ಬೆಂಗಳೂರು: ಜಗತ್ತಿನ ಬಹುತೇಕ ಎಲ್ಲಾ ಜೀವಿಗಳಿಗೆ ಹೃದಯ ಮತ್ತು ಮೆದುಳು ಬದುಕಲು ಅತಿ ಮುಖ್ಯ. ಆದರೆ ಸಮುದ್ರದ ಆಳದಲ್ಲಿ ವಾಸಿಸುವ ಒಂದು ವಿಚಿತ್ರ ಜೀವಿ ಇವು ಯಾವುದೂ ಇಲ್ಲದಿದ್ದರೂ ಬರೋಬ್ಬರಿ 35 ವರ್ಷಗಳ ಕಾಲ ಆರಾಮವಾಗಿ ಬದುಕುತ್ತದೆ ವಿಜ್ಞಾನಿಗಳನ್ನೇ ಬೆರಗುಗೊಳಿಸಿರುವ ಆ ಜೀವಿ ಮತ್ಯಾವುದೂ ಅಲ್ಲ, ಅದುವೇ ನಕ್ಷತ್ರ ಮೀನು (Starfish).
ಮೆದುಳಿಲ್ಲದಿದ್ದರೂ ಚುರುಕು ಈ ಮೀನು
ನಕ್ಷತ್ರ ಮೀನಿಗೆ ನಮ್ಮಂತೆ ಮೆದುಳು ಇಲ್ಲ. ಬದಲಿಗೆ ಇದು ಒಂದು ವಿಶೇಷವಾದ ನರಮಂಡಲ (Nervous System) ಹೊಂದಿದೆ. ಇದರ ಬಾಯಿಯ ಸುತ್ತ ಇರುವ ನರ ಉಂಗುರಗಳು ಇಡೀ ದೇಹವನ್ನು ನಿಯಂತ್ರಿಸುತ್ತವೆ. ಪ್ರತಿಯೊಂದು ರೆಕ್ಕೆಯಲ್ಲಿರುವ ನರಗಳು ಸ್ಪರ್ಶ ಮತ್ತು ಚಲನೆಯನ್ನು ಗಮನಿಸುತ್ತವೆ. ಅಂದರೆ ಇದರ ದೇಹದ ಒಂದೊಂದು ಭಾಗವೂ ಸ್ವತಂತ್ರವಾಗಿ ಕೆಲಸ ಮಾಡುವ ಸಾಮರ್ಥ್ಯ ಹೊಂದಿದೆ
ರಕ್ತದ ಬದಲು ದೇಹದಲ್ಲಿ ಹರಿಯುತ್ತೆ ಸಮುದ್ರದ ನೀರು
ನಕ್ಷತ್ರ ಮೀನಿನ ದೇಹದಲ್ಲಿ ಕೆಂಪು ರಕ್ತವಿಲ್ಲ. ಇದರ ಬದಲು ಇದು ಸಮುದ್ರದ ನೀರನ್ನೇ ತನ್ನ ದೇಹದೊಳಗೆ ಪಂಪ್ ಮಾಡಿಕೊಳ್ಳುತ್ತದೆ. ಈ ನೀರೇ ದೇಹದ ಪ್ರತಿಯೊಂದು ಅಂಗಕ್ಕೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತಲುಪಿಸುತ್ತದೆ. ಇದೊಂದು ಅದ್ಭುತ ಹೈಡ್ರಾಲಿಕ್ ವ್ಯವಸ್ಥೆಯಂತೆ ಕೆಲಸ ಮಾಡುತ್ತದೆ.
ರೆಕ್ಕೆಗಳ ತುದಿಯಲ್ಲಿದೆ ಕಣ್ಣುಗಳು
ಇದಕ್ಕೆ ಮುಖದ ಮೇಲೆ ಕಣ್ಣುಗಳಿಲ್ಲ, ಬದಲಿಗೆ ತನ್ನ ಪ್ರತಿಯೊಂದು ರೆಕ್ಕೆಯ ತುದಿಯಲ್ಲಿ ಐಸ್ಪಾಟ್ಗಳು (Eyespots) ಎಂಬ ಸಣ್ಣ ಕಣ್ಣುಗಳನ್ನು ಹೊಂದಿದೆ. ಇವುಗಳ ಸಹಾಯದಿಂದ ಬೆಳಕು ಮತ್ತು ಕತ್ತಲೆಯನ್ನು ಇದು ಗುರುತಿಸುತ್ತದೆ. ಅಷ್ಟೇ ಅಲ್ಲ, ಇದಕ್ಕೆ ವಾಸನೆ ಮತ್ತು ಸ್ಪರ್ಶವನ್ನು ಗ್ರಹಿಸುವ ಅದ್ಭುತ ಶಕ್ತಿಯಿದೆ.
ಕತ್ತರಿಸಿದ ಅಂಗ ಮತ್ತೆ ಬೆಳೆಯುತ್ತೆ (Regeneration)
ನಕ್ಷತ್ರ ಮೀನಿನ ಅತ್ಯಂತ ವಿಶೇಷ ಗುಣವೆಂದರೆ ಅದರ ಪುನರುತ್ಪಾದನಾ ಸಾಮರ್ಥ್ಯ. ಒಂದು ವೇಳೆ ಇದರ ಒಂದು ತೋಳು ಅಥವಾ ರೆಕ್ಕೆ ಕತ್ತರಿಸಲ್ಪಟ್ಟರೆ, ಅದನ್ನು ಮತ್ತೆ ಬೆಳೆಸಿಕೊಳ್ಳುವ ಅದ್ಭುತ ಶಕ್ತಿ ಇದಕ್ಕೆ ಪ್ರಕೃತಿ ನೀಡಿದೆ.
ನೂರಾರು ಪಾದಗಳು, ವಿಚಿತ್ರ ಹೊಟ್ಟೆ
ಇದರ ದೇಹದ ಕೆಳಭಾಗದಲ್ಲಿ ನೂರಾರು ಸಣ್ಣ ಕೊಳವೆಯಾಕಾರದ ಪಾದಗಳಿದ್ದು, ನೀರಿನ ಒತ್ತಡದ ಸಹಾಯದಿಂದ ಇದು ಸಮುದ್ರದ ತಳದಲ್ಲಿ ತೆವಳುತ್ತದೆ. ಆಹಾರವನ್ನು ಜೀರ್ಣಿಸಿಕೊಳ್ಳಲು ಇದು ತನ್ನ ಹೊಟ್ಟೆಯನ್ನೇ ದೇಹದಿಂದ ಹೊರಹಾಕಬಲ್ಲ ವಿಶಿಷ್ಟ ಜೀರ್ಣಕ್ರಿಯ ವ್ಯವಸ್ಥೆಯನ್ನು ಹೊಂದಿದೆ

