HomeKarnatakaಕಲಬುರಗಿ, ಹುಬ್ಬಳ್ಳಿಯಲ್ಲಿ ಹಜ್ ಯಾತ್ರಾರ್ಥಿಗಳ ಭವನ ನಿರ್ಮಾಣ: ಸಿಎಂ ಸಿದ್ಧರಾಮಯ್ಯ

ಕಲಬುರಗಿ, ಹುಬ್ಬಳ್ಳಿಯಲ್ಲಿ ಹಜ್ ಯಾತ್ರಾರ್ಥಿಗಳ ಭವನ ನಿರ್ಮಾಣ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಹಜ್ ಯಾತ್ರಿಗರು ಮಾಡುವ ಪ್ರಾರ್ಥನೆಯಲ್ಲಿ ರಾಜ್ಯದ ಒಳಿತನ್ನೂ ಬಯಸಿರಿ ಎಂದು ಕೋರುತ್ತಾ, ಹಜ್ ಯಾತ್ರೆಯು ಸುಖಕರವಾಗಿರಲೆಂದು ಹಾರೈಸುತ್ತೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಕರ್ನಾಟಕ ಹಜ್ ಸಮಿತಿ ಆಯೋಜಿಸಿದ್ದ ಮುಸ್ಲಿಂ ಸಮುದಾಯದ ಪವಿತ್ರ ಹಜ್ ಯಾತ್ರೆಯ “ಹಜ್ -2026” ವಿಮಾನಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಸ್ಲಾಂ ಧರ್ಮದ ಪ್ರಮುಖ ಐದು ಆಧಾರ ಸ್ತಂಭಗಳಲ್ಲಿ ಹಜ್ ಆಚರಣೆಯೂ ಒಂದಾಗಿದ್ದು, ಪ್ರತಿಯೊಬ್ಬ  ಮುಸಲ್ಮಾನನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಯನ್ನು ಕೈಗೊಳ್ಳಲೇಬೇಕಾಗಿದೆ. ಹಜ್ ಯಾತ್ರೆ ಮಾಡುವುದರಿಂದ ಮನುಷ್ಯನ ಹಿಂದಿನ ಎಲ್ಲಾ ಪಾಪಗಳು ಕ್ಷಮಿಸಲ್ಪಡುತ್ತವೆ ಮತ್ತು ಆತ ಮರುಜನ್ಮ ಪಡೆದ ಮಗುವಿನಂತೆ ಪರಿಶುದ್ಧನಾಗುತ್ತಾನೆ ಎಂಬ ನಂಬಿಕೆಯಿದೆ. ಯಾರಾದರೂ ಒಬ್ಬ ಮನುಷ್ಯನನ್ನು (ಅಪರಾಧ ಮಾಡದಿದ್ದರೂ) ಕೊಂದರೆ, ಅವನು ಇಡೀ ಮಾನವಕುಲವನ್ನೇ ಕೊಂದಂತೆ; ಮತ್ತು ಯಾರಾದರೂ ಒಂದು ಜೀವವನ್ನು ಉಳಿಸಿದರೆ, ಅವನು ಇಡೀ ಮಾನವಕುಲವನ್ನೇ ಉಳಿಸಿದಂತೆ ಎಂದು ಜೀವದ ಬೆಲೆಯ ಬಗ್ಗೆ ಕುರಾನ್ ನೀಡುವ ಅತ್ಯುನ್ನತ ಸಂದೇಶವಾಗಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರತಿಯೊಬ್ಬ ಹಜ್ ಯಾತ್ರಿಗನು ನಿಷ್ಕಲ್ಮಶ ಮನದಿಂದ ಯಾತ್ರೆ ಕೈಗೊಳ್ಳಬೇಕು. ಯಾತ್ರೆಯ ಸಂದರ್ಭದಲ್ಲಿ ಮಾಡುವ ಪ್ರಾರ್ಥನೆಯಲ್ಲಿ ಸರ್ಕಾರದ ಒಳಿತನ್ನೂ ಬಯಸಿರಿ ಎಂದು ಕೋರುತ್ತೇನೆ. ಯಾವುದೇ ಧರ್ಮವೂ ಹಿಂಸೆಯನ್ನು ಬೋಧಿಸುವುದಿಲ್ಲ. ಆದರೆ ಮಾನವನು ಪರಸ್ಪರ ದ್ವೇಷವನ್ನು ಸಾಧಿಸುತ್ತಾನೆ. ಮಾನವೀಯತೆಯೇ ನಿಜವಾದ ಧರ್ಮ. ಪರರ ಒಳಿತನ್ನು ಬಯಸುವವರನ್ನು ದೇವರು ರಕ್ಷಿಸುತ್ತಾನೆ. ತನ್ನ ಧರ್ಮವನ್ನು ಪ್ರೀತಿಸಿ, ಆದರೆ ಇತರೆ ಧರ್ಮದ ಬಗ್ಗೆ ಸಹಿಷ್ಣುತೆ ಬೆಳೆಸಿಕೊಳ್ಳಬೇಕು. ಭ್ರಾತೃತ್ವ, ಸಮಾನತೆ ಮತ್ತು ಸೌಹಾರ್ದತೆಗಳೇ ನಮ್ಮ ಸಂವಿಧಾನದ ಮೂಲತತ್ವವಾಗಿದೆ ಎಂದರು.

2026-27ನೇ ಸಾಲಿನ ಆಯವ್ಯಯದಲ್ಲಿ ಕಲಬುರಗಿ ಮತ್ತು ಹುಬ್ಬಳ್ಳಿಯಲ್ಲಿ ಹಜ್ ಯಾತ್ರಾರ್ಥಿಗಳು ಹಾಗೂ ಅವರ ಸಂಬಂಧಿಕರಿಗೆ ಸೌಲಭ್ಯ ಮತ್ತು ಸೌಕರ್ಯಗಳನ್ನು ನೀಡಲು ಅನುಕೂಲವಾಗುವಂತೆ ಹಜ್ ಭವನಗಳ ನಿರ್ಮಾಣ ಮಾಡಲಾಗುತ್ತದೆ. ನಮ್ಮ ಸರ್ಕಾರ ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ಸಚಿವರಾದ ರಹೀಂಖಾನ್, ಕೃಷ್ಣಬೈರೇಗೌಡ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕರಾದ ರಿಜ್ವಾನ್ ಅರ್ಷದ್, ಅಜೀಜ್ ಸೇಠ್, ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ ಹಾಗೂ ಮುಸ್ಲಿಂ ಧರ್ಮ ಗುರುಗಳು ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular