HomeLatest NewsBIG NEWS: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪರಿಸರ,‌ ಹವಾಮಾನ ಕ್ಲಬ್ ಕಡ್ದಾಯ ಸ್ಥಾಪನೆಗೆ ಆದೇಶ

BIG NEWS: ರಾಜ್ಯದ ಎಲ್ಲಾ ಶಾಲೆಗಳಲ್ಲಿ ಪರಿಸರ,‌ ಹವಾಮಾನ ಕ್ಲಬ್ ಕಡ್ದಾಯ ಸ್ಥಾಪನೆಗೆ ಆದೇಶ

ಬೆಂಗಳೂರು: ರಾಜ್ಯದ ಎಲ್ಲಾ ಶಾಲೆಗಳಲ್ಲಿಯೂ ಪರಿಸರ,‌ ಹವಾಮಾನ ವೈಪರೀತ್ಯ ಜಾಗೃತಿ ಕ್ಲಬ್ ಗಳನ್ನು ಕಡ್ಡಾಯವಾಗಿ ರಚನೆ ಮಾಡಬೇಕು ಎಂದು ಆದೇಶ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿಶ್ವ ಪರಿಸರ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಮ್ಯಾರಥಾನ್ ಗೆ ವಿಧಾನಸೌಧದ ಎದುರು ಚಾಲನೆ ನೀಡಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕನಿಷ್ಠ 25 ವಿದ್ಯಾರ್ಥಿಗಳನ್ನು ಒಳಗೊಂಡಂತೆ ಈ ಜಾಗೃತಿ ಕ್ಲಬ್ ಗಳನ್ನು ರಚನೆ ಮಾಡಬೇಕು. ಪ್ರಕೃತಿ ಉಳಿಸುವ ದೊಡ್ಡ ಹೋರಾಟದ ಹಾಗೂ ಜಾಗೃತಿ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಬೇಕು ಎಂದು ಈ ಆದೇಶ ಮಾಡಲಾಗಿದೆ. ಒಂದೊಂದು ಶಾಲೆ ಮರ ಬೆಳೆಸಲು ಆಯಾಯ ಪ್ರದೇಶಗಳನ್ನು ದತ್ತು ಪಡೆಯಬೇಕು ಎಂದು ತಿಳಿಸಿದರು.

ಹಸಿರು ಮತ್ತು ಸ್ವಚ್ಚತೆ ಇದೇ ನಮ್ಮ ಸರ್ಕಾರದ ಧ್ಯೇಯ. ಇದರ ಬಗ್ಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವುದು ಸರ್ಕಾರದ ಕರ್ತವ್ಯ. ಕರ್ನಾಟಕದ‌ ದೊಡ್ಡ ಆಸ್ತಿಯೇ ನಮ್ಮ ಪ್ರಕೃತಿ. ಪ್ಲಾಸ್ಟಿಕ್ ಅನ್ನು ನಿರ್ಮೂಲನೆ ಮಾಡುವುದು ನಮ್ಮ ಉದ್ದೇಶ, ಜವಾಬ್ದಾರಿಯಾಗಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿಯೊಬ್ಬ ವಿದ್ಯಾರ್ಥಿ ಒಂದೊಂದು ಸಸಿಯನ್ನು ದತ್ತು ಪಡೆಯಬೇಕು ಎಂದು ತಿಳಿಸಲಾಗಿದೆ. ಈಗಾಗಲೇ 50 ಸಾವಿರಕ್ಕೂ ಹೆಚ್ಚು ಮಕ್ಕಳು ಈ ಪ್ರಕ್ರಿಯೆಯಲ್ಲಿ ಇದ್ದಾರೆ.‌ ಎರಡು ದಿನದ ಹಿಂದೆ ದೆಹಲಿ,‌ ಅಹಮದಾಬಾದ್‌ ನಲ್ಲಿ‌ ಇದ್ದೆ ಅಲ್ಲಿನ ಉಷ್ಣಾಂಶ ಹತ್ತಿರತ್ತಿರ ‌49 ಡಿಗ್ರಿಯಿತ್ತು.‌ ಬೆಂಗಳೂರಲ್ಲಿ 22- 23 ಇದೆ. ಈ ವಾತಾವರಣ ನಮ್ಮ ಕರ್ನಾಟಕದ,‌ ಬೆಂಗಳೂರಿನ ಆಸ್ತಿ ಎಂದು ತಿಳಿಸಿದರು.

ಮನುಷ್ಯ ಹಾಗೂ ಅವನ ಜೀವನ ಪದ್ಧತಿ ಪ್ರಕೃತಿಯ ಜೊತೆ ಬೆಸೆದುಕೊಂಡಿದೆ. ನಾವೆಲ್ಲರೂ ಪರಿಸರದ ಒಂದು ಭಾಗವಷ್ಟೇ. ಶುದ್ದ ಗಾಳಿ, ನೀರು, ಪರಿಸರ ನಿರ್ಮಾಣ ನಮ್ಮೆಲ್ಲರ ಅತಿದೊಡ್ಡ ಜವಾಬ್ದಾರಿ. ಪರಿಸರ ಉಳಿಸುವ ಅರಿವು ಯುವ ಜನಾಂಗಕ್ಕೆ ಬರಬೇಕು. ಪರಿಸರ ನಮ್ಮ‌ ಮನೆ ಅದನ್ನು ನಾಶ‌ ಮಾಡದೇ ಇರುವಂತೆ ನಾವೆಲ್ಲರೂ ಹೆಜ್ಜೆ ಹಾಕಬೇಕಿದೆ ಎಂದರು.

ಸುಮಾರು 5 ಸಾವಿರಕ್ಕೂ ಹೆಚ್ಚು ಸ್ಕೌಟ್ ಮತ್ತು ಗೈಡ್ಸ್ ಮಕ್ಕಳು ವಿಧಾನಸೌಧದ ಸುತ್ತಲೂ ನಡಿಗೆ ಮಾಡಿ ಜನರಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ. ನಾನು ಸಹ ಶಾಲಾ ದಿನಗಳಲ್ಲಿ ಇದರ ಭಾಗವಾಗಿದ್ದವನು. ಈ ಸಂಘಟನೆ ಬೆಳೆಸುವುದು ನಮ್ಮ ಬದ್ಧತೆ. ಪರಿಸರ ದಿನಾಚರಣೆ ಮಾಡುವುದು ನಮಗಾಗಿ ಅಲ್ಲ ಮುಂದಿನ ಪೀಳಿಗೆಗಾಗಿ ಎಂದರು.

ವಿದ್ಯಾರ್ಥಿಗಳು ಹಾಗೂ ಯುವ ಸಮುದಾಯಕ್ಕೆ ಪರಿಸರ ಪ್ರಜ್ಞೆ ಬೆಳೆಯಲಿ ಎಂದು ಸರ್ಕಾರ ಹಲವಾರು ಜಾಗೃತಿ ಕಾರ್ಯಕ್ರಮವನ್ನು ಸಚಿವರಾದ ಈಶ್ವರ ಖಂಡ್ರೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರಾದ ನರೇಂದ್ರಸ್ವಾಮಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದೆ ಎಂದು ತಿಳಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಿಸ್ತಿಗೆ ಹೆಸರಾದವರು. ನೀವುಗಳು ರಜೆ ಸಮಯದಲ್ಲಿ ವಿಧಾನಸೌಧವನ್ನು ವೀಕ್ಷಣೆ ಮಾಡಬೇಕು. ಇಡೀ ಪ್ರಪಂಚದಲ್ಲಿ ಎಲ್ಲಿಯೂ ಇಲ್ಲದ ಕೌತುಕ ಇಲ್ಲಿದೆ. ನ್ಯಾಯಾಂಗ,‌ ಕಾರ್ಯಾಂಗ,‌ ಶಾಸಕಾಂಗ ಒಂದೇ‌ ಕಡೆ‌‌ ಸಮಾಗಮವಾಗಿವೆ. ದೇಶದ ಭವಿಷ್ಯವನ್ನು ಚರ್ಚೆ‌ ಮಾಡುವ ಸ್ಥಳ ಇದಾಗಿದೆ ಎಂದರು.

ಇದೇ ವೇಳೆ ಹಸಿರು ಉಳಿಸಿ, ಮರ‌ ಬೆಳೆಸಿ.‌ ಕಸ ತ್ಯಜಿಸಿ ಮರ ಬೆಳೆಸಿ‌‌” ಎಂದು ವಿದ್ಯಾರ್ಥಿಗಳೊಟ್ಟಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಕೂಗಿದರು.

For Latest News Updates, Join Our Whatsapp Community🚩
RELATED ARTICLES

Most Popular