HomeIndiaಕ್ರಿಕೆಟ್ ಆಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು 25 ವರ್ಷದ ಯುವಕ ಸಾವು ; ಆಘಾತಕಾರಿ ವೀಡಿಯೋ...

ಕ್ರಿಕೆಟ್ ಆಡುವಾಗಲೇ ಹೃದಯಾಘಾತದಿಂದ ಕುಸಿದುಬಿದ್ದು 25 ವರ್ಷದ ಯುವಕ ಸಾವು ; ಆಘಾತಕಾರಿ ವೀಡಿಯೋ ವೈರಲ್ |WATCH VIDEO

ರಾಜಸ್ಥಾನ: ಕ್ರಿಕೆಟ್ ಮೈದಾನದಲ್ಲಿ ಸ್ನೇಹಿತರೊಂದಿಗೆ ಪಂದ್ಯ ಆಡುತ್ತಿದ್ದ ವೇಳೆ 25 ವರ್ಷದ ಯುವಕನೊಬ್ಬ ಏಕಾಏಕಿ ಎದೆನೋವಿನಿಂದ ಕುಸಿದು ಮೃತಪಟ್ಟಿರುವ ದಾರುಣ ಘಟನೆ ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದಿದೆ.

ಸಾವು ಯಾವಾಗ, ಎಷ್ಟೊತ್ತಿಗೆ ಬರುತ್ತದೆ ಎಂಬುದೇ ಯಾರಿಗೂ ಗೊತ್ತಿರುವುದಿಲ್ಲ. ಸ್ನೇಹಿತರೊಂದಿಗೆ ಕ್ರಿಕೆಟ್ ಆಡಲು ಮೈದಾನಕ್ಕಿಳಿದಿದ್ದ 25 ವರ್ಷದ ಯುವಕನೊಬ್ಬ ಟಾಸ್‌ ಹಾಕಿ ಕೆಲವೇ ಹೊತ್ತಿನಲ್ಲಿ ಬ್ಯಾಟಿಂಗ್ ಆರಂಭಿಸಿದಾಗ ಏಕಾಏಕಿ ಎದೆನೋವಿನಿಂದ ಕುಸಿದುಬಿದ್ದು ಮೃತಪಟ್ಟಿದ್ದಾನೆ. ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ನಡೆದ ಈ ದುರಂತ ಇಡೀ ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ದೌಸಾ ಜಿಲ್ಲೆಯ ಸಮ್ಲೇಟಿ ಗ್ರಾಮದಲ್ಲಿ ಕೆಲ ಯುವಕರು ಸೇರಿಕೊಂಡು ಕ್ರಿಕೆಟ್ ಆಡುತ್ತಿದ್ದರು. ಇದೇ ಗ್ರಾಮದ 25 ವರ್ಷದ ರಾಮರಾಜ್ ಮೀನಾ ಒಂದು ತಂಡದ ನಾಯಕತ್ವ ವಹಿಸಿದ್ದರು. ಪಂದ್ಯದ ಆರಂಭಕ್ಕೂ ಮುನ್ನ ಟಾಸ್ ನಡೆದಿದ್ದು, ರಾಮರಾಜ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಳಿಕ ಕ್ರೀಸ್‌ಗೆ ತೆರಳಿ ಬ್ಯಾಟಿಂಗ್ ಆರಂಭಿಸಿದ ಕೆಲವೇ ಹೊತ್ತಿನಲ್ಲಿ ರಾಮರಾಜ್‌ಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ನೋವಿನಿಂದ ಬಳಲಿದ ಅವರು ಮೈದಾನದಲ್ಲೇ ಕುಸಿದುಬಿದ್ದಿದ್ದಾರೆ. ಇದರಿಂದ ಸ್ಥಳದಲ್ಲಿದ್ದ ಸ್ನೇಹಿತರು ಆತಂಕಗೊಂಡಿದ್ದು, ತಕ್ಷಣ ಅವರನ್ನು ಮಹ್ವಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಆಸ್ಪತ್ರೆಯಲ್ಲಿ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜೈಪುರಕ್ಕೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಕುಟುಂಬ ಸದಸ್ಯರು ರಾಮರಾಜ್ ಅವರನ್ನು ಜೈಪುರದ ಎಸ್‌ಎಂಎಸ್ ಆಸ್ಪತ್ರೆಗೆ ದಾಖಲಿಸಲು ಕರೆದೊಯ್ದರಾದರೂ, ಪರೀಕ್ಷಿಸಿದ ವೈದ್ಯರು ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಹೃದಯಾಘಾತ ಶಂಕೆ

ಪ್ರಾಥಮಿಕ ವಿಚಾರಣೆಯಲ್ಲಿ ಹೃದಯಾಘಾತದಿಂದಲೇ ಈ ಘಟನೆ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಸಾವಿಗೆ ನಿಖರವಾದ ಕಾರಣವನ್ನು ಖಚಿತಪಡಿಸಲು ವೈದ್ಯಕೀಯ ಪರೀಕ್ಷೆಗಳು ಹಾಗೂ ಮುಂದಿನ ಪ್ರಕ್ರಿಯೆಗಳು ನಡೆಯುತ್ತಿವೆ.

ಮಾಹಿತಿ ತಿಳಿದು ಮಹ್ವಾ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ವಿವರಗಳನ್ನು ಸಂಗ್ರಹಿಸಿದ್ದಾರೆ. ಮಹ್ವಾ ಪೊಲೀಸ್ ಠಾಣೆಯ ಇನ್‌ಚಾರ್ಜ್ ಮಹೇಂದ್ರ ಸಿಂಗ್ ಯಾದವ್ ಮಾತನಾಡಿ, ಕ್ರಿಕೆಟ್ ಆಡುತ್ತಿದ್ದ ವೇಳೆ ಯುವಕನಿಗೆ ಹೃದಯಾಘಾತ ಸಂಭವಿಸಿರುವುದಾಗಿ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ. ಈವರೆಗೆ ಕುಟುಂಬ ಸದಸ್ಯರಿಂದ ಯಾವುದೇ ದೂರು ಬಂದಿಲ್ಲ ಎಂದು ಹೇಳಿದ್ದಾರೆ.

ಐದು ತಿಂಗಳ ಹಿಂದಷ್ಟೇ ವಿವಾಹ

ರಾಮರಾಜ್ ಅವರಿಗೆ ಕೇವಲ ಐದು ತಿಂಗಳ ಹಿಂದಷ್ಟೇ ವಿವಾಹವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಸರ್ಕಾರಿ ಉದ್ಯೋಗ ನೇಮಕಾತಿ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು ಎನ್ನಲಾಗಿದೆ.

ಪಂದ್ಯಕ್ಕೂ ಮುನ್ನ ರಾಮರಾಜ್ ತಮ್ಮ ಸ್ನೇಹಿತರೊಂದಿಗೆ ಟಾಸ್ ಹಾಕುತ್ತಿರುವ ದೃಶ್ಯಗಳ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟಾಸ್ ಹಾಕಿದ ಕೆಲವೇ ಹೊತ್ತಿನಲ್ಲಿ ಅವರು ಮೃತಪಟ್ಟಿರುವುದು ಸ್ಥಳೀಯರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

ಹೃದಯಾಘಾತದ ಸಂದರ್ಭದಲ್ಲಿ ಚಿಕಿತ್ಸೆ ಹೇಗೆ?

ಹೃದಯಾಘಾತ ತುರ್ತು ವೈದ್ಯಕೀಯ ಪರಿಸ್ಥಿತಿ. ಅನುಮಾನ ಬಂದ ತಕ್ಷಣ ಚಿಕಿತ್ಸೆ ಆರಂಭಿಸುವುದು ಬಹಳ ಮುಖ್ಯ.

  • ತಕ್ಷಣ 112ಕ್ಕೆ ಕರೆ ಮಾಡಿ ಆಂಬ್ಯುಲೆನ್ಸ್ ಸಹಾಯ ಪಡೆಯಿರಿ. ವ್ಯಕ್ತಿಯನ್ನು ಸ್ವತಃ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುವುದಕ್ಕಿಂತ ಆಂಬ್ಯುಲೆನ್ಸ್‌ ಮೂಲಕ ಕರೆದೊಯ್ಯುವುದು ಸುರಕ್ಷಿತ.

  • ವ್ಯಕ್ತಿಯನ್ನು ಕುಳ್ಳಿರಿಸಿ ಅಥವಾ ಆರಾಮದಾಯಕ ಸ್ಥಿತಿಯಲ್ಲಿ ಇರಿಸಿ ಮತ್ತು ಹೆಚ್ಚು ನಡೆಯಲು ಬಿಡಬೇಡಿ.

  • ವೈದ್ಯರು ಸೂಚಿಸಿದರೆ ಅಥವಾ ತುರ್ತು ಸೇವೆಯ ಸಿಬ್ಬಂದಿ ಸಲಹೆ ನೀಡಿದರೆ ಆಸ್ಪಿರಿನ್ ನೀಡಬಹುದು. ಆದರೆ ಆಸ್ಪಿರಿನ್‌ಗೆ ಅಲರ್ಜಿ, ರಕ್ತಸ್ರಾವದ ಸಮಸ್ಯೆ ಅಥವಾ ವೈದ್ಯಕೀಯ ನಿರ್ಬಂಧವಿದ್ದರೆ ನೀಡಬಾರದು.

  • ಆಸ್ಪತ್ರೆಯಲ್ಲಿ ಸಾಮಾನ್ಯವಾಗಿ ECG, ರಕ್ತ ಪರೀಕ್ಷೆಗಳು ಮತ್ತು ಇತರ ಪರೀಕ್ಷೆಗಳ ಮೂಲಕ ಹೃದಯಾಘಾತವನ್ನು ದೃಢಪಡಿಸಲಾಗುತ್ತದೆ.

  • ಪರಿಸ್ಥಿತಿಗೆ ಅನುಗುಣವಾಗಿ ವೈದ್ಯರು ಔಷಧಿ, ಆಂಜಿಯೋಪ್ಲಾಸ್ಟಿ/ಸ್ಟೆಂಟ್ ಅಥವಾ ಇತರ ತುರ್ತು ಚಿಕಿತ್ಸೆಯನ್ನು ನೀಡಬಹುದು.

  • ವ್ಯಕ್ತಿ ಪ್ರಜ್ಞೆ ಕಳೆದುಕೊಂಡು ಉಸಿರಾಡದಿದ್ದರೆ, ತಕ್ಷಣ CPR ಆರಂಭಿಸಿ ಮತ್ತು AED ಲಭ್ಯವಿದ್ದರೆ ಬಳಸಬೇಕು.

ಮುಖ್ಯವಾಗಿ: ಎದೆನೋವು, ಎದೆ ಬಿಗಿತ, ಉಸಿರಾಟದ ತೊಂದರೆ, ತಣ್ಣನೆಯ ಬೆವರು, ವಾಂತಿ ಅಥವಾ ನೋವು ಕೈ/ದವಡೆ/ಬೆನ್ನಿಗೆ ಹರಡುವುದು ಕಂಡುಬಂದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು. ಲಕ್ಷಣಗಳು ಕಡಿಮೆಯಾಗುವವರೆಗೆ ಕಾಯಬೇಡಿ. ತಕ್ಷಣ ತುರ್ತು ವೈದ್ಯಕೀಯ ನೆರವು ಪಡೆಯಿರಿ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular