ನವದೆಹಲಿ: ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕಕ್ಕೆ ಶಾಕ್ ಮೇಲೆ ಶಾಕ್ ಎದುರಾಗಿದೆ. ತಮಿಳುನಾಡಿಗೆ ಪ್ರತಿದಿನ 12,000 ಕ್ಯೂಸೆಕ್ ನೀರು ಬಿಡಬೇಕು ಎಂಬ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಆದೇಶವನ್ನು CWMA ಎತ್ತಿ ಹಿಡಿದಿದೆ.
CWRC ಸಭೆ ಬಳಿಕ ದೆಹಲಿಯಲ್ಲಿ CWMA ಸಭೆ ನಡೆದಿದ್ದು, ಸಭೆಯಲ್ಲಿ ತಮಿಳುನಾಡಿಗೆ ಪ್ರತಿ ದಿನ 12,000 ಕ್ಯೂಸೆಕ್ ನೀರಿನಂತೆ 15 ದಿನಗಳ ಕಾಲ ನೀರು ಹರಿಸಬೇಕು. ಈ ಮೂಲಕ CWRC ಶಿಫಾರಸನ್ನು ಪಾಲಿಸಬೇಕು ಎಂದು ಆದೇಶ ನೀಡಿದೆ.
CWMA ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಗೌರವ್ ಗುಪ್ತಾ, CWMA ಕೂಡ CWRC ಆದೇಶವನ್ನು ಎತ್ತಿ ಹಿಡಿದಿದೆ. ತಮಿಳುನಾಡಿಗೆ ಪ್ರತಿ ದಿನ 12,000 ಕ್ಯೂಸೆಕ್ ನೀರು ಹರಿಸಲೇಬೇಕಾದ ಅನಿವಾರ್ಯತೆ ಇದೆ. CWMA ಆದೇಶದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಿದ್ದೇವೆ ಎಂದರು.
ಮುಂದಿನ ಕಾನೂನು ಹೋರಾಟದ ಬಗ್ಗೆ ತಜ್ಞರ ಜೊತೆ ಚರ್ಚಿಸುತ್ತೇವೆ. ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

