ನೀವು ಹೊಸ ಲಾಪ್ ಟಾಪ್ ಅಥವಾ ಡೆಸ್ಕ್‌ಟಾಪ್ ಖರೀದಿಸುವ ಆಲೋಚನೆಯಲ್ಲಿದ್ದೀರಾ? ಹಾಗಿದ್ದರೆ ಇನ್ನು ತಡಮಾಡದೆ ಇಂದೇ ಆರ್ಡರ್ ಮಾಡುವುದು ಜಾಣತನ. ಏಕೆಂದರೆ, ಮುಂದಿನ ಕೆಲವು ತಿಂಗಳಲ್ಲಿ ಕಂಪ್ಯೂಟರ್ ಮತ್ತು ಲಾಪ್ಟಾಪ್‌ಗಳ ಬೆಲೆಯಲ್ಲಿ ಬರೊಬ್ಬರಿ ಶೇ. 35ರಷ್ಟು ಭಾರಿ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಎಚ್ಚರಿಸಿದ್ದಾರೆ. ಕಂಪ್ಯೂಟರ್ ಬಿಡಿಭಾಗಗಳ ಬೆಲೆ ಗಗನಕ್ಕೇರುತ್ತಿರುವುದರಿಂದ, ಈ ವರ್ಷ ಕಂಪ್ಯೂಟರ್‌ಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ ಎಂದು ಮಾರುಕಟ್ಟೆ ತಜ್ಞರು ಎಚ್ಚರಿಸಿದ್ದಾರೆ.
ಬೆಲೆ ಏರಿಕೆಗೆ ಪ್ರಮುಖ ಕಾರಣಗಳೇನು?
ಬಿಡಿಭಾಗಗಳತುಟ್ಟಿ : ಪ್ರೊಸೆಸರ್, ಗ್ರಾಫಿಕ್ಸ್ ಕಾರ್ಡ್ (GPU) ಮತ್ತು ಮೆಮೊರಿ (RAM) ಬೆಲೆಗಳು ಗಣನೀಯವಾಗಿ ಹೆಚ್ಚುತ್ತಿವೆ. ಅದರಲ್ಲೂ DDR RAM ಬೆಲೆ ಈಗಾಗಲೇ 2.5 ರಿಂದ 3 ಪಟ್ಟು ಹೆಚ್ಚಾಗಿದೆ.
AI ಡೇಟಾ ಸೆಂಟರ್‌ಗಳ ಡಿಮ್ಯಾಂಡ್: ಪ್ರಸ್ತುತ AI (ಕೃತಕ ಬುದ್ಧಿಮತ್ತೆ) ಡೇಟಾ ಸೆಂಟರ್ ಮತ್ತು ಸರ್ವರ್‌ಗಳಿಗೆ ಹೆಚ್ಚಿನ ಮೆಮೊರಿ ಅಗತ್ಯವಿರುವುದರಿಂದ, ಪೂರೈಕೆಯು ಅತ್ತ ಕಡೆಗೆ ವಾಲುತ್ತಿದೆ. ಇದರಿಂದ ಸಾಮಾನ್ಯ ಕಂಪ್ಯೂಟರ್ ತಯಾರಕರಿಗೆ ಬಿಡಿಭಾಗಗಳ ಕೊರತೆ ಎದುರಾಗಿದೆ.
ಯುದ್ಧದ ಭೀತಿ : ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷವು ಸೆಮಿಕಂಡಕ್ಟರ್ ತಯಾರಿಕೆಗೆ ಬೇಕಾದ ಇಂಧನ ಮತ್ತು ಪೆಟ್ರೋಕೆಮಿಕಲ್ ಪೂರೈಕೆಯ ಮೇಲೆ ಪರಿಣಾಮ ಬೀರಲಿದ್ದು, ಇದು ಬೆಲೆ ಏರಿಕೆಗೆ ಮತ್ತೊಂದು ಕಾರಣವಾಗಬಹುದು.
ಬೆಲೆ ಎಷ್ಟು ಏರಿಕೆಯಾಗಬಹುದು ?
ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಕಂಪ್ಯೂಟರ್ ಬೆಲೆಗಳು ಒಟ್ಟಾರೆಯಾಗಿ ಶೇ. 35ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ.ಈಗಾಗಲೇ ಬೆಲೆಗಳು ಶೇ. 10–12 ರಷ್ಟು ಏರಿಕೆಯಾಗಿವೆ.ಮಾರ್ಚ್ ತಿಂಗಳಲ್ಲಿ ಮತ್ತೊಮ್ಮೆ ಶೇ. 8–10 ರಷ್ಟು ಹೆಚ್ಚಳವಾಗುವ ನಿರೀಕ್ಷೆಯಿದೆ. ಉದಾಹರಣೆಗೆ, ಈ ಹಿಂದೆ ₹30,000–35,000 ಇರುತ್ತಿದ್ದ ಲಾಪ್ಟಾಪ್‌ಗಳು ಈಗ ₹45,000 ಗಡಿ ತಲುಪುತ್ತಿವೆ. ಇದು ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಗ್ರಾಹಕರಿಗೆ ದೊಡ್ಡ ಹೊರೆಯಾಗಲಿದೆ.
2027ರವರೆಗೆ ಇಳಿಕೆಯಿಲ್ಲ!
ತಜ್ಞರ ಅಂದಾಜಿನ ಪ್ರಕಾರ, ಈ ಬೆಲೆ ಏರಿಕೆಯ ಹಾದಿಯು ಮುಂದಿನ 6-7 ತ್ರೈಮಾಸಿಕಗಳವರೆಗೆ ಮುಂದುವರಿಯಲಿದೆ. ಅಂದರೆ, 2027 ರ ದ್ವಿತೀಯಾರ್ಧದವರೆಗೆ ಬೆಲೆಗಳು ಇಳಿಕೆಯಾಗುವ ಸಾಧ್ಯತೆ ತೀರಾ ಕಡಿಮೆ.IDC ವರದಿಯ ಪ್ರಕಾರ, ಭಾರತದಲ್ಲಿ 2025ರಲ್ಲಿ ದಾಖಲೆಯ 1.59 ಕೋಟಿ ಕಂಪ್ಯೂಟರ್‌ಗಳು ಮಾರಾಟವಾಗಿವೆ (ಶೇ. 10.2 ವೃದ್ಧಿ). ಮಾರುಕಟ್ಟೆಯಲ್ಲಿ HP ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನಗಳಲ್ಲಿ Lenovo, Dell, Acer ಮತ್ತು Asus ಕಂಪನಿಗಳಿವೆ. ನವೆಂಬರ್‌ನಿಂದ ಪ್ರತಿ ತಿಂಗಳು ಬೆಲೆಗಳು ಏರುತ್ತಲೇ ಇವೆ. ಆದ್ದರಿಂದ ಬೆಲೆ ಇನ್ನು ಹೆಚ್ಚಿನ ಮಟ್ಟಕ್ಕೆ ತಲುಪುವ ಮೊದಲೇ, ಅಂದರೆ ಇಂದೇ ಲಾಪ್ಟಾಪ್ ಖರೀದಿಸುವುದು ಗ್ರಾಹಕರಿಗೆ ಲಾಭದಾಯಕ ಎಂದು ಅಖಿಲ ಭಾರತ ಮೊಬೈಲ್ ರಿಟೇಲರ್ಸ್ ಅಸೋಸಿಯೇಷನ್ ಸಂಸ್ಥಾಪಕ ಕೈಲಾಶ್ ಲಖಿಯಾನಿ ಸಲಹೆ ನೀಡಿದ್ದಾರೆ.

