ರಾಯಚೂರು: ಕರ್ನಾಟಕದಲ್ಲಿ ಯಾವ ಕುರ್ಚಿಗಳೂ ಅಲ್ಲಾಡುತ್ತಿಲ್ಲ. ಎಲ್ಲಾ ಕುರ್ಚಿಗಳೂ ಗಟ್ಟಿಯಾಗಿವೆ. ಪ್ರಧಾನಿಯವರ ಕಣ್ಣಿಗೆ ಏನು ಕಾಣುತ್ತಿದೆಯೋ ಗೊತ್ತಿಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.
ಪಂಚರಾಜ್ಯಗಳ ಚುನಾವಣೆ ಬಳಿಕ ಸಿಎಂ ಕುರ್ಚಿಗಳು ಅಲ್ಲಾಡುತ್ತಿವೆ. ಕರ್ನಾಟಕದಲ್ಲಿ ಕರ್ನಾಟಕದಲ್ಲಿ ಸಿಎಂ ಕುರ್ಚಿ ಅಲುಗಾಡುತ್ತಿದೆ. ಕುರ್ಚಿ ಕಿತ್ತಾಟ ಆರಂಭವಾಗಿದೆ. ಕೇರಳ, ಪಂಜಾಬ್ ನಲ್ಲೂ ಇದೇ ರೀತಿ ಆಗಿದೆ ಎಂದು ಪ್ರಧಾನಿ ಮೋದಿ ನೀಡಿರುವ ಹೇಳಿಕೆಗೆ ರಾಯಚೂರಿನ ಲಿಂಗಸಗೂರಿನಲ್ಲಿ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕರ್ನಾಟಕದಲ್ಲಿ ಎಲ್ಲಾ ಕುರ್ಚಿಗಳೂ ಗಟ್ಟಿಯಾಗಿವೆ, ಪ್ರಧಾನಿ ಮೋದಿಯವರಿಗೆ ಏನು ಕಾಣುತ್ತಿದೆಯೋ ಗೊತ್ತಿಲ್ಲ ಎಂದರು.
ಸಚಿವ ಡಿ. ಸುಧಾಕರ್ ಇಂದು ನಮ್ಮನ್ನು ಅಗಲಿದ್ದಾರೆ. ಭದ್ರಾ ಮೇಲ್ದಂಡೆ ಯೋಜನೆ ಉದ್ಘಾಟನೆಗೆ ಅವರು ನಮ್ಮೊಡನೆ ಇರಬೇಕಿತ್ತು. ಅವರ ಅನಾರೋಗ್ಯದ ಕಾರಣಕ್ಕೆ ಇದು ಸಾಧ್ಯವಾಗಲಿಲ್ಲ. ನನ್ನನ್ನ, ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿದಾಗಲೆಲ್ಲ ಸದಾ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತಾಗಿ ಮನವಿ ಮಾಡುತ್ತಲೇ ಇದ್ದರು. ಜೈನ ಸಮುದಾಯಕ್ಕೆ ಸೇರಿದವರು. ಕಡಿಮೆ ಜನಸಂಖ್ಯೆ ಇದ್ದರು ಸಹ ಎಲ್ಲಾ ಸಮುದಾಯದ ಜನರನ್ನ ಪ್ರೀತಿಯಿಂದ ಕಾಣುತ್ತಿದ್ದರು. ಹೃದಯ ಶ್ರೀಮಂತಿಕೆ ಇದ್ದಂತಹ ಮನುಷ್ಯ. ಇವರ ಸಾವಿನಿಂದ ನಮ್ಮ ಸರ್ಕಾರಕ್ಕೆ, ಕ್ಷೇತ್ರಕ್ಕೆ ನಷ್ಟ ಉಂಟಾಗಿದೆ. ನನಗೆ ವೈಯಕ್ತಿಕವಾಗಿ ಬಹಳ ಆಘಾತ ಉಂಟಾಗಿದೆ ಎಂದರು.
ಕುಡಿಯುವ ನೀರಿನ ಸಮಸ್ಯೆ ವಿಚಾರವಾಗಿ ನನ್ನ ಇಲಾಖೆಯಿಂದ ಕುಡಿಯುವ ನೀರು ನೀಡಲು ಆದ್ಯತೆಯಿದೆ. ಈ ಬಗ್ಗೆ ನಮ್ಮ ಅಧಿಕಾರಿಗಳ ಬಳಿ ಮಾತನಾಡಿ ಏನು ಪರಿಹಾರ ಮಾಡಬೇಕೋ ಮಾಡುತ್ತೇನೆ ಎಂದು ಹೇಳಿದರು.

