HomeIndiaʼಸಹಿ ಹಾಕಿದ ತಕ್ಷಣ ಎಲ್ಲವೂ ಒಪ್ಪಿಕೊಂಡಂತೆ ಅಲ್ಲʼ ; ವಿಮೆ ಪ್ರಕರಣದಲ್ಲಿ ಗ್ರಾಹಕರ ನ್ಯಾಯಾಲಯದ ಮಹತ್ವದ...

ʼಸಹಿ ಹಾಕಿದ ತಕ್ಷಣ ಎಲ್ಲವೂ ಒಪ್ಪಿಕೊಂಡಂತೆ ಅಲ್ಲʼ ; ವಿಮೆ ಪ್ರಕರಣದಲ್ಲಿ ಗ್ರಾಹಕರ ನ್ಯಾಯಾಲಯದ ಮಹತ್ವದ ಆದೇಶ !

ಹಿರಿಯ ನಾಗರಿಕರಿಗೆ ಹೂಡಿಕೆಯ ಹೆಸರಿನಲ್ಲಿ ತಪ್ಪುದಾರಿಗೆಳೆದು, ಗೋಜಲು ನಿಯಮಗಳಿರುವ ದುಬಾರಿ ಇನ್ಶೂರೆನ್ಸ್ ಪಾಲಿಸಿಗಳನ್ನು ಬಲವಂತವಾಗಿ ಅಂಟಿಸುವ ಬ್ಯಾಂಕ್‌ಗಳು ಹಾಗೂ ವಿಮಾ ಕಂಪನಿಗಳಿಗೆ ಹೈದರಾಬಾದ್ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಬಿಸಿ ಮುಟ್ಟಿಸಿದೆ.

ಅಮೆರಿಕದಲ್ಲಿದ್ದ ಮಗನಿಗೆ ಹಣ ಕಳುಹಿಸಲು ಬ್ಯಾಂಕಿಗೆ ಹೋಗಿದ್ದ 73 ವರ್ಷದ ನಿವೃತ್ತ ಅಸೋಸಿಯೇಟ್ ಪ್ರೊಫೆಸರ್ ಒಬ್ಬರಿಗೆ ಮೋಸದಿಂದ ₹10 ಲಕ್ಷ ಮೌಲ್ಯದ ಇನ್ಶೂರೆನ್ಸ್ ಪಾಲಿಸಿ ಮಾರಿದ್ದ ಪ್ರಕರಣದಲ್ಲಿ, ಆಯೋಗವು ಪಾಲಿಸಿಯನ್ನು ರದ್ದುಗೊಳಿಸಿ ₹10 ಲಕ್ಷ ಹೂಡಿಕೆ ಹಣವನ್ನು ವಾಪಸ್ ನೀಡುವಂತೆ ಆದೇಶಿಸಿದೆ. ಜೊತೆಗೆ ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರ ಪದ್ಧತಿಗಾಗಿ ಬ್ಯಾಂಕ್ ಮತ್ತು ವಿಮಾ ಕಂಪನಿಗೆ ₹50,000 ಪರಿಹಾರ ಹಾಗೂ ₹10,000 ನ್ಯಾಯಾಲಯ ವೆಚ್ಚ ಸೇರಿ ಒಟ್ಟು ₹10.6 ಲಕ್ಷ ಪರಿಹಾರ ನೀಡುವಂತೆ ಮಹತ್ವದ ತೀರ್ಪು ನೀಡಿದೆ.

ಗ್ರಾಹಕರು ದಾಖಲೆಗಳಿಗೆ ಕೇವಲ ಸಹಿ ಹಾಕಿದ ಮಾತ್ರಕ್ಕೆ, ಅವರು ಪಾಲಿಸಿಯ ಸಂಕೀರ್ಣ ನಿಯಮಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದಾರೆ ಎಂದರ್ಥವಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಏನಿದು ಮೋಸದ ಪ್ರಕರಣ ?

ದೂರಿನ ಪ್ರಕಾರ, 73 ವರ್ಷದ ನಿವೃತ್ತ ಪ್ರೊಫೆಸರ್ 2023ರ ಸೆಪ್ಟೆಂಬರ್ 4 ರಂದು ಅಮೆರಿಕದಲ್ಲಿದ್ದ ತಮ್ಮ ಪುತ್ರನಿಗೆ ಹಣ ವರ್ಗಾಯಿಸಲು ಬ್ಯಾಂಕ್ ಶಾಖೆಗೆ ತೆರಳಿದ್ದರು. ಈ ವೇಳೆ ಬ್ಯಾಂಕ್ ಅಧಿಕಾರಿಗಳು ಇಬ್ಬರು ಇನ್ಶೂರೆನ್ಸ್ ಏಜೆಂಟರನ್ನು ಪರಿಚಯಿಸಿ, ಇದೊಂದು ಅತ್ಯುತ್ತಮ ಹೂಡಿಕೆ ಯೋಜನೆ ಎಂದು ನಂಬಿಸಿದ್ದಾರೆ.

ಸುಳ್ಳು ಭರವಸೆ: “ಇದು ಕೇವಲ ಒಮ್ಮೆ ಮಾತ್ರ ಮಾಡುವ ₹10 ಲಕ್ಷದ ಹೂಡಿಕೆ (One-time Investment). 4 ವರ್ಷಗಳ ನಂತರ ವಾರ್ಷಿಕ ₹2.67 ಲಕ್ಷ ರಿಟರ್ನ್ಸ್ ಬರುತ್ತದೆ” ಎಂದು ನಂಬಿಸಿದ್ದರು. ಆದರೆ ವಾಸ್ತವದಲ್ಲಿ ಅದು ಪ್ರತಿ ವರ್ಷ ಪ್ರೀಮಿಯಂ ಕಟ್ಟಬೇಕಾದ ರೆಗ್ಯುಲರ್ ಇನ್ಶೂರೆನ್ಸ್ ಪಾಲಿಸಿಯಾಗಿತ್ತು!

ಪಿಂಚಣಿ ₹57 ಸಾವಿರ, ದಾಖಲೆಯಲ್ಲಿ ₹1 ಕೋಟಿ ಆದಾಯ!: ದೂರುದಾರೆ ನಿವೃತ್ತ ಪ್ರೊಫೆಸರ್ ಆಗಿದ್ದು ತಿಂಗಳಿಗೆ ಕೇವಲ ₹57,000 ಪಿಂಚಣಿ ಪಡೆಯುತ್ತಿದ್ದರು. ಆದರೂ ಪಾಲಿಸಿ ಮಂಜೂರು ಮಾಡಿಸಿಕೊಳ್ಳಲು ಆಕೆಯ ವಾರ್ಷಿಕ ಆದಾಯ ಬರೋಬ್ಬರಿ ₹1 ಕೋಟಿ ಎಂದು ಏಜೆಂಟರು ಸುಳ್ಳು ದಾಖಲಿಸಿದ್ದರು.

ಸಾಲದ ದಾಖಲೆಗಳ ನೆಪದಲ್ಲಿ ಆಕೆಯಿಂದ ಸಹಿಗಳನ್ನು ಪಡೆದು, ಅವರ ಖಾತೆಯಲ್ಲಿದ್ದ ₹10 ಲಕ್ಷವನ್ನು ಇನ್ಶೂರೆನ್ಸ್ ಪಾಲಿಸಿಗೆ ವರ್ಗಾಯಿಸಲಾಗಿತ್ತು.

ರದ್ದು ಮಾಡಲು ಹೋದಾಗ ಸಬೂಬು, ಕಣ್ಮುಚ್ಚಿದ ಬ್ಯಾಂಕ್

ಮೋಸ ಹೋಗಿರುವುದು ಗೊತ್ತಾಗಿ ಪಾಲಿಸಿ ರದ್ದು ಮಾಡಲು ಮಹಿಳೆ ಬ್ಯಾಂಕ್‌ಗೆ ಹೋದಾಗ, “ಈಗ ರದ್ದು ಮಾಡಲು ಆಗುವುದಿಲ್ಲ, ಸೆಪ್ಟೆಂಬರ್ 2024ರಲ್ಲಿ ಬನ್ನಿ” ಎಂದಿದ್ದರು. ಆಕೆ ಅಮೆರಿಕಕ್ಕೆ ತೆರಳಿ ಮಾರ್ಚ್ 2024ರಲ್ಲಿ ಮರಳಿದಾಗ, “ಸೆಪ್ಟೆಂಬರ್ 2025ರಲ್ಲೇ ರದ್ದು ಮಾಡಲು ಸಾಧ್ಯ” ಎಂದು ಸತಾಯಿಸಿದ್ದರು.

ಬ್ಯಾಂಕ್ ಮತ್ತು ವಿಮಾ ಕಂಪನಿಯು, “ನಾವು ಯಾವುದೇ ಖಾಲಿ ಕಾಗದದ ಮೇಲೆ ಸಹಿ ಪಡೆದಿಲ್ಲ, ಗ್ರಾಹಕಿಯ ಒಪ್ಪಿಗೆಯ ಮೇರೆಗೆ ಪಾಲಿಸಿ ನೀಡಲಾಗಿದೆ ಹಾಗೂ ದಾಖಲೆಗಳನ್ನು ಅವರ ವಿಳಾಸಕ್ಕೆ ಕಳುಹಿಸಲಾಗಿದೆ” ಎಂದು ವಾದಿಸಿತ್ತು.

ಗ್ರಾಹಕ ಆಯೋಗದ ವೀಕ್ಷಣೆ

ಆಯೋಗದ ಅಧ್ಯಕ್ಷೆ ಬಿ. ಉಮಾ ವೆಂಕಟ ಸುಬ್ಬಲಕ್ಷ್ಮಿ ಹಾಗೂ ಸದಸ್ಯರಾದ ಸಿ. ಲಕ್ಷ್ಮಿ ಪ್ರಸನ್ನ ಮತ್ತು ಬಿ. ರಾಜಿ ರೆಡ್ಡಿ ಅವರಿದ್ದ ಪೀಠವು ಈ ವಾದಗಳನ್ನು ಸಾರಾಸಗಟಾಗಿ ತಳ್ಳಿಹಾಕಿತು:

ಫ್ರೀ-ಲುಕ್ ಅವಧಿಯ ಹಕ್ಕು ವಂಚನೆ: ಪಾಲಿಸಿ ದಾಖಲೆಗಳನ್ನು ಮಹಿಳೆಯ ಶಾಶ್ವತ ವಿಳಾಸಕ್ಕೆ ಕಳುಹಿಸಲಾಗಿತ್ತು. ಆದರೆ ಆ ಸಮಯದಲ್ಲಿ ಆಕೆ ವಿದೇಶದಲ್ಲಿದ್ದರು. ಕೇವಲ ದಾಖಲೆ ಕಳುಹಿಸಿದರೆ ಸಾಲದು, ಗ್ರಾಹಕರಿಗೆ ಅದನ್ನು ಕೂಲಂಕಷವಾಗಿ ಪರಿಶೀಲಿಸಿ 15 ದಿನಗಳ ‘ಫ್ರೀ-ಲುಕ್ ಅವಧಿ’ಯಲ್ಲಿ ರದ್ದುಪಡಿಸುವ ವಾಸ್ತವಿಕ ಅವಕಾಶ ಸಿಕ್ಕಿರಲಿಲ್ಲ.

ಸಹಿ ಹಾಕಿದ ಮಾತ್ರಕ್ಕೆ ಸಮ್ಮತಿಯಲ್ಲ: ಹಿರಿಯ ನಾಗರಿಕರು ಮತ್ತು ನಿವೃತ್ತ ವೃದ್ಧರು ವಿಮಾ ಕಂಪನಿಗಳ ಅತ್ಯಂತ ಜಟಿಲವಾದ ನಿಯಮಾವಳಿಗಳನ್ನು ತಾವಾಗಿಯೇ ಅರ್ಥಮಾಡಿಕೊಳ್ಳುತ್ತಾರೆ ಎಂದು ಭಾವಿಸುವುದು ತಪ್ಪು. ನಿಯಮಗಳನ್ನು ಸಂಪೂರ್ಣವಾಗಿ ವಿವರಿಸಿ ತಿಳಿಹೇಳುವ ಜವಾಬ್ದಾರಿ ಬ್ಯಾಂಕ್ ಮತ್ತು ಕಂಪನಿಯ ಮೇಲಿತ್ತು.

ಮುಕ್ತ ಸಮ್ಮತಿಯಿಲ್ಲ: ಬ್ಯಾಂಕ್ ಸಾಲದ ಪ್ರಕ್ರಿಯೆ ಮತ್ತು ವಿಮಾ ಹೂಡಿಕೆಯನ್ನು ಬೆರೆಸಿ ಗ್ರಾಹಕಿಯನ್ನು ವಂಚಿಸಲಾಗಿದೆ. ಇಲ್ಲಿ ಗ್ರಾಹಕಿಯ ಸ್ವತಂತ್ರ ಮತ್ತು ಮುಕ್ತ ಸಮ್ಮತಿ (Free and Informed Consent) ಇರಲಿಲ್ಲ ಎಂದು ಆಯೋಗ ತೀರ್ಮಾನಿಸಿತು.

ಗ್ರಾಹಕರಿಗೆ ಎಚ್ಚರಿಕೆಯ ಸಂದೇಶ

ಬ್ಯಾಂಕ್‌ಗಳು ಠೇವಣಿ ಅಥವಾ ಸಾಲದ ಕೆಲಸಕ್ಕೆ ಬರುವ ಮುಗ್ಧ ಗ್ರಾಹಕರಿಗೆ ಹಾಗೂ ಹಿರಿಯ ನಾಗರಿಕರಿಗೆ ತಮ್ಮ ಟಾರ್ಗೆಟ್ ಮುಗಿಸಲು ಇನ್ಶೂರೆನ್ಸ್ ಪಾಲಿಸಿಗಳನ್ನು ಅಂಟಿಸುತ್ತಿರುವ ಇಂದಿನ ದಿನಗಳಲ್ಲಿ ಈ ತೀರ್ಪು ಅತ್ಯಂತ ಮಹತ್ವದ್ದಾಗಿದೆ. ಯಾವುದೇ ವಿಮಾ ಪಾಲಿಸಿಗೆ ಸಹಿ ಹಾಕಿದ ನಂತರ, ಪಾಲಿಸಿ ಬಾಂಡ್ ಕೈಸೇರಿದ ತಕ್ಷಣವೇ ಪ್ರೀಮಿಯಂ, ಪಾವತಿಯ ಅವಧಿ, ನಿಯಮಗಳು ಮತ್ತು 15 ದಿನಗಳ ಒಳಗಾಗಿ ಪಾಲಿಸಿ ರದ್ದುಪಡಿಸುವ ‘ಫ್ರೀ-ಲುಕ್’ ಆಯ್ಕೆಯನ್ನು ಪ್ರತಿಯೊಬ್ಬರೂ ಪರಿಶೀಲಿಸುವುದು ಅತ್ಯಗತ್ಯ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular