HomeKarnatakaಬಸವರಾಜ್ ಹೊರಟ್ಟಿ ರಾಜೀನಾಮೆ ಅಂಗೀಕಾರ: ಬದಲಿ ವ್ಯವಸ್ಥೆವರೆಗೂ ಅವರನ್ನೇ ಮುಂದುವರೆಸಲು ರಾಜ್ಯಪಾಲರಿಗೆ ಶಿಫಾರಸು; ಸಿಎಂ ಡಿ.ಕೆ.ಶಿವಕುಮಾರ್

ಬಸವರಾಜ್ ಹೊರಟ್ಟಿ ರಾಜೀನಾಮೆ ಅಂಗೀಕಾರ: ಬದಲಿ ವ್ಯವಸ್ಥೆವರೆಗೂ ಅವರನ್ನೇ ಮುಂದುವರೆಸಲು ರಾಜ್ಯಪಾಲರಿಗೆ ಶಿಫಾರಸು; ಸಿಎಂ ಡಿ.ಕೆ.ಶಿವಕುಮಾರ್

ಬೆಂಗಳೂರು: ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ರಾಜಿನಾಮೆ ನೀಡಿದ್ದು, ಅದನ್ನು ಅಂಗೀಕರಿಸಲಾಗಿದೆ. ಬದಲಿ ವ್ಯವಸ್ಥೆ ಆಗುವವರೆಗೂ ಅವರನ್ನೇ ಈ ಸ್ಥಾನದಲ್ಲಿ ಮುಂದುವರಿಸಬೇಕು ಎಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಪ್ರಸಕ್ತ ರಾಜಕೀಯ ಬೆಳವಣಿಗೆ ಗಮನದಲ್ಲಿಟ್ಟುಕೊಂಡು ಬಸವರಾಜ ಹೊರಟ್ಟಿ ಅವರು ತಮ್ಮ ರಾಜೀನಾಮೆ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಹೊರಟ್ಟಿ ಅವರು ದೇಶದ ವಿಧಾನ ಪರಿಷತ್ ಇತಿಹಾಸದಲ್ಲೇ ಅತ್ಯಂತ ಹಿರಿಯ ನಾಯಕರು. ಅವರು ತಮ್ಮ ಹೃದಯ ವೈಶಾಲ್ಯತೆ ತೋರಿದ್ದಾರೆ. ಅದು ಮೆಚ್ಚುವಂತದ್ದು. ಆಗಸ್ಟ್ 13 ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, 14 ರಂದು ನೂತನ ಉಪಸಭಾಪತಿಗಳ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಂತರ ಉಪಸಭಾಪತಿಗಳ ಮೂಲಕ ಸಭಾಪತಿಗಳ ಚುನಾವಣೆ ನಡೆಯಲಿದೆ ಎಂದು ತಿಳಿಸಿದರು.

ಇದಕ್ಕೂ ಮುನ್ನ ಬಸವರಾಜ ಹೊರಟ್ಟಿ ಅವರೊಂದಿಗೆ ವಿಧಾನಸೌಧದಲ್ಲಿ ಚರ್ಚೆ ನಡೆಸಿದ್ದ ಸಿಎಂ,ವಿಧಾನ ಪರಿಷತ್ತಿನ ಅಧ್ಯಕ್ಷ, ಉಪಾಧ್ಯಕ್ಷರನ್ನ ಆಯ್ಕೆ ಮಾಡಿ ನಂತರ ನಮ್ಮ ಸದಸ್ಯರೆಲ್ಲರಿಗೂ ಕೃತಜ್ಞತೆ ಸಲ್ಲಿಸುವ ಆಸೆಯನ್ನು ಬಸವರಾಜ ಹೊರಟ್ಟಿಯವರು ಇಟ್ಟುಕೊಂಡಿದ್ದಾರೆ. ಅವರ ಭಾವನೆಗಳನ್ನು ನಾವು ಒಪ್ಪಿಕೊಂಡಿದ್ದೇವೆ, ಗೌರವಿಸುತ್ತೇವೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನಾವುಗಳೇ ಒಂದು ಒಪ್ಪಂದಕ್ಕೆ ಬಂದ ಮೇಲೆ ಮುಂದೇನಿದೆ? ಅವಿಶ್ವಾಸ ನಿರ್ಣಯ ಮಂಡನೆ ಅಪ್ರಸ್ತುತ. ಈಗ ಅವರೇ ರಾಜೀನಾಮೆ ನೀಡಿದ್ದಾರೆ. ಈಗ ರಾಜೀನಾಮೆ ಅಂಗೀಕರಿಸಿದರೂ ಅವರನ್ನೇ ಹಂಗಾಮಿ‌ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕಿದೆ ಎಂದರು.

ರಾಜೀನಾಮೆ ನೀಡುತ್ತೇನೆ ಎಂದು ಹೊರಟ್ಟಿ ಅವರು ದೇಶದ ಮುಂದೆಯೇ ಹೇಳಿರುವಾಗ ಆ ವಿಚಾರವೇ ಬಾರದು. ಬಸವರಾಜ ಹೊರಟ್ಟಿ ಅವರು ಶಿಸ್ತಿನ ಮನುಷ್ಯ. ಅವರು ಸಭಾಪತಿ ಸ್ಥಾನಕ್ಕೆ ನೀಡಿದಷ್ಟು ಗೌರವವವನ್ನು ಯಾರೂ ನೀಡಿಲ್ಲ. ಎಲ್ಲಾ ಸಂದರ್ಭದಲ್ಲೂ ಸರ್ಕಾರದ ಗೌರವ ಕಾಪಾಡಿಕೊಂಡು ಬಂದಿದ್ದಾರೆ. ನಮಗೆಲ್ಲರಿಗೂ ಅವರ ಬಗ್ಗೆ ಹೆಮ್ಮೆಯಿದೆ ಎಂದರು.

ಇದುವರೆಗೂ ಸಭಾಪತಿಗಳ ಬದಲಾವಣೆಯಾಗಿರಲಿಲ್ಲ ಎಂಬ ಬಿಜೆಪಿಯವರ ಆರೋಪಕ್ಕೆ ಸಂಬಂಧಿಸಿದಂತೆ ಅವರು ಬೇರೆ ರಾಜ್ಯಗಳಲ್ಲಿ ಏನೆಲ್ಲಾ ಮಾಡಿದ್ದಾರೆ ಪಟ್ಟಿ ನೀಡಲೇ? ನಾನು ಅವರ ಬಗ್ಗೆ ಮಾತನಾಡುವುದಿಲ್ಲ. ಇದು ನಮ್ಮ ಹಾಗೂ ಹೊರಟ್ಟಿ ಅವರ ನಡುವಣ ವಿಚಾರ. ಶೆಟ್ಟರ್ ಅವರು ಇದ್ದಾಗ, ಹೊರಟ್ಟಿ ಅವರನ್ನು ಸಭಾಪತಿ ಮಾಡಿದಾಗ ನಡೆದ ಘಟನೆ ಏನು? ಮರೆತು ಹೋಯಿತೇ? ಮಾಧ್ಯಮಗಳಲ್ಲಿ ಅವುಗಳ ದೃಶ್ಯಾವಳಿ ಇರಬೇಕಲ್ಲವೇ, ಮರುಪ್ರಸಾರ ಮಾಡಿ ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular