ಕಾಂಗ್ರೆಸ್-ಡಿಎಂಕೆ ನಡುವಿನ ಮೈತ್ರಿ 2026ರ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿಯೂ ಮುಂದುವರೆಯಲಿದೆಯೇ?. ಈಗ ನಡೆಯುತ್ತಿರುವ ಬೆಳವಣಿಗೆ ನೋಡಿದರೆ ಮೈತ್ರಿಕೂಟ ಬಿಕ್ಕಟ್ಟಿನಲ್ಲಿದೆ. ಈ ವರ್ಷ ಏಪ್ರಿಲ್ ಅಥವ ಮೇ ತಿಂಗಳಿನಲ್ಲಿ 234 ಸೀಟುಗಳಿಗೆ ಚುನಾವಣೆ ನಡೆಯಬೇಕಿದೆ. ಹಾಲಿ ರಾಜ್ಯದಲ್ಲಿ ಇದೇ ಮೈತ್ರಿಕೂಟ ಅಧಿಕಾರದಲ್ಲಿದೆ.
ತಮಿಳುನಾಡು ರಾಜಕೀಯದಲ್ಲಿ ಒಂದು ಮಾದರಿಯಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾದರೂ ಸಹ ಪಾಲುದಾರರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಬಹಳ ಅಪರೂಪ. ಈಗ ಅಧಿಕಾರ ಹಂಚಿಕೆ ಸೂತ್ರವನ್ನು ಕಾಂಗ್ರೆಸ್ ಮುಂದಿಟ್ಟಿದೆ, ಆದರೆ ಡಿಎಂಕೆ ತಿರಸ್ಕಾರ ಮಾಡಿದೆ.
2026ರ ಚುನಾವಣೆಯಲ್ಲಿ ಕನಿಷ್ಠ 50 ಸೀಟು ಬೇಕು ಎಂದು ಕಾಂಗ್ರೆಸ್ ಇಟ್ಟಿದ್ದ ಬೇಡಿಕೆಯನ್ನು ಡಿಎಂಕೆ ತಿರಸ್ಕಾರ ಮಾಡಿತ್ತು. 32 ಸೀಟು ನೀಡುತ್ತೇವೆ ಎಂದು ಹೇಳಿತ್ತು. ಈಗ ಕಾಂಗ್ರೆಸ್ ಅಧಿಕಾರ ಹಂಚಿಕೆ ಸೂತ್ರ ಮುಂದಿಟ್ಟಿದ್ದು, ಇದಕ್ಕೂ ಸಹ ಡಿಎಂಕೆ ಒಪ್ಪಿಲ್ಲ. ಆದ್ದರಿಂದ ಕಾಂಗ್ರೆಸ್ ನಟ ವಿಜಯ್ ಪಕ್ಷದ ಜೊತೆ ಕೈ ಜೋಡಿಸಲಿದೆಯೇ? ಎಂಬ ಪ್ರಶ್ನೆ ಎದ್ದಿದೆ.
ಇತ್ತೀಚಿನ ಬೆಳವಣಿಗೆ: ತಮಿಳುನಾಡು ಕಾಂಗ್ರೆಸ್‌ನ ಇತ್ತೀಚಿನ ಬೆಳವಣಿಗೆಯಿಂದ ಮೈತ್ರಿ ಪಕ್ಷವಾದ ಡಿಎಂಕೆ ಮಾತ್ರವಲ್ಲದೆ, ಪಕ್ಷದ ರಾಜ್ಯಾಧ್ಯಕ್ಷ ಕೆ. ಸೆಲ್ವಪೆರುಂತಗೈ ಅವರಿಗೂ ಮುಜುಗರ ಉಂಟಾಗಿದೆ. ಕಾಂಗ್ರೆಸ್ ಹೈಕಮಾಂಡ್ ನಾಯಕರು ಇದುವರೆಗೆ ಅಧಿಕಾರ ಹಂಚಿಕೆ ಬೇಡಿಕೆ ಇಟ್ಟಿಲ್ಲ. ಆದರೆ ತಮಿಳುನಾಡಿನ ಕೆಲ ಕಾಂಗ್ರೆಸ್ ನಾಯಕರು ಮತ್ತು ಸಂಸದರು ಸಾಮಾಜಿಕ ಜಾಲತಾಣಗಳಲ್ಲಿ ಅಂತಹ ಬೇಡಿಕೆಗಳನ್ನು ಬಹಿರಂಗವಾಗಿ ಹಾಕಿದ್ದು, ಇಂಡಿಯಾ ಮೈತ್ರಿಕೂಟದಲ್ಲಿ ಅಸಮಾಧಾನ ಮೂಡಿಸಿದೆ.
1967ರಲ್ಲಿ ಡಿಎಂಕೆ ಮೊದಲ ಬಾರಿಗೆ ಅಧಿಕಾರಕ್ಕೆ ಬರುವ ಮೊದಲು, ಜಸ್ಟಿಸ್ ಪಾರ್ಟಿಯ ಆಡಳಿತದ ನಂತರ ತಮಿಳುನಾಡನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆಳುತ್ತಿತ್ತು. ಒಂದು ಕಾಲದಲ್ಲಿ ಭಾರತದಾದ್ಯಂತ ಪ್ರಬಲ ಶಕ್ತಿಯಾಗಿದ್ದ ಕಾಂಗ್ರೆಸ್ ತಮಿಳುನಾಡಿನಲ್ಲೂ ಅಧಿಕಾರ ಹಿಡಿದಿತ್ತು. ಆದರೆ, ಕಾಂಗ್ರೆಸ್ ವಿರೋಧಿ ಅಭಿಯಾನ ತೀವ್ರವಾದ ನಂತರ 1967ರಲ್ಲಿ ಸಿ.ಎನ್.ಅಣ್ಣಾದೊರೈ ನಾಯಕತ್ವದಲ್ಲಿ ಡಿಎಂಕೆ ಸರ್ಕಾರ ರಚಿಸಿತು.
ಅಂದಿನಿಂದ ಕಳೆದ 58 ವರ್ಷಗಳಲ್ಲಿ ಕಾಂಗ್ರೆಸ್ ತಮಿಳುನಾಡಿನಲ್ಲಿ ಒಮ್ಮೆಯೂ ಅಧಿಕಾರಕ್ಕೆ ಬಂದಿಲ್ಲ. ಆದಾಗ್ಯೂ, ಸರ್ಕಾರ ರಚಿಸಿದ ಕೇವಲ ನಾಲ್ಕು ವರ್ಷಗಳ ನಂತರ, 1971ರ ಲೋಕಸಭಾ ಚುನಾವಣೆಗೆ ಡಿಎಂಕೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿತು. ನಂತರದ ದಶಕಗಳಲ್ಲಿ 2004ರಿಂದ ಈಚೆಗೆ, 2014ರ ಚುನಾವಣೆಗೆ ಮುನ್ನ ಮೈತ್ರಿಕೂಟದಲ್ಲಿ ಉಂಟಾದ ಸಣ್ಣ ಬಿರುಕನ್ನು ಹೊರತುಪಡಿಸಿ, ಡಿಎಂಕೆ-ಕಾಂಗ್ರೆಸ್ ಮೈತ್ರಿ ಇಂದಿನವರೆಗೂ ಹಾಗೆಯೇ ಉಳಿದಿದೆ.
ಈ ದೀರ್ಘಕಾಲದ ಒಡನಾಟದ ಹೊರತಾಗಿಯೂ, ಕಾಂಗ್ರೆಸ್ ತಮಿಳುನಾಡಿನಲ್ಲಿ ಡಿಎಂಕೆಯ ಕಿರಿಯ ಪಾಲುದಾರನಾಗಿಯೇ ಮುಂದುವರಿದಿದೆ. ಆದರೆ, 2024ರಿಂದ ಅಧಿಕಾರದಲ್ಲಿ ಪಾಲು ಬೇಕು ಎಂಬ ಬೇಡಿಕೆಗಳು ರಾಜ್ಯ ರಾಜಕೀಯ ಚರ್ಚೆಗಳಲ್ಲಿ ಪ್ರಬಲವಾಗಿ ಕೇಳಿಬರುತ್ತಿವೆ.
ನಟ ವಿಜಯ್ ಫೆಬ್ರವರಿ 2024ರಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷವನ್ನು ಪ್ರಾರಂಭಿಸಿದಾಗ, ಅಧಿಕಾರ ಹಂಚಿಕೆ ನೀಡುವ ಮಾತು ಕೇಳಿ ಬಂದಿತ್ತು. ಮೈತ್ರಿ ಪಾಲುದಾರರಿಗೆ ಅಧಿಕಾರ ಹಂಚಿಕೆ ಮಾಡಲಾಗುತ್ತದೆ ಎಂದು ಪಕ್ಷ ಘೋಷಿಸಿತ್ತು.
ತಮಿಳುನಾಡು ರಾಜಕೀಯದಲ್ಲಿ ಡಿಎಂಕೆ ಅಥವಾ ಎಐಎಡಿಎಂಕೆ ಅಧಿಕಾರದಲ್ಲಿದ್ದರೂ, ಮೈತ್ರಿಕೂಟದ ಪಕ್ಷದ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಸಂಪ್ರದಾಯವಿಲ್ಲ. ಈ ಹಿನ್ನೆಲೆಯಲ್ಲಿ ಈಗ ಕೇಳಿಬರುತ್ತಿರುವ ಅಧಿಕಾರ ಹಂಚಿಕೆಯ ಬೇಡಿಕೆಯು ತಮಿಳುನಾಡು ಕಾಂಗ್ರೆಸ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈಗ ಅಧಿಕಾರ ಹಂಚಿಕೆ ಬೇಡಿಕೆ ಮುಂದಿಟ್ಟಿರುವುದು ಪ್ರವೀಣ್ ಚಕ್ರವರ್ತಿ, ಸಂಸದ ಮಾಣಿಕ್ಕಂ ಟ್ಯಾಗೋರ್ ಸೇರಿದಂತೆ ಹಲವು ಹಿರಿಯ ನಾಯಕರು. ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ಮಾತನಾಡಿ, “ಅಧಿಕಾರದಲ್ಲಿ ಪಾಲು ಯಾರಿಗೆ ಬೇಡ?. ಆದರೆ ಅಂತಹ ವಿಷಯಗಳನ್ನು ಉಭಯ ಪಕ್ಷಗಳ ನಾಯಕತ್ವದ ನಡುವೆ ಚರ್ಚಿಸಿ ನಿರ್ಧರಿಸಬೇಕು. ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿ ಗಟ್ಟಿಯಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ಕಾಂಗ್ರೆಸ್ ಅಧ್ಯಕ್ಷ ಸೆಲ್ವಪೆರುಂತಗೈ, ” ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ತಮಿಳುನಾಡಿನಲ್ಲಿ ಮೈತ್ರಿಗೆ ಒಪ್ಪದ ಪಕ್ಷಗಳನ್ನು ಐಟಿ, ಸಿಬಿಐ ಮತ್ತು ಇಡಿ ದಾಳಿಗಳ ಮೂಲಕ ಬೆದರಿಸುತ್ತಿದ್ದಾರೆ. 2004ರಿಂದ ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟವು ಅಖಂಡವಾಗಿ ಉಳಿದಿದೆ. 2019, 2021 ಮತ್ತು 2024ರ ಚುನಾವಣೆಗಳಲ್ಲಿ ಜನರು ಈ ಮೈತ್ರಿಕೂಟಕ್ಕೆ ಭರ್ಜರಿ ಜಯ ತಂದುಕೊಟ್ಟಿದ್ದಾರೆ. ಮೈತ್ರಿಕೂಟವನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ದೂರಿದರು.
“ರಾಹುಲ್ ಗಾಂಧಿ ಬಿಜೆಪಿ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಬೆನ್ನಿಗೆ ತಮಿಳುನಾಡು ಮತ್ತು ಪುದುಚೇರಿಯ 52 ಸಂಸದರು ಒಗ್ಗಟ್ಟಾಗಿ ನಿಂತಿದ್ದಾರೆ. ಈ ರಾಜಕೀಯ ಸಂದರ್ಭವನ್ನು ಅರ್ಥಮಾಡಿಕೊಂಡು ಕಾರ್ಯಕರ್ತರು ರಾಜ್ಯದ ಹಿತದೃಷ್ಟಿಯಿಂದ ವರ್ತಿಸಬೇಕು,” ಎಂದು ಕರೆ ನೀಡಿದ್ದಾರೆ.
ಜನವರಿ ತಿಂಗಳ ಕೊನೆಯಲ್ಲಿ ರಾಹುಲ್ ಗಾಂಧಿ ತಮಿಳುನಾಡು ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಆಗ ಡಿಎಂಕೆ ಜೊತೆ ಚರ್ಚಿಸಿ ಮೈತ್ರಿಕೂಟದಲ್ಲಿರುವ ಚಿಕ್ಕ ಪುಟ್ಟ ಅಸಮಾಧಾನಗಳನ್ನು ಬಗೆಹರಿಸುವ ನಿರೀಕ್ಷೆ ಇದೆ.

