ಮೈಸೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕರಳು ಚುರುಕ್ ಎನ್ನುವ ದಿನಗಳನ್ನು ಕಳೆಯುತ್ತಿರುವ ಸ್ಯಾಂಡಲ್ವುಡ್ ನಟ ದರ್ಶನ್ ತೂಗುದೀಪ ಅವರ ಮೈಸೂರಿನ ಫಾರ್ಮ್ಹೌಸ್ನಿಂದ ಅತ್ಯಂತ ಶಾಕಿಂಗ್ ಸುದ್ದಿಯೊಂದು ಹೊರಬಿದ್ದಿದೆ. ಪ್ರಾಣಿ ಮತ್ತು ಸಾಕು ಕುದುರೆಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದ ದರ್ಶನ್, ಈಗ ತಮ್ಮ ಫಾರ್ಮ್ಹೌಸ್ನಲ್ಲಿರುವ ಲಕ್ಷಾಂತರ ರೂಪಾಯಿ ಮೌಲ್ಯದ ರೇಸ್ ಕುದುರೆಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೆ ಪುಷ್ಟಿ ನೀಡುವಂತೆ, ಮೈಸೂರು-ಟಿ. ನರಸೀಪುರ ರಸ್ತೆಯಲ್ಲಿರುವ ವಿನೀಶ್ ದರ್ಶನ್ ಮಾರ್ವಾರಿ ಸ್ಟಡ್ ಫಾರ್ಮ್ನ (Vinish Darshan Marwari Stud Farm) ಮುಂಭಾಗದಲ್ಲಿ ಬೃಹತ್ ಗಾತ್ರದ ಹಾರ್ಸ್ ಫಾರ್ ಸೇಲ್ (ಕುದುರೆಗಳು ಮಾರಾಟಕ್ಕಿವೆ) ಎಂಬ ಬೋರ್ಡ್ ಪ್ರತ್ಯಕ್ಷವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.
ಶೂಟಿಂಗ್ ಮುಗಿದ ತಕ್ಷಣ ಓಡಿ ಬರುತ್ತಿದ್ದ ಪ್ರೀತಿಯ ಫಾರ್ಮ್ಹೌಸ್
ನೆಚ್ಚಿನ ತಾಣ: ದರ್ಶನ್ ಅವರು ಸಿನಿಮಾ ಶೂಟಿಂಗ್ಗಳ ಭಾರಿ ಬ್ಯುಸಿ ಶೆಡ್ಯೂಲ್ನಿಂದ ಕೊಂಚ ಬಿಡುವು ಸಿಕ್ಕರೂ ಸಾಕು, ಮೈಸೂರಿನ ಟಿ. ನರಸೀಪುರ ರಸ್ತೆಯ ಹಳೆಯ ಕೆಂಪಯ್ಯನಹುಂಡಿ ಬಳಿ ಇರುವ ತಮ್ಮ ವಿಶಾಲವಾದ ತೂಗುದೀಪ ಫಾರ್ಮ್ಹೌಸ್ ಗೆ ಬಂದು ರಿಲ್ಯಾಕ್ಸ್ ಆಗುತ್ತಿದ್ದರು.
ಪ್ರಾಣಿ ಪಕ್ಷಿಗಳ ಸಾಮ್ರಾಜ್ಯ: ಈ ಫಾರ್ಮ್ಹೌಸ್ನಲ್ಲಿ ಕೇವಲ ಕುದುರೆಗಳು ಮಾತ್ರವಲ್ಲ, ಬರೋಬ್ಬರಿ 20ಕ್ಕೂ ಹೆಚ್ಚು ರೇಸ್ ಕುದುರೆಗಳು, ಎರಡು ಡಜನ್ ಹಸುಗಳು, ಅಪರೂಪದ ಹಳ್ಳಿಕಾರ್ ತಳಿಯ ಎತ್ತುಗಳು, ಕುರಿ, ಮೇಕೆಗಳು, ಎಮು ಪಕ್ಷಿಗಳು, ವಿದೇಶಿ ತಳಿಯ ಶ್ವಾನಗಳು, ಬಾತುಕೋಳಿಗಳು ಹಾಗೂ ಕತ್ತೆಗಳು ಸೇರಿದಂತೆ ಹತ್ತಾರು ಪ್ರಾಣಿಗಳನ್ನು ಪ್ರತ್ಯೇಕ ಗೂಡುಗಳಲ್ಲಿ ಅತ್ಯಂತ ಪ್ರೀತಿಯಿಂದ ಸಾಕುತ್ತಿದ್ದರು.
ಲಕ್ಷಾಂತರ ರೂಪಾಯಿ ಮೌಲ್ಯ: ಈ ಫಾರ್ಮ್ನಲ್ಲಿರುವ ಕುದುರೆಗಳು ಸಾಮಾನ್ಯ ಕುದುರೆಗಳಲ್ಲ, ಇವೆಲ್ಲವೂ ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಅತ್ಯಂತ ದುಬಾರಿ ತಳಿಯ ರೇಸ್ ಕುದುರೆಗಳಾಗಿದ್ದು, ಇವುಗಳ ಮೌಲ್ಯವೇ ಲಕ್ಷಾಂತರ ರೂಪಾಯಿ ದಾಟುತ್ತದೆ ಎಂದು ಮೂಲಗಳು ತಿಳಿಸಿವೆ.ಈ ಕುರಿತು ತೂಗುದೀಪ ಫಾರ್ಮ್ಹೌಸ್ನ ಮಾಜಿ ಪಶುವೈದ್ಯರಾದ ಡಾ. ರಾಮಚಂದ್ರ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕೆಲವು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ
ಅತ್ಯಂತ ಬೆಲೆಬಾಳುವ ಕುದುರೆಗಳು: “ದರ್ಶನ್ ಅವರ ಫಾರ್ಮ್ನಲ್ಲಿರುವ ರೇಸ್ ಕುದುರೆಗಳು ನಿಜಕ್ಕೂ ಅತ್ಯಂತ ಅಮೂಲ್ಯವಾದ ಮತ್ತು ದುಬಾರಿ ತಳಿಯ ಕುದುರೆಗಳಾಗಿವೆ” ಎಂದು ಅವರು ಖಚಿತಪಡಿಸಿದ್ದಾರೆ.
ಬಂಧನಕ್ಕೂ ಮುನ್ನ ಬೋರ್ಡ್ ಇತ್ತು
ಅಚ್ಚರಿಯ ವಿಷಯವೆಂದರೆ, ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗುವ ಮುನ್ನವೇ, ಅಂದರೆ ಅವರ ಬಂಧನಕ್ಕೂ ಮುಂಚಿತವಾಗಿಯೇ ಈ ಫಾರ್ಮ್ಹೌಸ್ನ ಮುಂಭಾಗದಲ್ಲಿ ಕುದುರೆಗಳು ಮಾರಾಟಕ್ಕಿವೆ ಎಂಬ ಬೋರ್ಡ್ ಅನ್ನು ಹಾಕಲಾಗಿತ್ತು ಎಂಬ ದಟ್ಟವಾದ ಅನುಮಾನಗಳು ಹಾಗೂ ಚರ್ಚೆಗಳು ಈಗ ಮುನ್ನೆಲೆಗೆ ಬಂದಿವೆ.
ದರ್ಶನ್ ಅವರು ತಮ್ಮ ಈ ಪ್ರೀತಿಯ ರೇಸ್ ಕುದುರೆಗಳನ್ನು ಇದ್ದಕ್ಕಿದ್ದಂತೆ ಮಾರಾಟ ಮಾಡಲು ಏಕೆ ನಿರ್ಧರಿಸಿದರು ಮತ್ತು ಆ ಬೋರ್ಡ್ ಅನ್ನು ಅಷ್ಟೊಂದು ಮುಂಚಿತವಾಗಿ ಯಾಕೆ ಹಾಕಿಸಲಾಯಿತು ಎಂಬ ಅಸಲಿ ಕಾರಣ ಮಾತ್ರ ನನಗೂ ತಿಳಿದಿಲ್ಲ” ಎಂದು ಡಾ. ರಾಮಚಂದ್ರ ಅವರು ಹೇಳಿದ್ದಾರೆ.

