ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕನಸನ್ನು ಸರ್ಕಾರ ಶೀಘ್ರದಲ್ಲಿ ನೆರವೇರಿಸಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕಾರವಾರದ ರವೀಂದ್ರನಾಥ ಠಾಗೋರ್ ಕಡಲ ತೀರದಲ್ಲಿ ನಡೆದ ಕರಾವಳಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಾರವಾರದ ಜನರ ಬಹುದಿನದ ಬೇಡಿಕೆಯಂತೆ ಕ್ಷೇತ್ರಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದು ನಮ್ಮ ಸರ್ಕಾರದ ಜವಾಬ್ದಾರಿ ಎಂದರು.
ಶಾಸಕರಾದ ಸತೀಶ್ ಸೈಲ್, ನಮ್ಮ ಜನರು ಗೋವಾ, ಉಡುಪಿ, ಮಂಗಳೂರಿಗೆ ಉತ್ತಮ ಚಿಕಿತ್ಸೆಗೆ ಹೋಗಲು ಆಗುವುದಿಲ್ಲ. ಅದಕ್ಕೆ ನಮಗೆ ಅತ್ಯುತ್ತಮ ಆಸ್ಪತ್ರೆ ಬೇಕು ಎಂದಿದ್ದಾರೆ. ಈ ನಿಟ್ಟಿನಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಮ್ಮ ಆದ್ಯತೆ ಎಂದರು.
ಉತ್ತರ ಕನ್ನಡಕ್ಕೆ ಪ್ರತ್ಯೇಕ ಪ್ರವಾಸೋದ್ಯಮ ನೀತಿ ಮಾಡಿ ಉದ್ಯೋಗ ಸೃಷ್ಟಿ ಮಾಡುತ್ತೇವೆ. ಯುವ ಜನರ ವಲಸೆ ತಪ್ಪಿಸುತ್ತೇವೆ. ಮನೆ ಬಾಗಿಲಲ್ಲಿ ಉದ್ಯೋಗ ನೀಡುತ್ತೇವೆ. ಜನವರಿ 10 ರಂದು ಮಂಗಳೂರಿನಲ್ಲಿ ಸಭೆ ನಡೆಸಲಾಗುವುದು ಎಂದರು.
ಪಶ್ಚಿಮ ಘಟ್ಟ, ಸಮುದ್ರ ತೀರ ಹೊಂದಿರುವ ವಿಶಿಷ್ಟವಾದ ಪ್ರದೇಶವಿದು. ವಿಭಿನ್ನವಾದ ಸಾಹಿತ್ಯ, ಸಂಸ್ಕೃತಿ, ಭಾಷೆ, ಆಚರಣೆ, ಪರಿಸರ ಹೀಗೆ ವೈವಿಧ್ಯಮಯವಾದ ಪ್ರದೇಶವಿದು. ಸಮುದ್ರ ಎಂದರೆ ಶಕ್ತಿ, ಸಂಪತ್ತು, ಸಮುದ್ರ ಎಂದರೆ ಜೀವನ, ಮೀನುಗಾರರ ಬದುಕಿಗೆ ದೊಡ್ಡ ಆಧಾರ, ವ್ಯಾಪಾರಿಗರ ನಿಧಿ, ಪ್ರವಾಸಿಗರ ಸ್ವರ್ಗ ಈ ಸಮುದ್ರ ಎಂದು ಕರಾವಳಿಯ ವೈಭವವನ್ನು ಬಣ್ಣಿಸಿದರು.
ಕರಾವಳಿ ಉತ್ಸವದಿಂದ ಸ್ಥಳೀಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ಅವಕಾಶ ನೀಡಿದಂತಾಗಿದೆ. ಈ ರೀತಿ ಪ್ರೋತ್ಸಾಹ ನೀಡುವುದರಿಂದ ಯುವ ಕಲಾವಿದರ ಬೆಳವಣಿಗೆ ಸಾಧ್ಯ ಎಂದರು.

