್ ಅವರ ಸಾಕ್ಷ್ಯವು ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ.
ಪ್ರದೋಷ್ ಇದೀಗ ಮಾಫಿ ಸಾಕ್ಷಿಯಾಗಿರುವ ಹಿನ್ನೆಲೆಯಲ್ಲಿ, ಅವರು ತನಿಖೆ ಮತ್ತು ವಿಚಾರಣೆಯ ವೇಳೆ ನೀಡಲಿರುವ ಹೇಳಿಕೆಗಳು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಪ್ರಮುಖವಾಗುವ ಸಾಧ್ಯತೆ ಇದೆ.

