HomeKarnatakaಅನಿರೀಕ್ಷಿತ ಆಲಿಕಲ್ಲು ಮಳೆಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ

ಅನಿರೀಕ್ಷಿತ ಆಲಿಕಲ್ಲು ಮಳೆಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ

ಧಾರವಾಡ:: ಮಾರ್ಚ್ ಮೂರನೇ ವಾರದಲ್ಲಿ ಕಲಘಟಗಿ ಹಾಗೂ ವಿವಿಧ ತಾಲೂಕುಗಳ ಗ್ರಾಮಗಳಲ್ಲಿ ಆಗಿರುವ ಅನಿರೀಕ್ಷಿತ ಆಲ್ಲಿಕಲ್ಲು ಮಳೆಯಿಂದ ಉಂಟಾಗಿರುವ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳಿಗೆ ಪರಿಹಾರ ನೀಡಲು ಸಂಬಂಧಿಸಿದ ಅಧಿಕಾರಿಗಳು ಶೀಘ್ರವಾಗಿ ಸಮೀಕ್ಷೆ ಪೂರ್ಣಗೊಳಿಸಿ, ವರದಿ ಸಲ್ಲಿಸಬೇಕು. ಮತ್ತು ನಿಯಮಾನುಸಾರ ರೈತರಿಗೆ ಪರಿಹಾರ ನೀಡಲು ಕ್ರಮವಹಿಸಬೇಕೆಂದು ಕಾರ್ಮಿಕ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್. ಲಾಡ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅವರು ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರದ ಸಭೆ ಜರುಗಿಸಿ, ಮಾತನಾಡಿದರು.

2015 ರಲ್ಲಿ ಇದೇ ರೀತಿ ಆಕಸ್ಮಿಕವಾಗಿ ಜಿಲ್ಲೆಯಲ್ಲಿ ಮಾರ್ಚ್ ತಿಂಗಳಲ್ಲಿ ಆಲಿಕಲ್ಲು ಮಳೆಯಾದ ವರದಿ ಇದೆ. ಈಗ ಹತ್ತು ವರ್ಷಗಳ ನಂತರ ಜಿಲ್ಲೆಯ ಕಲಘಟಗಿ ಹಾಗೂ ಬೇರೆ ತಾಲೂಕುಗಳಲ್ಲಿ ಆಲಿಕಲ್ಲು ಮಳೆಯಾಗಿ ಮಾವು, ಕಬ್ಬು, ವಿವಿಧ ರೀತಿಯ ಕೃಷಿ, ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳು ಸೇರಿದಂತೆ ಹಿಂಗಾರು ಹಾಗೂ ಬೇಸಿಗೆ ಅವಧಿಯ ಬೆಳೆಗಳು ಹಾನಿಯಾಗಿವೆ. ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆ ಮಾಡಿ, ಶೀಘ್ರವಾಗಿ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಲು ಸಚಿವರು ನಿರ್ದೇಶಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಲಘಟಗಿ ತಾಲೂಕಿನಲ್ಲಿ ಮಾವು ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಮಾವು ಸೇರಿದಂತೆ ವಿವಿಧ ಬೆಳೆಗಳಿಗೆ ರೈತರು ಈಗಾಗಲೇ ಬೆಳೆ ವಿಮೆ ಮಾಡಿಸಿದ್ದಾರೆ. ಅಂತಹ ರೈತರಿಗೆ ವಿಮೆ ಪರಿಹಾರ ದೊರಕುತ್ತದೆ. ಮತ್ತು ಸರ್ಕಾರದಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್‍ಡಿಆರ್‍ಎಫ್) ಹಾಗೂ ರಾಜ್ಯ ವಿಪತ್ತು ಪರಿಹಾರ (ಎಸ್‍ಡಿಆರ್‍ಎಫ್) ನಿಧಿಯಿಂದ ನಿಯಮಾನುಸಾರ ಪರಿಹಾರವನ್ನು ನೀಡಲಾಗುತ್ತಿದೆ. ಇದರೊಂದಿಗೆ ಅಕಾಲಿಕವಾಗಿ ಸುರಿದ ಆಲಿಕಲ್ಲು ಮಳೆಯಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿದಂತೆ ಪರಿಹಾರ ನೀಡಲು ಸರ್ಕಾರಕ್ಕೆ ವಿಶೇಷ ಅನುದಾನ ಕೋರಿ ಪ್ರಸ್ತಾವನೆಯನ್ನು ಸಲ್ಲಿಸಲು ಜಿಲ್ಲಾಡಳಿತ ಕ್ರಮವಹಿಸಬೇಕೆಂದು ಸಚಿವ ಸಂತೋಷ ಲಾಡ್ ಅವರು ತಿಳಿಸಿದರು.

ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾನಿಯಾಗಿರುವ ಪ್ರತಿ ಕ್ಷೇತ್ರಕ್ಕೆ ಖುದ್ದು ಭೇಟಿ ನೀಡಿ, ವಿವರಗಳನ್ನು ದಾಖಲಿಸಬೇಕು. ಯಾವುದೇ ರೈತರು ಸಮೀಕ್ಷೆಯಿಂದ ಹೊರಗುಳಿಯದಂತೆ ಹಾಗೂ ಪರಿಹಾರದಿಂದ ವಂಚಿತರಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಎಚ್ಚರಿಸಿದರು.

 ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು ಮಾತನಾಡಿ, ಬೆಳೆಹಾನಿ ಸಮೀಕ್ಷೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ವರದಿ ಸಲ್ಲಿಸಲಾಗುವುದು. ಮತ್ತು ಬೆಳೆ ವಿಮೆ ಪರಿಹಾರ ವಿತರಿಸಲು ಕ್ರಮವಹಿಸುವಂತೆ ವಿಮೆ ಕಂಪನಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮಹಾನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಡಾ. ರುದ್ರೇಶ ಎಸ್.ಘಾಳಿ ಅವರು ಸಭೆಯಲ್ಲಿ ಮಾತನಾಡಿದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ವಿಶೇಷ ಭೂಸ್ವಾಧೀನ ಅಧಿಕಾರಿ ಕವಿತಾ ಯೋಗಪ್ಪನವರ, ಜಿಲ್ಲಾ ಪಂಚಾಯತ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಹೆಸ್ಕಾಂ ಅಧೀಕ್ಷಕ ಅಭಿಯಂತರ ಕೆ.ವಿ.ಪಾಗಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆಯ ಉಪನಿರ್ದೇಶಕ ಡಾ. ಎಸ್.ವಿ.ಸಂತಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ.ಭದ್ರಣನವರ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ತಹಶೀಲ್ದಾರರು, ತಾಲೂಕಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು, ಕಂದಾಯ, ಪೊಲೀಸ್, ಅಗ್ನಿಶಾಮಕ, ಹೆಸ್ಕಾಂ, ಭೂಸ್ವಾಧೀನ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular