ಬೆಂಗಳೂರು: ಬೆಂಗಳೂರಿನ ಡಿ.ಜೆ.ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಕಿಡಿಗೇಡಿಯೊಬ್ಬ ಬೆಂಕಿ ಹಚ್ಚಿ ಆರು ಹಸುಗಳ ಸಜೀವದಹನ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮೊಹಮ್ಮದ್ ಇಮ್ರಾನ್ (49) ಎಂದು ಗುರುತಿಸಲಾಗಿದೆ. ಡಿ.ಜೆ ಹಳ್ಳಿ ಬಳಿಯ ಶಾಂಪುರ ರಸ್ತೆಯಲ್ಲಿ ಎಪ್ರಿಲ್ 7ರಂದು ಆರೋಪಿ ಎಸಗಿದ ಕೃತ್ಯದಿಂದ ಶ್ರೀನಿವಾಸ್ ಎಂಬುವರ ಆರು ಹಸುಗಳು ಸಾವನ್ನಪ್ಪಿದ್ದವು.
ಶಾಂಪುರ ರಸ್ತೆಯಲ್ಲಿನ ಪ್ಲೈವುಡ್ ಅಂಗಡಿಯಲ್ಲಿ ಮಂಗಳವಾರ ಬೆಳಗಿನ ಜಾವ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿಯ ಕೆನ್ನಾಲಿಗೆ ಕ್ಷಣಾರ್ಧದಲ್ಲಿ ಪಕ್ಕದಲ್ಲಿದ್ದ ಶ್ರೀನಿವಾಸ್ ಎಂಬುವರಿಗೆ ಸೇರಿದ ದನದ ಕೊಟ್ಟಿಗೆಗೆ ವ್ಯಾಪಿಸಿದ ಪರಿಣಾಮ ಆರು ಹಸುಗಳು ಹೊರಬರಲಾಗದೆ ಸಜೀವ ದಹನವಾಗಿದ್ದವು. ಬೆಂಕಿ ಅವಘಡ ಆಕಸ್ಮಿಕವಲ್ಲ, ಬದಲಾಗಿ ಕಿಡಿಗೇಡಿಯೊಬ್ಬನ ಕೃತ್ಯ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೆ.ಜಿ ಹಳ್ಳಿ ನಿವಾಸಿಯಾದ ಆರೋಪಿ, ಮನೆಯಲ್ಲಿ ಯಾರೂ ಇಲ್ಲ ಎಂದು ರಾತ್ರಿ ವೇಳೆ ಓಡಾಡುತ್ತಿದ್ದ. ಹಾಗೆ ಓಡಾಡುವಾಗ ನಾಯಿಗಳು ನನ್ನನ್ನು ಅಟ್ಟಾಡಿಸಿದ್ದವು, ಅವುಗಳನ್ನು ಹೆದರಿಸಲು ರಸ್ತೆಯ ಬದಿಯಲ್ಲಿದ್ದ ಕಸಕ್ಕೆ ಬೆಂಕಿ ಹಚ್ಚಿದೆ. ಹಸುಗಳನ್ನು ಕೊಲ್ಲುವ ಉದ್ದೇಶ ಇರಲಿಲ್ಲ ಎಂದು ಪೊಲೀಸರ ತನಿಖೆ ವೇಳೆ ಆರೋಪಿ ಹೇಳಿಕೊಂಡಿದ್ದಾನೆ.
ಸದ್ಯ ತನಿಖೆ ಮುಂದುವರೆದಿದ್ದು ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ವಿಕ್ರಮ್ ಅಮಟೆ ತಿಳಿಸಿದ್ದಾರೆ.

