ರಾಜಸ್ಥಾನದ ಉದಯಪುರದಲ್ಲಿ ಖಾಸಗಿ ಐಟಿ ಕಂಪನಿಯೊಂದರ ಮಹಿಳಾ ಮ್ಯಾನೇಜರ್ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿದೆ. ತನ್ನದೇ ಕಂಪನಿಯ ಸಿಇಒ ಮತ್ತು ಎಕ್ಸಿಕ್ಯೂಟಿವ್ ಹೆಡ್ ಸೇರಿಕೊಂಡು ಈ ಕೃತ್ಯ ಎಸಗಿದ್ದಾರೆ ಎಂದು ಸಂತ್ರಸ್ತ ಯುವತಿ ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕಂಪನಿಯ ಸಿಇಒ ಸೇರಿ ಮೂವರನ್ನು ಬಂಧಿಸಿದ್ದಾರೆ.
ವರದಿಗಳ ಪ್ರಕಾರ, ಡಿಸೆಂಬರ್ 20 ರಂದು ಕಂಪನಿಯು ವರ್ಷಾಂತ್ಯದ ಸಂಭ್ರಮಾಚರಣೆ ಮತ್ತು ಸಿಇಒ ಅವರ ಜನ್ಮದಿನದ ಪಾರ್ಟಿಯನ್ನು ಆಯೋಜಿಸಿತ್ತು. ರಾತ್ರಿ 9 ಗಂಟೆಗೆ ಆರಂಭವಾದ ಈ ಪಾರ್ಟಿಯಲ್ಲಿ ಮದ್ಯಪಾನ ಮತ್ತು ನೃತ್ಯದ ಮೋಜು ಮಸ್ತಿ ಇತ್ತು. ಮಧ್ಯರಾತ್ರಿಯ ವೇಳೆಗೆ ಸಂತ್ರಸ್ತ ಯುವತಿಯ ಆರೋಗ್ಯ ಹದಗೆಟ್ಟಾಗ, ಆಕೆಯನ್ನು ಮನೆಗೆ ಬಿಡುವುದಾಗಿ ಕಂಪನಿಯ ಮಹಿಳಾ ಎಕ್ಸಿಕ್ಯೂಟಿವ್ ಹೆಡ್ ಹೇಳಿದ್ದರು. ಅದರಂತೆ ಬೆಳಗಿನ ಜಾವ 1:45 ರ ಸುಮಾರಿಗೆ ಯುವತಿಯನ್ನು ಕಾರಿನಲ್ಲಿ ಕೂರಿಸಿಕೊಳ್ಳಲಾಗಿತ್ತು.
ಕಾರಿನಲ್ಲಿ ಸಿಇಒ, ಮಹಿಳಾ ಎಕ್ಸಿಕ್ಯೂಟಿವ್ ಹೆಡ್ ಮತ್ತು ಆಕೆಯ ಪತಿ ಇದ್ದರು. ದಾರಿಯಲ್ಲಿ ಸಿಗರೇಟ್‌ನಂತಹ ವಸ್ತುವೊಂದನ್ನು ಯುವತಿಗೆ ನೀಡಲಾಗಿದ್ದು, ಅದನ್ನು ಸೇವಿಸಿದ ನಂತರ ಆಕೆ ಸಂಪೂರ್ಣವಾಗಿ ಪ್ರಜ್ಞೆ ತಪ್ಪಿದ್ದಾರೆ. ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿದ್ದ ಯುವತಿಯ ಮೇಲೆ ಸಿಇಒ ಮತ್ತು ಎಕ್ಸಿಕ್ಯೂಟಿವ್ ಹೆಡ್‌ನ ಪತಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದೆ. ಈ ಘೋರ ಕೃತ್ಯಕ್ಕೆ ಮಹಿಳಾ ಎಕ್ಸಿಕ್ಯೂಟಿವ್ ಹೆಡ್ ಕೂಡ ಸಹಕರಿಸಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಡ್ಯಾಶ್‌ಕ್ಯಾಮ್‌ನಲ್ಲಿ ಸೆರೆಯಾದ ಸಾಕ್ಷಿ
ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ಯುವತಿಯನ್ನು ಮನೆಯ ಬಳಿ ಬಿಟ್ಟು ಹೋಗಲಾಗಿತ್ತು. ಮರುದಿನ ಎಚ್ಚರವಾದಾಗ ಯುವತಿಯ ಮೈಮೇಲೆ ಗಾಯದ ಗುರುತುಗಳಿದ್ದವು. ಅಲ್ಲದೆ ಆಕೆಯ ಒಳ ಉಡುಪುಗಳು ಮತ್ತು ಒಂದು ಕಿವಿಯೋಲೆ ನಾಪತ್ತೆಯಾಗಿದ್ದವು. ಕೂಡಲೇ ಅನುಮಾನಗೊಂಡ ಯುವತಿ ತನ್ನ ಕಾರಿನ ಡ್ಯಾಶ್‌ಕ್ಯಾಮ್ ಆಡಿಯೋ ಮತ್ತು ವಿಡಿಯೋವನ್ನು ಪರಿಶೀಲಿಸಿದಾಗ, ಅಲ್ಲಿ ಇಡೀ ಘಟನೆಯು ರೆಕಾರ್ಡ್ ಆಗಿರುವುದು ಕಂಡುಬಂದಿದೆ. ಈ ಭದ್ರವಾದ ಸಾಕ್ಷಿಯನ್ನು ಹಿಡಿದು ಯುವತಿ ಪೊಲೀಸರ ಮೆಟ್ಟಿಲೇರಿದ್ದಾರೆ.
ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು, ತನಿಖೆ ಮುಂದುವರಿಸಿದ್ದಾರೆ. ವೃತ್ತಿಪರ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಈ ಘಟನೆ ಮತ್ತೆ ಆತಂಕ ಮೂಡಿಸಿದೆ.

