HomeKarnatakaಬಿಜೆಪಿಯಲ್ಲಿಯೂ ಸಿಡಿ ಫ್ಯಾಕ್ಟರಿಗಳಿವೆ: ಅವುಗಳು ಯಾವಾಗ ಹೊರಬರುತ್ತವೆ ನೋಡಬೇಕು: ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಬಿಜೆಪಿಯಲ್ಲಿಯೂ ಸಿಡಿ ಫ್ಯಾಕ್ಟರಿಗಳಿವೆ: ಅವುಗಳು ಯಾವಾಗ ಹೊರಬರುತ್ತವೆ ನೋಡಬೇಕು: ಹೊಸ ಬಾಂಬ್ ಸಿಡಿಸಿದ ಯತ್ನಾಳ್

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸ್ಟಿಂಗ್ ಆಪರೇಷನ್ ಪ್ರಕರಣ ಭಾರಿ ಚರ್ಚೆಯಾಗುತ್ತಿದ್ದು, ಈ ನಡುವೆ ಸ್ಟಿಂಗ್ ಆಪರೇಷನ್ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಬೆಳವಣಿಗೆ ಮಧ್ಯೆಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಬಿಜೆಪಿಯಲ್ಲೂ ಸಿಡಿ ಫ್ಯಾಕ್ಟರಿ ಇದೆ. ಅಲ್ಲಿಯೂ ಕೆಲವು ಸ್ಟಿಂಗ್ ಆಪರೇಷನ್‌ಗಳು ನಡೆದಿವೆ. ಆ ಸಿಡಿಗಳು ಯಾವಾಗ ಹೊರಬರುತ್ತವೆ ಎಂಬುದನ್ನು ನೋಡಬೇಕು ಎಂದು ಶಾಸಕ ಯತ್ನಾಳ್ ಹೇಳಿಕೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ನವದೆಹಲಿಯಲ್ಲಿ ಮಾತನಾಡಿದ ಯತ್ನಾಳ್, ಕರ್ನಾಟಕದಲ್ಲಿ ಎರಡು ಸಿಡಿ ಫ್ಯಾಕ್ಟರಿಗಳಿವೆ ಎಂದು ತಾವು ಬಹಳ ಹಿಂದೆಯೇ ಹೇಳಿದ್ದಾಗಿ ತಿಳಿಸಿದರು. ಒಂದು ಸಿಡಿ ಫ್ಯಾಕ್ಟರಿ ಯಾವುದು ಎಂಬುದು ಎಲ್ಲರಿಗೂ ಗೊತ್ತಾಗಿದೆ. ಮತ್ತೊಂದು ಫ್ಯಾಕ್ಟರಿ ಬಿಜೆಪಿಯಲ್ಲೂ ಇದೆ. ರಾಜಕೀಯ ಎದುರಾಳಿಗಳು ಹಾಗೂ ಭವಿಷ್ಯದಲ್ಲಿ ತಮಗೆ ಅಡ್ಡಿಯಾಗಬಹುದು ಎಂದು ಭಾವಿಸುವವರನ್ನು ಬ್ಲ್ಯಾಕ್‌ಮೇಲ್ ಮಾಡಲು ಇಂತಹ ವಿಡಿಯೋಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕದಲ್ಲಿ ಸಿಡಿ ಮತ್ತು ಸ್ಟಿಂಗ್ ಆಪರೇಷನ್‌ಗಳನ್ನು ಬಳಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುವುದು ಒಂದು ವ್ಯವಹಾರವಾಗಿ ಬೆಳೆದಿದೆ. ರಾಜಕೀಯಕ್ಕೆ ಯಾವುದೋ ನೆಪದಲ್ಲಿ ಪ್ರವೇಶಿಸಿ, ವಿಡಿಯೋಗಳನ್ನು ಮಾಡಿಕೊಂಡು ಹಣಕ್ಕಾಗಿ ಶಾಸಕರನ್ನೇ ಬ್ಲ್ಯಾಕ್‌ಮೇಲ್ ಮಾಡುವ ತಂಡಗಳು ಬೆಂಗಳೂರಿನಲ್ಲಿ ಸಾಕಷ್ಟಿವೆ. ಸ್ಟಿಂಗ್ ಆಪರೆಷನ್, ಸಿಡಿ ಪ್ರಕರಣಗಳಿಂದಾಗಿ ಕರ್ನಾಟಕದ ಹೆಸರು ಹಾಳಾಗುತ್ತಿದೆ ಎಂದರು.

ಸ್ಟಿಂಗ್ ಆಪರೇಷನ್ ಪ್ರಕರಣದ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷರು ಮಾತನಾಡುತ್ತಿಲ್ಲ yಯಾಕೆ ಎಂದು ಪ್ರಶ್ನಿಸಿದ ಯತ್ನಾಳ್, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಈ ವಿಚಾರವಾಗಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನೂ ಈ ವಿಚಾರದಲ್ಲಿ ನೇರವಾಗಿ ಪ್ರಸ್ತಾಪಿಸಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೆಲವರು ನೇರವಾಗಿ ಆರೋಪಗಳನ್ನು ಮಾಡುತ್ತಿದ್ದರೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ದೇಶದಲ್ಲೇ ಇಂತಹ ರಾಜಕೀಯ ಬೆಳವಣಿಗೆ ಕೆಟ್ಟ ಬೆಳವಣಿಗೆಯಾಗಿದೆ ಎಂದು ಯತ್ನಾಳ್ ಅಭಿಪ್ರಾಯಪಟ್ಟರು.

ಇದೇ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒಳಗೊಂಡಿದೆ ಎನ್ನಲಾದ ಸ್ಟಿಂಗ್ ಆಪರೇಷನ್ ಪ್ರಕರಣದ ಬಗ್ಗೆ ಮಾತನಾಡುತ್ತಾ, ರಾಜಕೀಯ ಎದುರಾಳಿಗಳನ್ನು ಬ್ಲ್ಯಾಕ್‌ಮೇಲ್ ಮಾಡುವ ಪ್ರವೃತ್ತಿ ಬೆಳೆದಿದೆ. ಈ ಪ್ರಕರಣದಲ್ಲಿ ತಮ್ಮ ಪಕ್ಷದ ಬಿ.ವೈ. ವಿಜಯೇಂದ್ರ ಅಥವಾ ಆರ್. ಅಶೋಕ್ ಸೇರಿದಂತೆ ಹಲವರ ಪಾತ್ರವಿಲ್ಲ. ಬೇರೆ ಪಕ್ಷದವರು ಅಥವಾ ಎಚ್.ಡಿ. ಕುಮಾರಸ್ವಾಮಿ ಈ ಕೃತ್ಯ ಎಸಗಿದ್ದಾರೆ ಎಂದೂ ತಾವು ಹೇಳುತ್ತಿಲ್ಲ ಎಂದು ಹೇಳಿದರು.

ಕಳೆದ ಹತ್ತು ವರ್ಷಗಳಿಂದ ಇಬ್ಬರು ಉದಯೋನ್ಮುಖ ರಾಜಕಾರಣಿಗಳು ಇಂತಹ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು. ರಾಜಕಾರಣಿಗಳ ವಿಡಿಯೋಗಳನ್ನು ಬಳಸಿಕೊಂಡು ಹಣಕ್ಕಾಗಿ ಬ್ಲ್ಯಾಕ್‌ಮೇಲ್ ಮಾಡುವ ಪ್ರವೃತ್ತಿ ಹಿಂದಿನಿಂದಲೂ ಇದೆ. ರಮೇಶ್ ಜಾರಕಿಹೊಳಿ ಅವರ ಪ್ರಕರಣ. ಈ ಹಿಂದೆ ಇನ್ನಿಬ್ಬರು ಶಾಸಕರ ವಿಡಿಯೋಗಳೂ ಬಹಿರಂಗವಾಗಿದ್ದವು ಎಂದು ಹೇಳಿದರು.

ಹಣಕಾಸಿನ ವ್ಯವಹಾರ ಕುದುರಿದರೆ ಇಂತಹ ಪ್ರಕರಣಗಳು ಅಲ್ಲಿಗೇ ನಿಲ್ಲುತ್ತವೆ. ಇಂತಹ ಕೃತ್ಯಗಳಿಂದ ಕರ್ನಾಟಕದ ರಾಜಕೀಯ ನಾಯಕರ ಪ್ರತಿಷ್ಠೆಗೆ ಧಕ್ಕೆಯಾಗುತ್ತಿದೆ ಮತ್ತು ರಾಜ್ಯದ ಹೆಸರು ಹಾಳಾಗುತ್ತಿದೆ ಎಂದು ಯತ್ನಾಳ್ ಕ್ಳವಳ ವ್ಯಕ್ತಪಡಿಸಿದರು.

ಇನ್ನು ಸ್ಟಿಂಗ್ ಆಪರೇಷನ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಯತ್ನಾಳ್ ಆಗ್ರಹಿಸಿದರು. ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇದ್ದರೂ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ಇಂತಹ ಆರೋಪಗಳು ರಾಜ್ಯದ ಘನತೆಗೆ ಧಕ್ಕೆ ತರುತ್ತವೆ. ಇಂತಹವರ ಕೈಗೆ ರಾಜ್ಯದ ರಾಜಕೀಯ ಹೋಗುವುದರಿಂದ ಕರ್ನಾಟಕದ ಹೆಸರು ದೇಶ-ವಿದೇಶಗಳಲ್ಲಿ ಹಾಳಾಗುವ ಅಪಾಯವಿದೆ ಎಂದರು.

ಬಿಜೆಪಿಗೆ ಮರಳುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ತಾವು ಯಾವುದೇ ರಾಜಕಾರಣಿಯ ಸಂಪರ್ಕದಲ್ಲಿಲ್ಲ ಎಂದು ಹೇಳಿದರು. ಮುಂದಿನ ವಾರ ಮತ್ತೆ ಭೇಟಿಯಾಗೋಣ ಎಂದು ಕೆಲವರು ಹೇಳಿದ್ದಾರೆ. ಆದರೆ, ಬಿಜೆಪಿಗೆ ಮರಳುವ ವಿಚಾರವಾಗಿ ಯಾರನ್ನೂ ಸಂಪರ್ಕಿಸಿಲ್ಲ ಮತ್ತು ಪಕ್ಷಕ್ಕೆ ಸೇರ್ಪಡೆಯಾಗಲು ಯಾರ ಬಳಿಯೂ ಅರ್ಜಿ ಹಾಕಿಲ್ಲ ಎಂದು ಸ್ಪಷ್ಟಪಡಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular