HomeLive NewsBIG NEWS : ರೆಕಾರ್ಡ್ ಮಾಡಲು ನೀಡಿದ ಒಪ್ಪಿಗೆ , ಪ್ರಸಾರಕ್ಕೆ ಅಲ್ಲ' ; ಖಾಸಗಿ...

BIG NEWS : ರೆಕಾರ್ಡ್ ಮಾಡಲು ನೀಡಿದ ಒಪ್ಪಿಗೆ , ಪ್ರಸಾರಕ್ಕೆ ಅಲ್ಲ’ ; ಖಾಸಗಿ ವಿಡಿಯೋ ಹಂಚಿದರೆ ಕಡ್ಡಾಯ FIR.!

ಬೆಂಗಳೂರು: ಖಾಸಗಿ ಫೋಟೋ ಹಾಗೂ ವಿಡಿಯೋಗಳ ದುರ್ಬಳಕೆ, ಪ್ರತೀಕಾರಾತ್ಮಕ ಅಶ್ಲೀಲತೆ (Revenge Porn), ಸೆಕ್ಸ್‌ಟಾರ್ಷನ್ ಮತ್ತು ಬ್ಲ್ಯಾಕ್‌ಮೇಲ್ ಪ್ರಕರಣಗಳ ವಿರುದ್ಧ ಕರ್ನಾಟಕ ಪೊಲೀಸ್ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಇಂತಹ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸಿ ತ್ವರಿತ ಕಾನೂನು ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಸಚಿವ ಪ್ರಿಯಾಂಕ್ ಖರ್ಗೆ, “ರೆಕಾರ್ಡ್ ಮಾಡಲು ನೀಡಿದ ಒಪ್ಪಿಗೆಯು, ಅದನ್ನು ಇತರರಿಗೆ ಹಂಚಿಕೊಳ್ಳಲು ಅಥವಾ ಪ್ರಸಾರ ಮಾಡಲು ನೀಡಿದ ಒಪ್ಪಿಗೆಯಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಹೊಸ ಮಾರ್ಗಸೂಚಿಯ ಪ್ರಕಾರ, ಖಾಸಗಿ ಫೋಟೋ ಅಥವಾ ವಿಡಿಯೋವನ್ನು ಸಂಬಂಧಪಟ್ಟ ವ್ಯಕ್ತಿಯ ಅನುಮತಿಯಿಲ್ಲದೆ ಹಂಚುವುದು, ಪ್ರಕಟಿಸುವುದು, ಫಾರ್ವರ್ಡ್ ಮಾಡುವುದು ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡುವುದು ಸಂಜ್ಞೇಯ (Cognizable) ಅಪರಾಧವಾಗಿದೆ. ಆ ವಿಡಿಯೋ ಅಥವಾ ಫೋಟೋ ಮೂಲತಃ ಒಪ್ಪಿಗೆಯೊಂದಿಗೆ ದಾಖಲಾಗಿದ್ದರೂ, ಅನುಮತಿಯಿಲ್ಲದೆ ಹಂಚಿದರೆ ಅದು ಅಪರಾಧವೇ ಆಗಿರುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸರು ಇಂತಹ ಪ್ರಕರಣಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (BNS), 2023 ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act), 2000ರ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಬೇಕು. ಅಗತ್ಯವಿದ್ದಲ್ಲಿ BNS ಸೆಕ್ಷನ್ 77 ಹಾಗೂ ಐಟಿ ಕಾಯ್ದೆಯ ಸೆಕ್ಷನ್ 66E, 67 ಮತ್ತು 67A ಅಡಿಯಲ್ಲಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಅಧಿಸೂಚನೆಯ ಪ್ರಕಾರ, ದೂರು ನೀಡಿದ ವ್ಯಕ್ತಿ ಹಿಂದೆ ವಿಡಿಯೋ ಅಥವಾ ಫೋಟೋ ದಾಖಲಿಸಲು ಒಪ್ಪಿಗೆ ನೀಡಿದ್ದ ಎಂಬ ಕಾರಣವನ್ನು ಮುಂದಿಟ್ಟು ಎಫ್‌ಐಆರ್ ದಾಖಲಿಸಲು ನಿರಾಕರಿಸುವುದು ಅಥವಾ ವಿಳಂಬ ಮಾಡುವುದು ಅಸಂಗತ ಎಂದು ಸ್ಪಷ್ಟಪಡಿಸಲಾಗಿದೆ. ಘಟನೆ ಬೇರೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದರೂ, ಮೊದಲು ‘ಜೀರೋ ಎಫ್‌ಐಆರ್’ ದಾಖಲಿಸಿ ನಂತರ ಸಂಬಂಧಿತ ಠಾಣೆಗೆ ವರ್ಗಾಯಿಸುವಂತೆ ನಿರ್ದೇಶಿಸಲಾಗಿದೆ. ಇದಲ್ಲದೆ, ಆಕ್ಷೇಪಾರ್ಹ ವಿಷಯವನ್ನು ತಕ್ಷಣ ತೆಗೆದುಹಾಕಲು ಕ್ರಮ ಕೈಗೊಳ್ಳುವುದು, ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸಂರಕ್ಷಿಸುವುದು ಹಾಗೂ ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಮತ್ತು ಸಿಐಡಿ ಸೈಬರ್ ವಿಭಾಗದೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಲಾಗಿದೆ.

ಸಂತ್ರಸ್ತರ ಗುರುತನ್ನು ಗೌಪ್ಯವಾಗಿಡಬೇಕು, ಗೌರವಯುತ ಹಾಗೂ ಸಂವೇದನಾಶೀಲವಾಗಿ ವರ್ತಿಸಬೇಕು ಮತ್ತು ಮಹಿಳಾ ಸಂತ್ರಸ್ತರ ದೂರುಗಳನ್ನು ಸಾಧ್ಯವಾದರೆ ಮಹಿಳಾ ಅಧಿಕಾರಿಗಳೇ ದಾಖಲಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.ಈ ನಿರ್ದೇಶನವು ಖಾಸಗಿತನದ ಹಕ್ಕಿಗೆ ಮತ್ತಷ್ಟು ಬಲ ನೀಡುವುದರ ಜೊತೆಗೆ, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಂತ್ರಸ್ತರ ಪರ ಏಕರೂಪದ ಹಾಗೂ ಕಾನೂನುಬದ್ಧ ಕ್ರಮವನ್ನು ಖಚಿತಪಡಿಸುವ ಮಹತ್ವದ ಹೆಜ್ಜೆಯಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular