ಬೆಂಗಳೂರು: ಕ್ರಿಕೆಟ್ ವಿಚಾರಕ್ಕೆ ಸಂಬಂಧಿಸಿದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವೀರಸಂದ್ರ ನಿವಾಸಿ ಪ್ರಶಾಂತ್(35) ಕೊಲೆಯಾದ ಯುವಕ. ಆರೋಪಿ ವಿಜ್ಞಾನ ನಗರ ನಿವಾಸಿ ರೋಷನ್ ಹೆಗಡೆಯನ್ನು ಪೊಲೀಸ್ ಸರು ಬಂಧಿಸಿದ್ದಾರೆ. ಜನವರಿ 25ರಂದು ಕಮ್ಮಸಂದ್ರದ ಕ್ರಿಕೆಟ್ ಆಟದ ಮೈದಾನದಲ್ಲಿ ಕೃತ್ಯ ನಡೆದಿದೆ. ಬ್ರಹ್ಮಾವರ ಮೂಲದ ರೋಷನ್ ಹೆಗಡೆ ದೊಮ್ಮಲೂರಿನ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ವೀರಸಂದ್ರ ನಿವಾಸಿಯಾಗಿರುವ ಪ್ರಶಾಂತ್ ಖಾಸಗಿ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.
ಜನವರಿ 25ರಂದು ಕಮ್ಮಸಂದ್ರದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿದ್ದು, ಇಬ್ಬರೂ ಮೈದಾನಕ್ಕೆ ಬಂದಿದ್ದರು. ಈ ವೇಳೆ ಇಬ್ಬರ ನಡುವೆ ಗಲಾಟೆಯಾಗಿ ಹೊಡೆದಾಡಿಕೊಂಡಿದ್ದಾರೆ. ಸ್ಥಳದಲ್ಲಿದ್ದವರು ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ. ನಂತರ ರೋಶನ್ ಹೆಗಡೆ ತಮ್ಮ ಕಾರ್ ನಲ್ಲಿ ಮನೆಗೆ ಹೊರಟಿದ್ದಾಗ ಕಾರ್ ನ ಫುಟ್ ರೆಸ್ಟ್ ಮೇಲೆ ನಿಂತು ಪ್ರಶಾಂತ್ ನಿಂದಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ಆರೋಪಿ ವೇಗವಾಗಿ ಕಾರ್ ಚಾಲನೆ ಮಾಡಿಕೊಂಡು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಪ್ರಶಾಂತ್ ತಲೆ ಮತ್ತು ಎದೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಬ್ಬಗೋಡಿ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಡಿಸಿಪಿ ನಾರಾಯಣ್ ಮಾಹಿತಿ ನೀಡಿದ್ದಾರೆ.

