ಬೆಂಗಳೂರು : ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಅವರ ಹತ್ಯೆಗೆ ರೂಪಿಸಲಾಗಿದ್ದ ಸಂಚನ್ನು ಬೆಂಗಳೂರು ಸಿಸಿಬಿ (CCB) ಪೊಲೀಸರು ಭೇದಿಸಿದ್ದು, ಪ್ರಕರಣದ ಪ್ರಮುಖ ಆರೋಪಿ ಹರ್ಷ ಸೇರಿದಂತೆ ಹಲವು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಇದುವರೆಗೆ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ಮುಂದುವರಿದಿದೆ.
ಪೊಲೀಸರ ಪ್ರಕಾರ, ಕಳೆದ ವರ್ಷ ಅಶೋಕನಗರ ಠಾಣೆ ವ್ಯಾಪ್ತಿಯ ರೌಡಿಶೀಟರ್ ಹೈದರ್ ಅಲಿ ಕೊಲೆಗೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಬ್ಬಾಸ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು. ಈ ಸಂಚಿನ ಹಿಂದೆ ಹೈದರ್ ಅಲಿ ಸಹೋದರ ಶಬ್ಬೀರ್ ಅಲಿಯಾಸ್ ಶಕೀಲ್ ಸೇರಿದಂತೆ ಪ್ರಮುಖ ಆರೋಪಿಗಳ ಕೈವಾಡವಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಗುಪ್ತಚರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಸಂಘಟಿತ ಅಪರಾಧ ದಳ, ಆರೋಪಿಗಳು ಅಬ್ಬಾಸ್ ಅವರ ಚಲನವಲನಗಳ ಮೇಲೆ ನಿಗಾ ಇಟ್ಟು ದಾಳಿ ನಡೆಸಲು ಕಾಯುತ್ತಿದ್ದ ವೇಳೆ ದಾಳಿ ನಡೆಸಿ ಬಂಧಿಸಿದೆ. ಕಾರ್ಯಾಚರಣೆಯಲ್ಲಿ ಲಾಂಗ್, ಮಚ್ಚು, ಡ್ಯಾಗರ್ ಸೇರಿದಂತೆ ಸುಮಾರು 30 ಮಾರಕಾಸ್ತ್ರಗಳು, ಒಂದು ಕಾರು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಇದೀಗ ಪ್ರಕರಣದ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಿರುವ ಪೊಲೀಸರು, ಹತ್ಯೆ ಸಂಚಿನಲ್ಲಿ ಭಾಗಿಯಾಗಿರುವ ಇತರ ಆರೋಪಿಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿಸಿದ್ದಾರೆ. ಈ ಪ್ರಕರಣದ ಹಿಂದೆ ದೊಡ್ಡ ಅಪರಾಧ ಜಾಲವಿದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ.

