ಕೃಷಿ ಲಾಭದಾಯಕವಾಗಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಬೆಳಗಾವಿ ತಾಲೂಕಿನ ಹುದಲಿ ಗ್ರಾಮದಲ್ಲಿ ಆಯೋಜಿಸಿದ್ದ ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭೂಮಿ ಜೀವದ ತೊಟ್ಟಿಲು, ಇಂತಹ ಜೀವದ ತೊಟ್ಟಿಲನ್ನು ಬಂಜೆ ಮಾಡಬಾರದು ಎಂದರು.
ರೈತರು ರಸಗೊಬ್ಬರ ಬಳಕೆಯನ್ನು ಕಡಿಮೆ ಮಾಡಬೇಕಾಗಿದೆ. ರಸಗೊಬ್ಬರ ಬಳಕೆಯಿಂದ ಹೆಚ್ಚಿನ ಇಳುವರಿ ಬರುತ್ತದೆ ಎಂಬ ತಪ್ಪು ಕಲ್ಪನೆಯಿಂದ ಹೊರಬರಬೇಕಾಗಿದೆ. ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದ್ದು ಪ್ರತಿಶತ 90 ಕೃಷಿ ಮೇಲೆಯೇ ಅವಲಂಬಿತವಾಗಿದೆ. ರೈತರಿಗೆ ಬೇಕಾದ ಸಹಾಯ ಮಾಡುವುದು ಸರ್ಕಾರಗಳ ಜವಾಬ್ದಾರಿಯಾಗಿದೆ ಎಂದರು.
ನೀರಿನ ನಿರ್ವಹಣೆ ಕುರಿತು ಪ್ರತಿಯೊಬ್ಬರು ತಿಳಿದುಕೊಂಡು ನೀರನ್ನು ಮಿತವಾಗಿ ಬಳಸಬೇಕು. ಈ ಕುರಿತು ಕೃಷಿ ಇಲಾಖೆ ಪ್ರತಿ ರೈತರ ಹತ್ತಿರ ಹೋಗಿ ಇಲಾಖೆಯಿಂದ ಪರಿಚಯಿಸಲಾಗುವ ಹೊಸ ತಳಿಗಳ ಕುರಿತು ಮಾಹಿತಿ ನೀಡಬೇಕು. ಕಳೆದ ಆಯವ್ಯಯಲ್ಲಿ ಘೋಷಿಸಿದಂತೆ ಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ರೈತರು ಕೃಷಿಯಲ್ಲಿ ತಂತ್ರಜ್ಞಾನ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯಲು ಮುಂದಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರಕಾರವು ಸಬ್ಸಿಡಿ ಮೂಲಕ ಹೊಸ ಯಂತ್ರೋಪಕರಣಗಳನ್ನು ವಿತರಿಸುತ್ತಿದೆ ಎಂದರು.
ರಾಜ್ಯದಲ್ಲಿಯೇ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ವ್ಯವಸಾಯ ಮಾಡಲಾಗುತ್ತಿದೆ. ಅಲ್ಲಿನ ರೈತರು ಕೃಷಿ ಇಲಾಖೆಯಿಂದ ಜಾರಿಯಲ್ಲಿರುವ ಸಾಕಷ್ಟು ಯೋಜನೆಗಳ ಲಾಭ ಪಡೆದು ಅಭಿವೃದ್ಧಿಪರ ಕೃಷಿ ಮಾಡುತ್ತಿದ್ದಾರೆ. ಕೃಷಿ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕ್ಷೇತ್ರಗಳಿಗೆ ಭೇಟಿ ನೀಡಿ ರೈತರಿಗೆ ಹೊಸ ಹೊಸ ತಂತ್ರಜ್ಞಾನ ಬಳಕೆ, ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವ ಕುರಿತು ಜಾಗೃತಿ ಮೂಡಿಸಬೇಕು. ಕೃಷಿಯನ್ನು ಲಾಭದಾಯಕವಾಗಿಸಿ ರೈತರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಲು ರಾಜ್ಯ ಸರ್ಕಾರ ಸದಾ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.

