ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್ ಶಾಮನೂರು ಶಿವಶಂಕರಪ್ಪ ಕುಟುಂಬದ ‘ಕೈ’ ತಪ್ಪುವ ನಿರೀಕ್ಷೆ ಇದೆ. ಡಿಸೆಂಬರ್ 14ರಂದು ಕ್ಷೇತ್ರದ ಹಾಲಿ ಶಾಸಕ, ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ನಿಧನ ಹೊಂದಿದ ಕಾರಣ ಉಪ ಚುನಾವಣೆ ಎದುರಾಗಿದೆ. ಸದ್ಯದ ಮಾಹಿತಿಯಂತೆ ಮಾರ್ಚ್ ಅಂತ್ಯ ಅಥವ ಏಪ್ರಿಲ್‌ನಲ್ಲಿ ಉಪ ಚುನಾವಣೆ ನಡೆಯುವ ನಿರೀಕ್ಷೆ ಇದೆ.
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಾಗಿ ಚುನಾವಣಾ ಆಯೋಗವು ಸಿದ್ದತೆ ನಡೆಸಿದ್ದು, ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯೂ ಆರಂಭವಾಗಿದೆ. ಕೇಂದ್ರ ಚುನಾವಣಾ ಆಯೋಗ ವಿವಿಧ ರಾಜ್ಯಗಳ ಚುನಾವಣೆ ನಡೆಸುವಾಗ ಶಾಮನೂರು ಶಿವಶಂಕರಪ್ಪ ನಿಧನದಿಂದ ತೆರವಾದ ದಾವಣಗೆರೆ ದಕ್ಷಿಣದ ಉಪ ಚುನಾವಣೆಯನ್ನು ನಡೆಸಲಿದೆ.
2008ರ ಬಳಿಕ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 4 ಚುನಾವಣೆ ನಡೆದಿದೆ. 4 ಬಾರಿಯೂ ಶಾಮನೂರು ಶಿವಶಂಕರಪ್ಪ ಗೆಲ್ಲುವ ಮೂಲಕ ಕ್ಷೇತ್ರವನ್ನು ಕಾಂಗ್ರೆಸ್ ಭದ್ರಕೋಟೆ ಮಾಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅನುಪಸ್ಥಿತಿಯಲ್ಲಿ ನಡೆಯುಲಿರುವ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೆ? ಎಂಬುದು ಸದ್ಯದ ಪ್ರಶ್ನೆಯಾಗಿದೆ.
ಮುಸ್ಲಿಂ ಅಭ್ಯರ್ಥಿ ಆಯ್ಕೆ?; ಸದ್ಯದ ಮಾಹಿತಿ ಪ್ರಕಾರ ಶಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಈ ಬಾರಿ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಸಿಗುವುದಿಲ್ಲ. 2023ರ ಚುನಾವಣೆಯಲ್ಲಿಯೇ ಶಾಮನೂರು ಶಿವಶಂಕರಪ್ಪ ಹೊರತುಪಡಿಸಿ 5 ಜನರು ಟಿಕೆಟ್ ಬಯಸಿ ಅರ್ಜಿ ಹಾಕಿದ್ದರು. ಆದರೆ ಪಕ್ಷ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪಗೆ ಟಿಕೆಟ್ ನೀಡಿತ್ತು.
ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಮತಗಳಿವೆ. ಶಾಮನೂರು ಶಿವಶಂಕರಪ್ಪ ಅವರನ್ನು ಮುಸ್ಲಿಂ ಸಮುದಾಯ ಬೆಂಬಿಸುತ್ತಾ ಬಂದಿತ್ತು. ಆದರೆ ಈಗ ಉಪ ಚುನಾವಣೆಯಲ್ಲಿ ತಮ್ಮ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿ ಎಂಬ ಬೇಡಿಕೆಯನ್ನು ಮುಸ್ಲಿಮರು ಮುಂದಿಟ್ಟಿದ್ದಾರೆ.
ಕರ್ನಾಟಕ ರಾಜ್ಯ ವಕ್ಫ್ ಪರಿಷತ್ ಸದಸ್ಯ ಅಬ್ದುಲ್ ಘನಿ ತಾಹಿರ್ ದಾವಣಗೆರೆಯಲ್ಲಿ ಮಾತನಾಡಿ, “ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದ್ದು, ಸಾಮಾಜಿಕ ನ್ಯಾಯದ ಪರಿಕಲ್ಪನೆಯಂತೆ ಶಾಸಕ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತ ಮುಸ್ಲಿಂ ಅಭ್ಯರ್ಥಿ ಸ್ಪರ್ಧೆಗೆ ಅವಕಾಶ ನೀಡಬೇಕು” ಎಂದು ಒತ್ತಾಯಿಸಿದರು.
“ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ನಾವು ಮೊದಲಿನಿಂದಲೂ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದೇವೆ. ಶಾಮನೂರು ಶಿವಶಂಕರಪ್ಪ ಸತತವಾಗಿ ಜಯಗಳಿಸುತ್ತಿದ್ದರು. ಈಗ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಒತ್ತಾಯಿಸುತ್ತೇವೆ” ಎಂದು ಹೇಳಿದರು.
“ಕ್ಷೇತ್ರದಲ್ಲಿ ಸುಮಾರು 80,000 ಮುಸ್ಲಿಂ ಸಮುದಾಯದ ಮತಗಳಿವೆ. ಪ್ರತಿ ಬಾರಿಯು ಅವಕಾಶ ಕೇಳಿದಾಗ ಮುಂದಿನ ಬಾರಿ ಎಂಬ ಉತ್ತರ ಸಿಗುತ್ತದೆ. ಇದರಿಂದ ನಮ್ಮ ಸಮುದಾಯಕ್ಕೆ ನೋವುಂಟಾಗಿದೆ. ಈ ಬಾರಿ ಕಾಂಗ್ರೆಸ್ ಪಕ್ಷ ಅಲ್ಪ ಸಂಖ್ಯಾತ ಸಮುದಾಯಕ್ಕೆ ಅವಕಾಶ ನೀಡಬೇಕು” ಎಂದು ಆಗ್ರಹಿಸಿದರು.
ಸಚಿವರ ಹೇಳಿಕೆ: ಈ ಕುರಿತು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸಹ ಮಾತನಾಡಿದ್ದು, “ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ಕೋರಿ ಮುಸ್ಲಿಂ ಮುಖಂಡರು ತಮ್ಮನ್ನು ಸಂಪರ್ಕಿಸಿದ್ದಾರೆ” ಎಂದು ಹೇಳಿದ್ದಾರೆ.
“ಇದು ನನ್ನ ಕೊನೆಯ ಚುನಾವಣೆ. ಮುಂದಿನ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲಾಗುತ್ತದೆ ಎಂದು ಶಾಮನೂರು ಶಿವಶಂಕರಪ್ಪ 2023ರಲ್ಲಿಯೇ ಭರವಸೆ ಕೊಟ್ಟಿದ್ದರು ಎಂಬುದನ್ನು ನನ್ನ ಗಮನಕ್ಕೆ ತಂದಿದ್ದಾರೆ” ಎಂದರು.
ಶಾಮನೂರು ಶಿವಶಂಕರಪ್ಪ ಕುಟುಂಬದಲ್ಲಿ ದಾವಣಗೆರೆ ಉತ್ತರದಿಂದ ಎಸ್.ಎಸ್.ಮಲ್ಲಿಕಾರ್ಜುನ ಶಾಸಕರು, ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರು. ಡಾ.ಪ್ರಭಾ ಮಲ್ಲಿಕಾರ್ಜುನ ದಾವಣಗೆರೆಯ ಸಂಸದರು. ಆದ್ದರಿಂದ ಈ ಬಾರಿ ಅವರ ಕುಟುಂಬದ ಹೊರತಾದ ವ್ಯಕ್ತಿಗೆ ಟಿಕೆಟ್ ನೀಡುವ ನಿರೀಕ್ಷೆ ಇದೆ.

