ಬೆಂಗಳೂರು : ಸಾಮಾನ್ಯ ಜನರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ವಾಣಿಜ್ಯ ಬಳಕೆಯ ಎಲ್ಪಿಜಿ (LPG) ಸಿಲಿಂಡರ್ ಬೆಲೆ ಸತತ ಮೂರನೇ ತಿಂಗಳೂ ಏರಿಕೆಯಾಗಿದ್ದು, ಹೋಟೆಲ್ ಉದ್ಯಮದ ಮೇಲೆ ಭಾರಿ ಹೊರೆ ಬಿದ್ದಿದೆ. ಇದರ ಪರಿಣಾಮವಾಗಿ ರಾಜ್ಯದಾದ್ಯಂತ ಹೋಟೆಲ್ ತಿಂಡಿ ಮತ್ತು ಊಟದ ದರಗಳು ಶೀಘ್ರದಲ್ಲೇ ಏರಿಕೆಯಾಗುವ ಸಾಧ್ಯತೆಯಿದ್ದು, ಗ್ರಾಹಕರಲ್ಲಿ ಆತಂಕ ಮನೆಮಾಡಿದೆ.
ಮಾರ್ಚ್ 1, 2026 ರಿಂದ ಜಾರಿಗೆ ಬರುವಂತೆ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 115 ಹೆಚ್ಚಳ ಮಾಡಲಾಗಿದೆ. ಗ್ಯಾಸ್ ದರ ಏರಿಕೆಯಿಂದ ಹೋಟೆಲ್ಗಳ ದೈನಂದಿನ ನಿರ್ವಹಣಾ ವೆಚ್ಚ ಗಗನಕ್ಕೇರುತ್ತಿದೆ. ಈಗಾಗಲೇ ದಿನಸಿ ಮತ್ತು ತರಕಾರಿ ಬೆಲೆ ಏರಿಕೆಯಿಂದ ತತ್ತರಿಸಿರುವ ಹೋಟೆಲ್ ಮಾಲೀಕರಿಗೆ, ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ‘ಗಾಯದ ಮೇಲೆ ಬರೆ’ ಎಳೆದಂತಾಗಿದೆ.
ಗ್ರಾಹಕರ ಜೇಬಿಗೆಕತ್ತರಿ: ಹೆಚ್ಚುತ್ತಿರುವ ವೆಚ್ಚವನ್ನು ಸರಿದೂಗಿಸಲು ಅನಿವಾರ್ಯವಾಗಿ ಊಟ ಮತ್ತು ತಿಂಡಿಯ ದರಗಳನ್ನು ಹೆಚ್ಚಿಸುವ ಬಗ್ಗೆ ಮೈಸೂರು ಹೋಟೆಲ್ ಮಾಲೀಕರ ಸಂಘ ಚಿಂತನೆ ನಡೆಸುತ್ತಿದೆ. ಇದು ಜಾರಿಯಾದಲ್ಲಿ, ಮಧ್ಯಮ ವರ್ಗದ ಮತ್ತು ದಿನನಿತ್ಯ ಹೋಟೆಲ್ ಅವಲಂಬಿಸಿರುವ ಗ್ರಾಹಕರಿಗೆ ದೊಡ್ಡ ಆರ್ಥಿಕ ಹೊರೆಯಾಗಲಿದೆ.
ಒಂದು ಕಡೆ ಹೋಟೆಲ್ ಮಾಲೀಕರು ನಷ್ಟದ ಭೀತಿಯಲ್ಲಿದ್ದರೆ, ಇನ್ನೊಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನಸಾಮಾನ್ಯರು ಹೋಟೆಲ್ ದರ ಏರಿಕೆಯ ಸುದ್ದಿಯಿಂದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

