HomeKarnataka4 ತಿಂಗಳಲ್ಲಿ 6 ಬಾರಿ ವಾಣಿಜ್ಯ ಸಿಲಿಂಡರ್ ದರ ಏರಿಕೆ: ಅಪ್ಪಳಿಸಲಿವೆ ಮತ್ತಷ್ಟು ಬೆಲೆ ಏರಿಕೆಯ...

4 ತಿಂಗಳಲ್ಲಿ 6 ಬಾರಿ ವಾಣಿಜ್ಯ ಸಿಲಿಂಡರ್ ದರ ಏರಿಕೆ: ಅಪ್ಪಳಿಸಲಿವೆ ಮತ್ತಷ್ಟು ಬೆಲೆ ಏರಿಕೆಯ ಹೊಡೆತ: ಸಿದ್ಧರಾಮಯ್ಯ

ನಾವು ಮೊದಲೇ ಎಚ್ಚರಿಕೆ ಕೊಟ್ಟಂತೆ ವಿಧಾನಸಭಾ ಚುನಾವಣೆಗಳು ಮುಗಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ಬೆಲೆಯೇರಿಕೆ ಮಾಡತೊಡಗಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು ಮೇ 1ರಿಂದ ಜಾರಿಗೆ ಬರುವಂತೆ ಏಕಾಏಕಿ ₹993 ಹೆಚ್ಚಳ ಮಾಡಿದೆ. ಒಟ್ಟಾರೆ 19 ಕೆಜಿಯ 1 ಸಿಲಿಂಡರ್‌ಗೆ ನಿನ್ನೆಯವರೆಗೆ ₹2,078.50ರಷ್ಟಿದ್ದ ದರ ಇದೀಗ ₹3,071.5ಗೆ ತಲುಪಿದೆ. ಚುನಾವಣೆ ಅವಧಿಯಲ್ಲಿ ಮೋದಿ ಸರ್ಕಾರವು ಉದ್ದೇಶಪೂರ್ವಕವಾಗಿ ವಾಣಿಜ್ಯ ಬಳಕೆಯ ಗ್ಯಾಸ್‌ ಬೆಲೆ ಏರಿಕೆಯನ್ನು ತಡೆದಿತ್ತು ಎಂಬುದಕ್ಕೆ ದಿಢೀರನೆ ಇಷ್ಟು ಪ್ರಮಾಣದಲ್ಲಿ ಏರಿಕೆ ಮಾಡಿರುವುದು ಸಾಕ್ಷಿಯಾಗಿದೆ ಎಂದು ಸಿಎಂ ಸಿದ್ಧರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ 4 ತಿಂಗಳ ಅವಧಿಯಲ್ಲಿ ಮೋದಿ ಸರ್ಕಾರ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ದರವನ್ನು 6 ಬಾರಿ ಏರಿಕೆ ಮಾಡಿದ್ದು, ಒಟ್ಟು ₹1,518 ಹೊರೆಯನ್ನು ಬಳಕೆದಾರರ ಮೇಲೆ ಹೊರಿಸಿದೆ. ಇದೊಂದು ರೀತಿಯಲ್ಲಿ ಅಧಿಕೃತ ಲೂಟಿಯೇ ಹೊರತು ಆಡಳಿತದ ಕ್ರಮವಲ್ಲ ಎಂದು ಟೀಕಿಸಿದ್ದಾರೆ.

ಆಗಾಗ ಜಾಗತಿಕ ಪರಿಸ್ಥಿತಿಗಳು ಬದಲಾಗುತ್ತಿರುತ್ತವೆ, ಇಂತಹ ಸಂದರ್ಭದಲ್ಲಿ ಭಾರತದ ನಾಗರಿಕರನ್ನು ಕಾಪಾಡುವುದು ಪ್ರಧಾನಿಯಾಗಿ ಮೋದಿಯವರ ಕರ್ತವ್ಯವಾಗಿದೆ. ಆದರೆ ಜನಸಾಮಾನ್ಯರನ್ನು ರಕ್ಷಿಸುವ ಬದಲು ಅವರ ಮೇಲೆಯೇ ಬೆಲೆ ಏರಿಕೆಯ ಹೊರೆ ಹೊರಿಸುವುದು ಅರ್ಥಹೀನವಾಗಿದೆ. ನಮ್ಮ ದೇಶದ ಆರ್ಥಿಕತೆಗೆ ವಿದೇಶಾಂಗ ನೀತಿಯು ಶ್ರೀರಕ್ಷೆಯಂತಿರಬೇಕು. ಆದರೆ ಮೋದಿ ಸರ್ಕಾರದ ಟೊಳ್ಳು ವಿದೇಶಾಂಗ ನೀತಿಯಿಂದಾಗಿ ಜನಸಾಮಾನ್ಯರು ಸಂಕಷ್ಟ ಅನುಭವಿಸುವಂತಾಗಿದೆ ಎಂದು ದೂರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಾಣಿಜ್ಯ ಗ್ಯಾಸ್‌ ದರ ಏರಿಕೆಯಿಂದ ಕೇವಲ ವ್ಯಾಪಾರಸ್ಥರು ಮಾತ್ರ ಸಂಕಷ್ಟಕ್ಕೆ ಒಳಗಾಗುವುದಿಲ್ಲ, ದೇಶದ ಪ್ರತಿಯೊಂದು ಮನೆಯ ಮೇಲೂ ದರ ಏರಿಕೆಯ ಪರಿಣಾಮ ಬೀರುತ್ತದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಸಣ್ಣಪುಟ್ಟ ಕ್ಯಾಂಟೀನ್‌ಗಳು ಹಾಗೂ ಕೆಟರಿಂಗ್‌ ಸೇವೆಗಳಿಗೆ ತಮ್ಮ ಆಹಾರ ಪದಾರ್ಥಗಳ ಮೇಲೆ ದರವನ್ನು ಹೆಚ್ಚಿಸುವುದು ಅನಿವಾರ್ಯವಾಗುತ್ತದೆ. ಇದರಿಂದ ಗ್ರಾಹಕರು ದೈನಂದಿನ ಊಟ-ಉಪಹಾರಗಳಿಗೆ ಹೆಚ್ಚು ಹಣಕೊಡುವ ಪರಿಸ್ಥಿತಿ ಬರುತ್ತದೆ. ನಗರದ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಮತ್ತು ಸಣ್ಣ ಉದ್ಯಮಗಳ ಮಾಲೀಕರು ಹೆಚ್ಚು ಸಂಕಷ್ಟ ಅನುಭವಿಸಬೇಕಾಗುತ್ತದೆ. ಒಂದು ಲೋಟ ಟೀ ಯಿಂದ ಒಂದು ಸರಳ ಊಟದವರೆಗೆ, ಎಲ್ಲವೂ ದುಬಾರಿಯಾಗುತ್ತದೆ ಎಂದಿದ್ದಾರೆ.  

ಕಾರ್ಮಿಕರ ದಿನದ ಕೊಡುಗೆ ಎಂಬಂತೆ ಮೋದಿಯವರು ವಾಣಿಜ್ಯ ಬಳಕೆಯ ಸಿಲಿಂಡರ್‌ ದರ ಏರಿಸುವ ಮೂಲಕ ಶ್ರಮಿಕ ವರ್ಗಕ್ಕೆ ಬರೆ ಎಳೆದಿದ್ದಾರೆ. ಒಂದೆಡೆ ದರಗಳು ದುಬಾರಿಯಾದರೆ, ಮತ್ತೊಂದೆಡೆ ಆದಾಯ ಕ್ಷೀಣಿಸುತ್ತಿದೆ. ದೈನಂದಿನ ಜೀವನ ಮತ್ತಷ್ಟು ದುಸ್ತರವಾಗುತ್ತಿದೆ. ಕಾರ್ಮಿಕರು ಕೇಂದ್ರ ಸರ್ಕಾರದ ಬಳಿ ಘನತೆಯ ಹಾಗೂ ನೆಮ್ಮದಿಯ ಬದುಕನ್ನು ಕಲ್ಪಿಸುವಂತೆ ಕೇಳಿದರೆ ಬೆಲೆಯೇರಿಕೆ ಮತ್ತು ಸಮರ್ಥನೆಯ ಉತ್ತರವನ್ನು ಕೊಡುತ್ತಿದೆ ಎಂದು ತಿಳಿಸಿದ್ದಾರೆ.

ಇದು ಕೇವಲ ಆರಂಭವಷ್ಟೇ, ಇಂತಹ ಮತ್ತಷ್ಟು ಬೆಲೆ ಏರಿಕೆಯ ಹೊಡೆತಗಳು ಅಪ್ಪಳಿಸಲಿವೆ, ಅದರ ಹೊರೆಯನ್ನು ನಾಗರಿಕರೇ ಹೊತ್ತುಕೊಳ್ಳುವಂತಾಗಲಿದೆ. ಇದು ಮೋದಿ ಮಾದರಿಯ ಆಡಳಿತವಾಗಿದೆ. ಚುನಾವಣೆಯಲ್ಲಿ ಜನರ ದಾರಿ ತಪ್ಪಿಸುವುದು, ಬಳಿಕ ಅವರ ಮೇಲೆ ಹೊರೆ ಹೊರಿಸುವುದು ಮೋದಿಯವರ ಸೂತ್ರವಾಗಿದೆ ಎಂದು ಸಿಎಂ ದೂರಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular