ರಾಮನಗರ(ಬೆಂಗಳೂರು ದಕ್ಷಿಣ): ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದು, ಡಿ.ಕೆ. ಶಿವಕುಮಾರ್ ಆ ಹುದ್ದೆಗೇರುವುದು ಖಚಿತವಾಗಿದೆ.
ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಲೇ ಜಿಲ್ಲೆಯಿಂದ ಮುಖ್ಯಮಂತ್ರಿ ಹುದ್ದೆಗೇರಿದ ಐದನೇ ರಾಜಕಾರಣಿಯಾಗಲಿದ್ದಾರೆ.
ರಾಮನಗರದ(ಬೆಂಗಳೂರು ದಕ್ಷಿಣ) ಕನಕಪುರ ಕ್ಷೇತ್ರದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಆಗುವುದು ಬಹುತೇಕ ಖಚಿತವಾಗಿದ್ದು, ರಾಮನಗರ ಜಿಲ್ಲೆಯಿಂದ ಮುಖ್ಯಮಂತ್ರಿ ಹುದ್ದೆಗೇರಿದ ಐದನೇ ರಾಜಕಾರಣಿ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಕರ್ನಾಟಕದ ಮೊದಲ ಚುನಾಯಿತ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಮೂಲತಃ ರಾಮನಗರ ತಾಲೂಕಿನವರು. ಅಂದಿನ ಮೈಸೂರು ರಾಜ್ಯದಲ್ಲಿ 1952, 1957ರ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಿಂದ ಸ್ಪರ್ಧಿಸಿ ಜಯಗಳಿಸಿದ ಕೆಂಗಲ್ ಹನುಮಂತಯ್ಯ ಮುಖ್ಯಮಂತ್ರಿ ಆಗಿದ್ದರು. ವಿಧಾನಸೌಧ ನಿರ್ಮಿಸಿದ ಹೆಗ್ಗಳಿಕೆ ಅವರದ್ದಾಗಿದೆ.
1983 ರಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ಸೇತರ ಜನತಾ ಪರಿವಾರ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದರು. ಆದರೆ ಆಗ ಅವರು ಯಾವುದೇ ಸದನದ ಸದಸ್ಯರಾಗಿರಲಿಲ್ಲ. ಕನಕಪುರ ಕ್ಷೇತ್ರದಿಂದ ಮೊದಲ ಬಾರಿಗೆ ಚುನಾಯಿತರಾಗಿದ್ದ ಪಿಜಿಆರ್ ಸಿಂಧ್ಯಾ ತಮ್ಮ ಸ್ಥಾನ ಬಿಟ್ಟುಕೊಟ್ಟಿದ್ದರು. ಉಪ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಗೆಲುವು ಸಾಧಿಸಿದ್ದರು.
1984 ರಲ್ಲಿ ರಾಮನಗರದಿಂದ ಹೆಚ್.ಡಿ. ದೇವೇಗೌಡ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಜನತಾದಳ 115 ಸ್ಥಾನಗಳೊಂದಿಗೆ ಅಧಿಕಾರಕ್ಕೇರಿ ದೇವೇಗೌಡರು ಮುಖ್ಯಮಂತ್ರಿ ಆಗಿದ್ದರು. 17 ತಿಂಗಳ ನಂತರ ಅವರು ಪ್ರಧಾನಿ ಹುದ್ದೆಗೇರಿದ್ದರು.
ತಮ್ಮ ತಂದೆಯ ಅದೃಷ್ಟದ ಕ್ಷೇತ್ರ ರಾಮನಗರದಿಂದ 2004ರಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ಶಾಸಕರಾಗಿದ್ದ ಹೆಚ್.ಡಿ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿ ಹುದ್ದೆಗೇರಿದ್ದಾರೆ. ಜೆಡಿಎಸ್ -ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ 20 ತಿಂಗಳು ಅಧಿಕಾರ ನಡೆಸಿದ್ದ ಅವರು 2018ರ ಚುನಾವಣೆಯಲ್ಲಿ ರಾಮನಗರ ಮತ್ತು ಚನ್ನಪಟ್ಟಣ ಕ್ಷೇತ್ರಗಳಿಂದ ಸ್ಪರ್ಧಿಸಿ ಜಯಗಳಿಸಿದ್ದರು. ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡಿದ್ದರು. ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿ 14 ತಿಂಗಳು ಆಡಳಿತ ನಡೆಸಿದ್ದರು. ಇದೀಗ ಜಿಲ್ಲೆಯಿಂದ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯ ಹುದ್ದೆಗೇರಲಿರುವ 5ನೇ ರಾಜಕಾರಣಿಯಾಗಲಿದ್ದಾರೆ.

