ಮಂಗಳೂರು: ವಿದ್ಯುತ್ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ರೈಲು ರದ್ದಾಗಿದ್ದ ದಕ್ಷಿಣ ಕನ್ನಡ ಭಾಗದ ರೈಲುಗಳು ಪುನರಾರಂಭವಾಗಿವೆ. ಸುಬ್ರಹ್ಮಣ್ಯ ರೋಡ್–ಎಡಮಂಗಲ–ನರಿಮೊಗರು ನಡುವೆ ನಡೆಯುತ್ತಿದ್ದ ಹಳಿ ಹಾಗೂ ವಿದ್ಯುತ್ ನಿರ್ವಹಣಾ ಕಾಮಗಾರಿಗಳ ಹಿನ್ನೆಲೆಯಲ್ಲಿ ರದ್ದು, ನಿಯಂತ್ರಣ ಮತ್ತು ಮರುನಿಗದಿಗೊಳಿಸಲಾಗಿದ್ದ ಪ್ರಯಾಣಿಕ ರೈಲು ಸೇವೆಗಳನ್ನು ಇದೀಗ ಮರುಸ್ಥಾಪಿಸಿ, ಪರಿಷ್ಕರಿಸಲಾಗಿದೆ.
ಈ ಬಗ್ಗೆ ದಕ್ಷಿಣ-ಪಶ್ಚಿಮ ರೈಲ್ವೆ ಮೈಸೂರು ವಿಭಾಗವು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ರೈಲು ಸಂಖ್ಯೆ 56629 ಮಂಗಳೂರು ಸೆಂಟ್ರಲ್-ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ಮತ್ತು 56630 ಸುಬ್ರಹ್ಮಣ್ಯ ರೋಡ್–ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲುಗಳನ್ನು 2026ರ ಜೂನ್ 10ರಿಂದ 21ರವರೆಗೆ ರದ್ದುಪಡಿಸಿ ಆದೇಶಿಸಲಾಗಿತ್ತು. ಈಗ ಅವುಗಳನ್ನು ಮರುಸ್ಥಾಪಿಸಲಾಗಿದೆ. ಈ ರೈಲುಗಳು ಮುಂದೆ ನಿಗದಿತ ವೇಳಾಪಟ್ಟಿಯಂತೆ ಸಂಚರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈಲು ಸಂಖ್ಯೆ 56229 ಮಂಗಳೂರು ಸೆಂಟ್ರಲ್–ಸುಬ್ರಹ್ಮಣ್ಯ ರೋಡ್ ಪ್ಯಾಸೆಂಜರ್ ರೈಲಿನ ನಿಯಂತ್ರಣ ಅವಧಿಯಲ್ಲಿಯೂ ಬದಲಾವಣೆ ಮಾಡಲಾಗಿದೆ. ಮೊದಲು 55 ನಿಮಿಷಗಳ ವಿಳಂಬ ಇರಲಿದೆ ಎಂದು ತಿಳಿಸಲಾಗಿದ್ದರೂ, ಇದೀಗ 2026ರ ಏಪ್ರಿಲ್ 16ರಿಂದ ಜೂನ್ 4ರವರೆಗೆ ಈ ರೈಲು ಮಾರ್ಗಮಧ್ಯೆ 35 ನಿಮಿಷಗಳ ಕಾಲ ಮಾತ್ರ ನಿಯಂತ್ರಣಕ್ಕೆ ಒಳಪಡಲಿದೆ. ನಂತರದ ಜೂನ್ 5ರಿಂದ 9ರವರೆಗೆ ರೈಲು ಸಾಮಾನ್ಯ ವೇಳಾಪಟ್ಟಿಯಂತೆ ಸಂಚರಿಸಲಿದೆ.
ಇನ್ನು, ರೈಲು ಸಂಖ್ಯೆ 56630ರ ಮರುನಿಗದಿಗೊಳಿಸುವ ದಿನಾಂಕಗಳಲ್ಲಿಯೂ ಪರಿಷ್ಕರಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಏಪ್ರಿಲ್ 16, 18, 21, 23, 25, 28 ಮತ್ತು 30, ಮೇ 2, 5, 7, 9, 12, 14, 16, 19, 21, 23, 26, 28 ಮತ್ತು 30, ಹಾಗೂ ಜೂನ್ 2 ಮತ್ತು 4ರಂದು ಈ ರೈಲು 15 ನಿಮಿಷ ತಡವಾಗಿ ಸಂಚರಿಸಲಿದೆ. ಇತರ ದಿನಗಳಲ್ಲಿ, ವಿಶೇಷವಾಗಿ ಜೂನ್ 6 ಮತ್ತು 9ರಂದು, ರೈಲು ತನ್ನ ಸಾಮಾನ್ಯ ವೇಳಾಪಟ್ಟಿಯಂತೆ ಓಡಲಿದೆ.
ಈ ಕುರಿತು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಗಿರೀಶ್ ಧರ್ಮರಾಜ್ ಕಲಗೊಂಡ ಅವರು ಮಾಹಿತಿ ನೀಡಿ, ಪ್ರಯಾಣಿಕರು ಹೊಸ ವೇಳಾಪಟ್ಟಿಯನ್ನು ಗಮನಿಸಿಕೊಂಡು ಪ್ರಯಾಣ ಮಾಡುವಂತೆ ಮನವಿ ಮಾಡಿದ್ದಾರೆ.

