HomeBusinessಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ದಂಡ: ಗ್ರಾಹಕರ ಆಯೋಗ ಮಹತ್ವದ ತೀರ್ಪು

ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ದಂಡ: ಗ್ರಾಹಕರ ಆಯೋಗ ಮಹತ್ವದ ತೀರ್ಪು

ಧಾರವಾಡ: ಠೇವಣಿ ಹಣ ಮರಳಿಸದ ಅಂಚೆ ಇಲಾಖೆಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗದಿಂದ ದಂಡ ವಿಧಿಸಲಾಗಿದೆ.

ಧಾರವಾಡದ ಯು.ಬಿ. ಹಿಲ್ ನಿವಾಸಿ ಅಶೋಕ ಹುದ್ದಾರ ಎಂಬುವವರು ಇಲ್ಲಿನ ಹೆಡ್ ಪೋಸ್ಟ್ ಕಛೇರಿಯಲ್ಲಿ 15 ವರ್ಷಗಳ ಅವಧಿಯ ಹೆಚ್.ಯು.ಎಫ್/ಪಿ.ಪಿ.ಎಫ್ ಅಕೌಂಟ್ ತೆರೆದು ಸದರಿ ಯೋಜನೆಯಡಿ ಹಣವನ್ನು ತೊಡಗಿಸಿದ್ದರು. ಯೋಜನೆಯು ದಿ:31/03/2015 ರಂದು ಮುಕ್ತಾಯವಾಗಿತ್ತು. ತದನಂತರ ದೂರುದಾರ ಸದರಿ ಯೋಜನೆಯನ್ನು ಮತ್ತೆ 5 ವರ್ಷಗಳ ಅವಧಿಗೆ ಅಂದರೆ 01/04/2015 ರಿಂದ 31/03/2020 ರವರೆಗೆ ಮುಂದುವರೆಸಿದ್ದರು. ಆ ಯೋಜನೆ ದಿ:31/03/2020 ರಂದು ಮುಕ್ತಾಯವಾಗಿದ್ದರೂ ಅಲ್ಲಿಯವರೆಗಿನ ಅವರ ವಂತಿಗೆ ಹಣ ಮತ್ತು ಅದರ ಮೇಲಿನ ಬಡ್ಡಿ ಲೆಕ್ಕ ಹಾಕಿ ಅಂಚೆ ಇಲಾಖೆಯವರು ತನಗೆ ಹಣವನ್ನು ಹಿಂದಿರುಗಿಸದೇ ಸತಾಯಿಸಿ ತೊಂದರೆ ನೀಡಿ, ಸೇವಾ ನ್ಯೂನ್ಯತೆ ಎಸಗಿದ್ದಾರೆ ಎಂದು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಂಚೆ ಇಲಾಖೆಯವರು ಸದರಿ ದೂರಿಗೆ ಆಕ್ಷೇಪಣೆ ಎತ್ತಿ ಕೇಂದ್ರ ಸರ್ಕಾರದ ಸುತ್ತೋಲೆಯಂತೆ ಹೆಚ್.ಯು.ಎಫ್/ಪಿ.ಪಿ.ಎಫ್ ಯೋಜನೆ ಮುಂದುವರೆಸಲು ಅವಕಾಶ ಇರುವುದಿಲ್ಲ. ಕಾರಣ 2015ರ ನಂತರ ಅವಧಿ ಮುಕ್ತಾಯವಾಗಿರುವುದರಿಂದ ಆ ನಂತರದ ಅವಧಿಗೆ ಬಡ್ಡಿಕೊಡಲು ಬರುವುದಿಲ್ಲ ಎಂದಿದ್ದರು. ದೂರುದಾರನಿಗೆ 2015 ರವರೆಗಿನ ಹಣ ಮತ್ತು ನಂತರದ ಅವಧಿಯ ಅವರ ವಂತಿಗೆ ಹಣವನ್ನು ಮಾತ್ರ ಅವರಿಗೆ ವಾಪಸ್ಸು ಕೊಡಬಹುದು ಎಂದು ಅಂಚೆ ಇಲಾಖೆಯವರು ಗ್ರಾಹಕನ ದೂರಿಗೆ ಆಕ್ಷೇಪಿಸಿದ್ದರು.

ಸದರಿ ದೂರಿನ ಬಗ್ಗೆ ಕೂಲಂಕಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ.ಭೂತೆ, ಸದಸ್ಯರಾದ ವಿಶಾಲಾಕ್ಷಿ ಅ. ಬೋಳಶೆಟ್ಟಿ ಹಾಗೂ ಪ್ರಭು. ಸಿ ಹಿರೇಮಠ ಅಂಚೆ ಇಲಾಖೆಯ ಎಲ್ಲ ಆಕ್ಷೇಪಣೆಗಳನ್ನು ತಳ್ಳಿಹಾಕಿ, 2015ರ ನಂತರ ದೂರುದಾರರ ಹಣವನ್ನು ಜನರಲ್ ಪಿಪಿಎಫ್ ಯೋಜನೆಯಡಿ ಅಂಚೆ ಇಲಾಖೆಯವರು ಮುಂದುವರೆಸಿ ಆ ಹಣವನ್ನು ಬೇರೆಕಡೆ ವಿನಿಯೋಗಿಸಿ ಲಾಭ ಪಡೆದು ಈಗ ದೂರುದಾರನಿಗೆ ಬಡ್ಡಿಕೊಡಲು ನಿರಾಕರಿಸುತ್ತಿರುವುದು ಸೇವಾ ನ್ಯೂನ್ಯತೆ ಆಗುತ್ತದೆ ಎಂದು ಅಭಿಪ್ರಾಯಪಟ್ಟು ತೀರ್ಪು ನೀಡಿದ್ದಾರೆ.

ದಿ:28/03/2000 ರಿಂದ ಇಲ್ಲಿಯವರೆಗೆ ದೂರುದಾರನ ವಂತಿಗೆ ಮೇಲೆ ಬಡ್ಡಿ ಲೆಕ್ಕ ಹಾಕಿ ಅಂಚೆ ಇಲಾಖೆಯವರು ಅವರಿಗೆ ಒಟ್ಟು 28,34,686 ರೂ.ಗಳನ್ನು ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ನೀಡುವಂತೆ ಆದೇಶಿಸಿದೆ.  ಸೇವಾ ನ್ಯೂನ್ಯತೆಯಿಂದ ದೂರುದಾರನಿಗೆ ಆಗಿರುವ ತೊಂದರೆ ಮತ್ತು ಹಿಂಸೆಗಾಗಿ 50,000 ರೂ. ಪರಿಹಾರ ಹಾಗೂ 10,000 ರೂ. ಪ್ರಕರಣದ ಖರ್ಚು ವೆಚ್ಚ ಕೊಡಲು ಅಂಚೆ ಇಲಾಖೆಗೆ ನಿರ್ದೇಶನ ನೀಡಲಾಗಿದೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular