ಕರ್ನಾಟಕದಲ್ಲಿ 36 ವರ್ಷದ ಬಳಿಕ ವಿದ್ಯಾರ್ಥಿ ಸಂಘದ ಚುನಾವಣೆಗಳು ನಡೆಯುವ ನಿರೀಕ್ಷೆ ಇದೆ. ವಿದ್ಯಾರ್ಥಿ ಸಂಘದ ಚುನಾವಣೆಗಳನ್ನು ನಡೆಸುವ ಪ್ರಕ್ರಿಯೆ ಹಾಗೂ ರೂಪುರೇಷೆಗಳನ್ನು ಅಧ್ಯಯನ ಮಾಡಿ ವರದಿ ಸಲ್ಲಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಮಿತಿ ರಚನೆ ಮಾಡಿದ್ದಾರೆ.
ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸುವುದರಿಂದ ವಿದ್ಯಾರ್ಥಿಗಳಲ್ಲಿ ಪ್ರಜಾಸತ್ತಾತ್ಮಕ ಪ್ರಾತಿನಿಧ್ಯ ಉತ್ತೇಜನಗೊಳ್ಳುತ್ತದೆ, ಶೈಕ್ಷಣಿಕ ಶಿಸ್ತು ಕಾಪಾಡಲು ಸಹಕಾರಿಯಾಗುತ್ತದೆ ಮತ್ತು ವಿದ್ಯಾರ್ಥಿ ಸಮೂಹದಲ್ಲಿ ನಾಯಕತ್ವ ಗುಣಗಳು ಬೆಳೆಯುತ್ತವೆ ಎಂದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ವ್ಯಕ್ತಪಡಿಸಿದ ಅಭಿಪ್ರಾಯಗಳ ಆಧಾರದ ಮೇಲೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯು ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸಲು ಚಿಂತನೆ ನಡೆಸಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇದಕ್ಕೆ ಪೂರಕವಾಗಿ, ಪ್ರಸ್ತುತ ಪರಿಸ್ಥಿತಿಗಳು ಮತ್ತು ಚುನಾವಣೆಗಳನ್ನು ನಡೆಸುವ ಕಾರ್ಯಸಾಧ್ಯತೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಪಡೆಯುವ ಹಿನ್ನೆಲೆಯಲ್ಲಿ ಸಮಿತಿಯನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಅದರಂತೆ, ಪ್ರಸ್ತುತ ಸನ್ನಿವೇಶವನ್ನು ಅಧ್ಯಯನ ಮಾಡಲು ಹಾಗೂ ವಿದ್ಯಾರ್ಥಿ ಸಂಘಗಳ ಚುನಾವಣೆಗಳನ್ನು ನಡೆಸುವ ಕಾರ್ಯಸಾಧ್ಯತೆ ಮತ್ತು ಅಗತ್ಯತೆಯ ಶಿಫಾರಸುಗಳೊಂದಿಗೆ ಸಮಗ್ರ ವರದಿಯನ್ನು ಸಲ್ಲಿಸಲು ಸಮಿತಿಯನ್ನು ರಚಿಸಲಾಗಿದೆ ಎಂದು ಹೇಳಿದ್ದಾರೆ.
1989ರಲ್ಲಿ ಕಾಲೇಜು ಕ್ಯಾಂಪಸ್‌ಗಳಲ್ಲಿ ಹಿಂಸಾಚಾರ ಹೆಚ್ಚಾದ ಹಿನ್ನಲೆಯಲ್ಲಿ ಚುನಾವಣೆಯನ್ನು ನಿಷೇಧ ಮಾಡಲಾಗಿತ್ತು. ಈ ಕುರಿತು ಅಂದಿನ ವೀರೇಂದ್ರ ಪಾಟೀಲ್ ಸರ್ಕಾರ ಆದೇಶವನ್ನು ಹೊರಡಿಸಿತ್ತು. ಆದರೆ ಈಗ ಸರ್ಕಾರ ಚುನಾವಣೆ ನಡೆಸುವ ಮೂಲಕ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಬೆಳೆಸಲು ಚಿಂತನೆ ನಡೆಸಿದ್ದು, ಅದಕ್ಕಾಗಿಯೇ ಸಮಿತಿ ರಚನೆ ಮಾಡಲಾಗಿದೆ.
ಸಮಿತಿಯ ಸದಸ್ಯರು
- ಡಾ. ಶರಣ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವರು, ಸಂಚಾಲಕರು
- ಡಾ. ಸುಧಾಕರ್, ಉನ್ನತ ಶಿಕ್ಷಣ ಸಚಿವರು
- ಸಲೀಂ ಅಹಮದ್, ಮುಖ್ಯ ಸಚೇತಕರು, ಕೆ.ಎಲ್.ಸಿ
- ರಿಜ್ವಾನ್ ಅರ್ಷದ್, ಶಾಸಕರು
- ಬಿ.ಶಿವಣ್ಣ, ಶಾಸಕರು
- ಪುಟ್ಟಣ್ಣ, ವಿಧಾನ ಪರಿಷತ್ ಸದಸ್ಯರು
- ಬಸವನಗೌಡ ಬಾದರ್ಲಿ, ವಿಧಾನ ಪರಿಷತ್ ಸದಸ್ಯರು
- ಹೆಚ್.ಎಸ್.ಮಂಜುನಾಥ್, ಅಧ್ಯಕ್ಷರು, ಕೆ.ಪಿ.ವೈ.ಸಿ.ಸಿ.
- ಕೀರ್ತಿ ಗಣೇಶ್, ಅಧ್ಯಕ್ಷರು ಎನ್.ಎಸ್.ಯು.ಐ
ಸಮಿತಿ 15 ದಿನದಲ್ಲಿ ತನ್ನ ವರದಿಯನ್ನು ಅಗತ್ಯ ಶಿಫಾರಸುಗಳ ಜೊತೆ ಸಲ್ಲಿಕೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.
ಉಲ್ಲೇಖನ ನಿಯಮಗಳು/ ಪರಿಶೀಲನಾಂಶಗಳು
* ಯಾವ-ಯಾವ ಹಂತಗಳಲ್ಲಿ ಚುನಾವಣೆಗಳನ್ನು ನಡೆಸಬಹುದು ಎಂಬ ಬಗ್ಗೆ
* ಚುನಾವಣೆ ನಡೆಸುವುದರಿಂದ ಆಗುವ ಸಾಧಕ-ಬಾಧಕಗಳು ಹಾಗೂ ಪರಿಣಾಮಗಳು
* ಚುನಾವಣೆಗಳನ್ನು ಪಕ್ಷದ ಹೆಸರಿನ ಅಡಿಯಲ್ಲಿ ನಡೆಸಬೇಕೆ ಅಥವಾ ಕೇವಲ ಸಿದ್ಧಾಂತಗಳ ಆಧಾರದ ಮೇಲೆ ನಡೆಸಬೇಕೆ ಅಥವಾ ವಿದ್ಯಾರ್ಥಿ ಕಲ್ಯಾಣದ ಉದ್ದೇಶ ಹೊಂದಿರುವ ರಾಜಕೀಯೇತರ ರೀತಿಯಲ್ಲಿ ನಡೆಸಬೇಕೆ? ಎಂಬ ಬಗ್ಗೆ ವಿವರವಾದ ವರದಿ ಬಗ್ಗೆ
* ಚುನಾವಣೆ ಹಾಗೂ ಉಮೇದುವಾರಿಕ ಅರ್ಹತೆಗಳ ಬಗ್ಗೆ
* ಚುನಾವಣೆ ನಡೆಸುವ ಪ್ರಕ್ರಿಯೆ ಹಾಗೂ ವ್ಯವಸ್ಥೆ ಹೇಗಿರಬೇಕೆಂಬ ಬಗ್ಗೆ ಮಾಹಿತಿ
* ಚುನಾವಣೆಯ ವೆಚ್ಚ ಮತ್ತು ಪಾರದರ್ಶಕತೆ
* ದೂರುಗಳ ಪರಿಹಾರ ಮತ್ತು ಭದ್ರತೆ ವ್ಯವಸ್ಥೆ ಬಗ್ಗೆ
* ಪ್ರಾತಿನಿಧ್ಯ ಮತ್ತು ಅಂತರ್ಗತ ಶಿಕ್ಷಣ (ಪಾಲ್ಗೊಳ್ಳುವಿಕೆ)
* ಮಹಿಳೆಯರು, ಕಡೆಗಣಿಸಲಾದ ಸಣ್ಣ ಸಮುದಾಯಗಳು ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಸೀಟುಗಳ ಮೀಸಲಾತಿ ಅಥವಾ ಕೋಟಾವನ್ನು ನಿಗದಿಪಡಿಸುವುದು.
* ವಿದ್ಯಾರ್ಥಿಗಳ ಶಿಕ್ಷಣ ಹಾಗೂ ಶೈಕ್ಷಣಿಕ ವೇಳಾಪಟ್ಟಿಗೆ ತೊಂದರೆಯಾಗದಂತೆ ವಿದ್ಯಾರ್ಥಿ ಸಂಘದ ಅವಧಿಯನ್ನು ನಿರ್ಧರಿಸುವ ಬಗ್ಗೆ.

