ಬೆಂಗಳೂರು: ನಟ ದರ್ಶನ್ ಹಾಗೂ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 14ನೇ ಆರೋಪಿ ಪ್ರದೋಷ್ ತನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸುವಂತೆ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಮಾನ್ಯ ಮಾಡಿದ್ದ ಸೆಷನ್ಸ್ ಕೋರ್ಟ್ ಪ್ರದೋಷ್ ನನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಆದೇಶ ನೀಡಿತ್ತು. ಈ ಆದೇಶ ಪ್ರಶ್ನಿಸಿ ನಟ ದರ್ಶನ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ದರ್ಶನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರದೋಷ್ ಪಾಫಿ ಸಾಕ್ಷಿ ಪ್ರಕ್ರಿಯೆ ಪ್ರಶ್ನಿಸಿದ್ದ ದರ್ಶನ್ ಅರ್ಜಿಯನ್ನು ಭಾಗಶಃ ಅಂಗೀಕರಿಸಿದೆ. ಇದರಿಂದ ಕೊಲೆ ಆರೋಪಿ ದರ್ಶನ್ ಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ.
ನ್ಯಾ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ಪ್ರದೋಷ್ ಮಾಫಿ ಸಾಕ್ಷಿ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ದರ್ಶನ್ ಅರ್ಜಿಯನ್ನು ಭಾಗಶ: ಅಂಗೀಕಾರ ಮಾಡಿದೆ. ಜೊತೆಗೆ ಯಾವುದೇ ವಾದ-ಪ್ರತಿವಾದಕ್ಕೆ ಅವಕಾಶ ನೀಡದೇ ಒಂದು ವಾರದಲ್ಲಿ ಹೊಸ ಆದೇಶ ನೀಡಲು ಸೆಷನ್ಸ್ ಕೋರ್ಟ್‌ಗೆ ಸೂಚನೆ ನೀಡಿದೆ.
ಸೆಷನ್ಸ್ ಕೋರ್ಟ್ ನಲ್ಲಿ ಪ್ರದೋಷ್ ಸನ್ನಡತೆಯ ಬಗ್ಗೆ ಪ್ರೊಬೇಷನರಿ ಅಧಿಕಾರಿ ವರದಿ ಸಲ್ಲಿಸಿದ್ದರು. ಇದನ್ನ ಪ್ರಶ್ನಿಸಿ ದರ್ಶನ್ ಕೋರ್ಟ್ ಮೊರೆ ಹೋಗಿದ್ದರು. ಅರ್ಜಿಯಲ್ಲಿ ಪ್ರೊಬೆಷನರಿ ಅಧಿಕಾರಿ ಸಜಾಬಂಧಿ ಬಗ್ಗೆ ವರದಿ ಕೊಡಬೇಕಿತ್ತು. ಆದರೆ ಪ್ರದೋಷ್ ವಿಚಾರಣಾಧೀನ ಆರೋಪಿ. ಹೀಗಾಗಿ ಆತನ ನಡವಳಿಗೆ ಬಗ್ಗೆ ವರದಿ ನೀಡುವ ಅವಕಾಶ ಇಲ್ಲ. ಹೀಗಾಗಿ ಪ್ರೊಬೆಷನರಿ ಅಧಿಕಾರಿ ಸಲ್ಲಿಸಿದ ವರದಿಯನ್ನು ರದ್ದು ಮಾಡಲು ದರ್ಶನ್ ಮನವಿ ಮಾಡಿದ್ದರು.
ಇನ್ನು ಈ ಹಿಂದೆ ಸೆಷನ್ಸ್ ಕೋರ್ಟ್, ಪ್ರದೋಷ್ ಮಾಫಿ ಸಾಕ್ಷಿಯನ್ನಾಗಿ ಪರಿಗಣಿಸಿ ಈ ಸಂಬಂಧ ಆದೇಶ ನೀಡಿತ್ತು. ಇದೀಗ ಹೈಕೋರ್ಟ್ ಆದೇಶದ ಮೇರೆಗೆ ಮುಂದಿನ ಒಂದು ವಾರದಲ್ಲಿ ಸೆಷನ್ಸ್ ಕೋರ್ಟ್ ಹೊಸ ಆದೇಶ ನೀಡಬೇಕಿದೆ.
ಜೈಲಿನ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣ: ಪ್ರಜ್ವಲ್ ರೇವಣ್ಣ ಪೊಲೀಸ್ ಕಸ್ಟಡಿಗೆ
ಬೆಂಗಳೂರು: ಅತ್ಯಾಚಾರ ಹಾಗೂ ಅಶ್ಲೀಲ ವಿಡಿಯೋ ಚಿತ್ರೀಕರಣ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಬ್ಯಾರಕ್ ನಲ್ಲಿ ಮೊಬೈಲ್ ಫೋನ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ರೇವಣ್ಣನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪ್ರಜ್ವಲ್ ರೇವಣ್ಣ ಬ್ಯಾರಕ್ ನಲ್ಲಿ ಮೊಬೈಲ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲು ಬಾಡಿ ವಾರೆಂಟ್ ಪಡೆದು ಜೈಲಿನಿಂದ ಪ್ರಜ್ವಲ್ ರೇವಣ್ಣ ಹಾಗೂ ಆರೋಪಿ ಪ್ರತಾಪ್ ನನ್ನು ಇಂದು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಿ ಕಸ್ಟಡಿಗೆ ನೀಡುವಂತೆ ಕೋರಿದ್ದರು.
ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯ ಪ್ರಜ್ವಲ್ ರೇವಣ್ಣ ಹಾಗೂ ಆರೋಪಿ ಪ್ರತಾಪ್ ಇಬ್ಬರನ್ನೂ 2 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಕೆಲ ದಿನಗಳ ಹಿಂದೆ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ ಮೊಬೈಲ್ ನಲ್ಲಿ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿನ ಮೇಲೆ ದಾಳಿ ನಡೆಸಿದ್ದ ವೇಳೆ ಆರೋಪಿ ಪ್ರಜ್ವಲ್ ರೇವಣ್ಣ ಇದ್ದ ಜೈಲಿನ ಸೆಲ್ ನಲ್ಲಿ ಮೊಬೈಲ್ ಫೋನ್, ಸಿಮ್ ಕಾರ್ಡ್, ಚಾರ್ಜರ್, ಪೆನ್, ನೋಟ್ ಬುಕ್ ಗಳು ಪತ್ತೆಯಾಗಿದ್ದವು. ಈ ಬಗ್ಗೆ ವಿಚಾರಣೆ ನಡೆಸಿದಾಗ ಪ್ರಕ್ವಲ್ ರೇವಣ್ಣ ಇದು ನನ್ನದಲ್ಲ, ಇಲ್ಲಿಗೆ ಹೇಗೆ ಬಂತು ಎಂಬುದೂ ಗೊತ್ತಿಲ್ಲ ಎಂದು ವಾದಿಸಿದ್ದರು.
ಪೊಲೀಸರು ಮೊಬೈಲ್ ಹಾಗೂ ಸಿಮ್ ಕಾರ್ಡ್, ನೋಟ್ ಬುಕ್ ವಶಕ್ಕೆ ಪಡೆದು ಪರಿಶೀಲಿಸಿದಾಗ ಅದು ಆಂಧ್ರಪ್ರದೇಶದ ಸಿಮ್ ಎಂಬುದು ಗೊತ್ತಾಗಿದೆ. ಅಲ್ಲದೇ ಇದನ್ನು ಪ್ರಜ್ವಲ್ ಗೆ ಪ್ರತಾಪ್ ಎಂಬಾತ ಪೂರೈಸಿದ್ದ ಎಂಬುದು ತಿಳಿದುಬಂದಿದೆ. ಅಲ್ಲದೇ ಪ್ರಜ್ವಲ್ ರೇವಣ್ಣ ಜೈಲಿನ ಸೆಲ್ ನಿಂದಲೇ ಕೆಲವರ ಜೊತೆ ಫೋನ್ ನಲ್ಲಿ ಸಂಪರ್ಕದಲ್ಲಿದ್ದ ಎಂಬ ಬಗ್ಗೆ ಹಾಗೂ ಮನೆಗೂ ಕರೆ ಮಾಡಿ ಮಾತನಾಡುತ್ತ ಎಂಬುದು ಬಯಲಾಗಿದೆ.
ಅಲ್ಲದೇ ಪ್ರಜ್ವಲ್ ಬಳಿ ಪತ್ತೆಯಾಗಿದ್ದ ನೋಟ್ ಬುಕ್ ನಲ್ಲಿ ಯಾರಿಗೂ ಗೊತ್ತಾಗಬಾರದೆಂದು ತಂದೆ-ತಾಯಿ ಮೊಬೈಲ್ ನಂಬರ್ ನ್ನು ಶಿವ-ಪಾರ್ವತಿ ಹೆಸರಲ್ಲಿ ಬರೆದಿಟ್ಟಿರುವುದು. ಇದರ ಜೊತೆಗೆ ಇನ್ನೂ ಹಲವರ ಮೊಬೈಲ್ ನಂಬರ್ ಬರೆದಿಟ್ಟುರುವುದು ಬೆಳಕಿಗೆ ಬಂದಿತ್ತು.
ಪ್ರಜ್ವಲ್ ರೇವಣ್ಣಗೆ ಮೊಬೈಲ್ ಹಾಗೂ ಸಿಮ್ ಕಾರ್ಡ್ ಪೂರೈಸಿದ್ದ ಆರೋಪದಲ್ಲಿ ಪ್ರತಾಪ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದರು. ಇದೀಗ ಹೆಚ್ಚಿನ ವಿಚರಣೆಗಾಗಿ ಇಬ್ಬರು ಆರೋಪಿಗಳನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

