ಕೋಲಾರ: ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಅವರ ವಿರುದ್ಧ ಶ್ರೀನಿವಾಸಪುರ ವಲಯ ಅರಣ್ಯಾಧಿಕಾರಿ ಪೊಲೀಸರಿಗೆ ದೂರು ನೀಡಿದ್ದಾರೆ.
ರಮೇಶ್ ಕುಮಾರ್ ಅವರು ವಿವಾದಿತ ಅರಣ್ಯ ಜಮೀನಿನಲ್ಲಿ ದೇವಾಲಯ ನಿರ್ಮಾಣ ಶಂಕುಸ್ಥಾಪನೆಗೆ ಮುಂದಾಗಿದ್ದು ಅದನ್ನು ತಡೆಯುವಂತೆ ದೂರು ನೀಡಲಾಗಿದೆ. ಜಮೀನಿನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಮೇಲ್ಮನವಿದಾರರಾದ ರಮೇಶ್ ಕುಮಾರ್ ಮತ್ತು ಅರಣ್ಯ ಇಲಾಖೆಗೆ ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಜಮೀನಿನಲ್ಲಿ ಯಾವುದೇ ಕಾಮಗಾರಿ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಶ್ರೀನಿವಾಸಪುರ ವೃತ್ತ ನಿರೀಕ್ಷಕರಿಗೆ ವಲಯ ಅರಣ್ಯಾಧಿಕಾರಿ ದೂರು ನೀಡಿದ್ದಾರೆ.
ಸರ್ಕಾರದ ಹಳೆಯ ಆದೇಶಗಳಂತೆ ಹೊಸಹುಡ್ಯ ಗ್ರಾಮದ ಸರ್ವೇ ನಂಬರ್ 1ರಲ್ಲಿನ 315.32 ಎಕರೆ ಹಾಗೂ ಸರ್ವೆ ನಂಬರ್ 2ರಲ್ಲಿ 113 ಎಕರೆ ಪ್ರದೇಶವನ್ನು ಜಿನಗಲಕುಂಟೆ ರಾಜ್ಯ ಅರಣ್ಯ ಪ್ರದೇಶವೆಂದು ಘೋಷಿಸಲಾಗಿದೆ. ಸರ್ವೆ ನಂಬರ್ 1ರಲ್ಲಿ ಆರು ಎಕರೆ, ಸರ್ವೇ ನಂಬರ್ 2ರಲ್ಲಿ 54.23 ಎಕರೆ ಸೇರಿ ಒಟ್ಟು 60.23 ಎಕರೆ ಅರಣ್ಯ ಜಮೀನನ್ನು ಕೆ.ಆರ್. ರಮೇಶ್ ಕುಮಾರ್ ಒತ್ತುವರಿ ಮಾಡಿಕೊಂಡಿರುವುದು ಸಾಬೀತಾಗಿದೆ. ಬೆಂಗಳೂರು ವೃತ್ತದ ಮೇಲ್ಮನವಿ ಪ್ರಾಧಿಕಾರ ವಿವಾದಿತ ಜಮೀನಿನ ಒತ್ತುವರಿ ತೆರವುಗೊಳಿಸುವಂತೆ ಆದೇಶ ಹೊರಡಿಸಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದ್ದು, ವಿವಾದಿತ ಅರಣ್ಯ ಜಮೀನಿನಲ್ಲಿ ನಡೆಸಲು ಉದ್ದೇಶಿಸಿರುವ ದೇವಾಲಯ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮ ತಡೆಯುವಂತೆ ದೂರು ನೀಡಲಾಗಿದೆ.

