ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯ ಆರಂಭಿಸಿದ ನಟ ವಿಜಯ್ ನೇತೃತ್ವದ ಟಿವಿಕೆ (TVK) ಸರ್ಕಾರ, ಇಂದು ವಿಧಾನಸಭೆಯಲ್ಲಿ ನಡೆದ ಮಹತ್ವದ ವಿಶ್ವಾಸಮತ ಪರೀಕ್ಷೆಯಲ್ಲಿ 144 ಮತಗಳನ್ನು ಪಡೆಯುವ ಮೂಲಕ ಭರ್ಜರಿ ಜಯ ಸಾಧಿಸಿದೆ. ಎಐಎಡಿಎಂಕೆಯ 26 ಬಂಡಾಯ ಶಾಸಕರ ಬೆಂಬಲದೊಂದಿಗೆ ವಿಜಯ್ ತಮ್ಮ ಬಹುಮತವನ್ನು ಸಾಬೀತುಪಡಿಸಿದ್ದಾರೆ.
ಟಿವಿಕೆ (TVK) ಪಕ್ಷದ ವಿಜಯ್ ಅವರು 144 ಮತಗಳನ್ನು ಪಡೆಯುವ ಮೂಲಕ ವಿಶ್ವಾಸಮತ ಪರೀಕ್ಷೆಯಲ್ಲಿ ಗೆಲುವು ಸಾಧಿಸಿದ್ದಾರೆ. ಎಐಎಡಿಎಂಕೆಯ (AIADMK) 26 ಬಂಡಾಯ ಶಾಸಕರು ಕೂಡ ಟಿವಿಕೆ ಪರವಾಗಿ ಮತ ಚಲಾಯಿಸಿದ್ದಾರೆ. 22 ಶಾಸಕರು ಟಿವಿಕೆ ವಿರುದ್ಧ ಮತ ಹಾಕಿದರೆ, ಐವರು ತಟಸ್ಥರಾಗುಳಿದಿದ್ದಾರೆ.
ಟಿವಿಕೆ ಬೆಂಬಲಿಸಿದ 144 ಶಾಸಕರಲ್ಲಿ ಟಿವಿಕೆ ಮೈತ್ರಿಕೂಟದ 118 ಶಾಸಕರು (ಸಭಾಪತಿ ಮತ್ತು ಹೈಕೋರ್ಟ್‌ನಿಂದ ನಿರ್ಬಂಧಿಸಲ್ಪಟ್ಟ ಶಾಸಕರನ್ನು ಹೊರತುಪಡಿಸಿ), ಎಐಎಡಿಎಂಕೆಯ 26 ಶಾಸಕರು ಮತ್ತು ಮನ್ನಾರ್ಗುಡಿಯ ಒಬ್ಬ ಎಎಮ್‌ಎಂಕೆಯ (AMMK) ಶಾಸಕ ಸೇರಿದ್ದಾರೆ.ವಿಶ್ವಾಸಮತ ಪರೀಕ್ಷೆಯಲ್ಲಿ 26 ಎಐಎಡಿಎಂಕೆ ಶಾಸಕರು ಟಿವಿಕೆಯನ್ನು ಬೆಂಬಲಿಸಿದ್ದಾರೆ. ಎಐಎಡಿಎಂಕೆಯ ವಿಜಯಭಾಸ್ಕರ್ ಕೂಡ ಟಿವಿಕೆ ಪರವಾಗಿ ಮತ ಚಲಾಯಿಸಿದ್ದಾರೆ.
ವಿಜಯ್‌ಗೆ ಸಿಕ್ಕ ಮತಗಳು: 144 (ಪರ), 22 (ವಿರೋಧ), 5 (ತಟಸ್ಥ).
ಬಂಡಾಯದ ಬಿಸಿ: ಎಐಎಡಿಎಂಕೆಯ 26 ಶಾಸಕರು ಪಕ್ಷದ ವಿಪ್ ಉಲ್ಲಂಘಿಸಿ ವಿಜಯ್ ಪರ ಮತ ಚಲಾಯಿಸಿದ್ದಾರೆ.
ಡಿಎಂಕೆ ಬಹಿಷ್ಕಾರ: ಮತದಾನಕ್ಕೂ ಮುನ್ನವೇ ಉದಯನಿಧಿ ಸ್ಟಾಲಿನ್ ನೇತೃತ್ವದ ಡಿಎಂಕೆ ಶಾಸಕರು ಸದನದಿಂದ ಹೊರನಡೆದರು.
ಕುದುರೆಯ ವೇಗದಲ್ಲಿಕೆಲಸ ಮಾಡುತ್ತಿದ್ದೇವೆ’ ಎಂದ ಸಿಎಂ
ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ತಮ್ಮ ಸರ್ಕಾರಕ್ಕೆ ಬೆಂಬಲ ನೀಡಿದ ಎಲ್ಲಾ ಮಿತ್ರಪಕ್ಷಗಳಿಗೆ ಧನ್ಯವಾದ ಅರ್ಪಿಸಿದರು. ಜ್ಯೋತಿಷಿಯ ನೇಮಕಕ್ಕೆ ಸಂಬಂಧಿಸಿದಂತೆ ಡಿಎಂಡಿಕೆ (DMDK) ನಾಯಕಿ ಪ್ರೇಮಲತಾ ಅವರು ಹೇಳಿರುವುದನ್ನು ಪರಿಗಣಿಸುವುದಾಗಿ ಅವರು ತಿಳಿಸಿದರು. ಅಲ್ಲದೆ, ಹಿಂದಿನ ಸರ್ಕಾರದ ಎಲ್ಲಾ ಯೋಜನೆಗಳು ಮುಂದುವರಿಯಲಿವೆ ಎಂದು ಅವರು ಭರವಸೆ ನೀಡಿದರು.”ಇದು ಕುದುರೆ ವ್ಯಾಪಾರ ಮಾಡುವ ಸರ್ಕಾರವಲ್ಲ, ಬದಲಾಗಿ ಕುದುರೆಯ ವೇಗದಲ್ಲಿ ಮುನ್ನುಗ್ಗುವ ಸರ್ಕಾರ,” ಎಂದು ಅವರು ಮಾರ್ಮಿಕವಾಗಿ ನುಡಿದರು.

